ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ಯೋಜನೆಯನ್ನು ವಿರೋಧಿಸಿ ಜೆಡಿಎಸ್ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಜೂನ್ 21ರ ಭಾನುವಾರ ಬೃಹತ್ ಪಾದಯಾತ್ರೆ ನಡೆಯಲಿದೆ.
ಅಂಚಿಪುರ ಗ್ರಾಮದಿಂದ ಹೊಸೂರುವರೆಗೆ 8 ಗ್ರಾಮಗಳ ಮೂಲಕ ಈ ಪಾದಯಾತ್ರೆ ಸಾಗಲಿದ್ದು, ಸಾವಿರಾರು ರೈತರು ಭಾಗವಹಿಸಲಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಅಂಚಿಪುರದಿಂದ ಆರಂಭವಾಗುವ ಪಾದಯಾತ್ರೆಯು ಅಂಚಿಪುರ ಕಾಲೊನಿ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಹಾಗೂ ಹೊಸೂರುವರೆಗೂ ಸಾಗಲಿದ್ದು, ಹೊಸೂರಿನಲ್ಲಿ ಬಹಿರಂಗ ಸಭೆಯೊಂದಿಗೆ ಸಮಾರೋಪಗೊಳ್ಳಲಿದೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್‌ಗೆ ಜಾಗ ಕೊಟ್ಟ ರೈತರಿಗೆ ಚೆಕ್ ವಿತರಿಸಿದ ಸರ್ಕಾರ
This isn’t just a march. It’s a fight for our survival.
Our land is our mother. It’s the sweat of our farmers and the blood of our workers. Today, under the guise of a “Township,” a massive ₹33,562 crore real estate scam is trying to snatch away what is rightfully ours. We… pic.twitter.com/0WZdGJV44y
— Nikhil Kumar (@Nikhil_Kumar_k) June 17, 2026
ನಮ್ಮ ಭೂಮಿ ನಮ್ಮ ಹಕ್ಕು. ರೈತರ ಬದುಕು ಮತ್ತು ಕೃಷಿ ಚಟುವಟಿಕೆಗಳನ್ನು ಉಳಿಸಲು ಈ ಹೋರಾಟ. ಅಂಚಿಪುರ, ಬನ್ನಿಗಿರಿ, ಗೊಲ್ಲಹಳ್ಳಿ ಸೇರಿದಂತೆ 8 ಗ್ರಾಮಗಳ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಬಿಡದಿ ಟೌನ್‌ಶಿಪ್ ಯೋಜನೆಯಡಿ ಅಂಚಿಪುರ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 518 ಎಕರೆ ಕೃಷಿ ಭೂಮಿಗೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಜೊತೆಗೆ ಹೆಚ್ಚುವರಿ 7,481 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ 755 ರೈತ ಕುಟುಂಬಗಳು, ಮಾಸಿಕ 6 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಹೈನುಗಾರಿಕೆ, ರೇಷ್ಮೆ-ತೋಟಗಾರಿಕೆ ಹಾಗೂ 10 ಲಕ್ಷ ಹಸಿರು ವೃಕ್ಷಗಳಿಗೆ ಧಕ್ಕೆಯಾಗಲಿದೆ ಎಂದು ನಿಖಿಲ್ ಹೇಳಿದ್ದಾರೆ.
ಕಳೆದ 450 ದಿನಗಳಿಂದ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಯೋಜನೆಯಿಂದ ರೈತರ ಬದುಕಿಗೆ ತೊಂದರೆಯಾಗಲಿದ್ದು, ನಮ್ಮ ಈ ಹೋರಾಟ ಪಕ್ಷಾತೀತವಾಗಿ ನಡೆಯಲಿದ್ದು, ಸರ್ಕಾರದ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನಮ್ಮ ನೆಲದ ಮೇಲೆ ನಮ್ಮ ಅಧಿಕಾರ. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು. ರೈತರಿಗೆ ನ್ಯಾಯ ಬೇಕು. ಜೂನ್ 21ರಂದು ಅಂಚಿಪುರದಿಂದ ಹೊಸೂರಿಗೆ ನಡೆಯುವ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ನಿಖಿಲ್ ಕರೆ ನೀಡಿದ್ದಾರೆ.
ಪಾದಯಾತ್ರೆಗೆ ವಿವಿಧ ರೈತ ಸಂಘಟನೆಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಬೆಂಬಲ ಸೂಚಿಸಿದ್ದು, ನಮ್ಮ ಪಾದಯಾತ್ರೆಯಲ್ಲಿ ಭಾಗಿಯಾಗಿಯಾಗಲಿದ್ದಾರೆ ಎಂದರು. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ | 7,481 ರಿಂದ 9,600 ಎಕರೆ ಸ್ವಾಧೀನಕ್ಕೆ ಸಂಚು – ಸಿಎಸ್‌ಗೆ ಜೆಡಿಎಸ್ ದೂರು
