Districts
ಶಾಸಕರ ಸೀರೆ ಬೇಡ: ಕೊಪ್ಪಳದಲ್ಲಿ ಮಹಿಳೆಯರಿಂದ ಸೀರೆ ವಾಪಸ್ ಚಳುವಳಿ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಎರಡು ತಾಲೂಕು ಘೋಷಣೆಯಾಗಿದ್ದು, ಹೋಬಳಿ ಹಂಚಿಕೆ ತಲೆ ನೋವಾಗಿದೆ. ರೈಸ್ ಟೆಕ್ನಾಲಜಿ ಪಾರ್ಕ್ ಹೊಂದಿರುವ ನವಲಿ ಕನಕಗಿರಿ ತಾಲೂಕಿನಲ್ಲೇ ಉಳಿಸಬೇಕು ಎಂಬ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ.
ನವಲಿ ಘೋಷಿತ ಕಾರಟಗಿ ತಾಲೂಕಿಗೆ ಸೇರಿಸಲು ಶಾಸಕ ಶಿವರಾಜ ತಂಗಡಗಿ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಕನಕಗಿರಿ ಮಹಿಳೆಯರು ಇದೀಗ ಸೀರೆ ವಾಪಸ್ ಚಳುವಳಿ ಆರಂಭಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಶಾಸಕ ಶಿವರಾಜ ತಂಗಡಗಿ ಮಹಿಳಾ ದಿನಾಚರಣೆ ನೆಪದಲ್ಲಿ ಕನಕಗಿರಿ ಕ್ಷೇತ್ರದ ಎಲ್ಲ ಮಹಿಳೆಯರಿಗೂ ಸೀರೆಯನ್ನು ಹಂಚಿದ್ದರು. ಶಾಸಕರ ಈ ನಡೆ ರಾಜಕೀಯ ಗಿಮಿಕ್ ಎಂದೇ ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ ಇದೀಗ ಶಾಸಕ ಶಿವರಾಜ ತಂಗಡಗಿ ಕಾರಟಗಿ ಭಾಗಕ್ಕೆ ನಿಷ್ಠೆ ತೋರಿಸುತ್ತಿದ್ದು, ಕನಕಗಿರಿ ನಿರ್ಲಕ್ಷ ಮಾಡಿದ್ದಾರೆ. ತಾವು ಕಾರಟಗಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದರಿಂದ ಕನಕಗಿರಿ ವಿಧಾನಸಭೆ ಕ್ಷೇತ್ರವನ್ನೂ ತೆಗೆದು ಕಾರಟಗಿ ಕ್ಷೇತ್ರ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಕನಕಗಿರಿ ತಾಲೂಕು ಹೋರಾಟ ಸಮಿತಿ ಹೋರಾಟ ತೀವ್ರಗೊಳಿಸಿದೆ.
ಹೋರಾಟದ ಭಾಗವಾಗಿ ಕನಕಗಿರಿ ಮಹಿಳೆಯರು ಶಾಸಕ ಶಿವರಾಜ ತಂಗಡಗಿ ಕೊಟ್ಟಿರುವ ಸೀರೆಗಳನ್ನು ವಾಪಸ್ ಕಳುಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
