– ಸಾಂಕೇತಿಕವಾಗಿ 7 ಮಂದಿಗೆ ಚೆಕ್ ವಿತರಿಸಿದ ಶಾಸಕ ಬಾಲಕೃಷ್ಣ
– ಜಮೀನಿನಲ್ಲಿ ಬೆಳೆದ ಬೆಳೆಗೂ ಪರಿಹಾರದ ಹಣ ನಿಗದಿ
ರಾಮನಗರ: ಬಿಡದಿ ಟೌನ್‌ಶಿಪ್‌ಗೆ (Bidadi Township) ಜಾಗ ಕೊಟ್ಟ ರೈತರಿಗೆ ರಾಜ್ಯ ಸರ್ಕಾರ ಪರಿಹಾರದ ಚೆಕ್ ವಿತರಣೆ ಮಾಡಿದೆ.
ಸಾಂಕೇತಿಕವಾಗಿ 7 ಮಂದಿಗೆ ಶುಕ್ರವಾರ ಶಾಸಕ ಹೆಚ್.ಸಿ.ಬಾಲಕೃಷ್ಣ (H.C.Balakrishna) ಚೆಕ್ ವಿತರಣೆ ಮಾಡಿದರು. ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜು ನೇತೃತ್ವದಲ್ಲಿ ಚೆಕ್ ವಿತರಿಸಲಾಯಿತು. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ | 7,481 ರಿಂದ 9,600 ಎಕರೆ ಸ್ವಾಧೀನಕ್ಕೆ ಸಂಚು – ಮುಖ್ಯ ಕಾರ್ಯದರ್ಶಿಗೆ ಜೆಡಿಎಸ್ ದೂರು
ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಬಾಲಕೃಷ್ಣ, ಒಂದು ಎಕರೆಗೆ 2 ಕೋಟಿ 30 ಲಕ್ಷದ 7 ಸಾವಿರ ರೂ. ಪರಿಹಾರ ಹಣ ನೀಡಲಾಗುವುದು. ಜಮೀನಿನಲ್ಲಿ ಬೆಳೆದ ಬೆಳೆಗೂ ಪರಿಹಾರದ ಹಣ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದರು.

1 ತೆಂಗಿನಮರಕ್ಕೆ 40,446 ರೂ. ಮಾವಿನ ಗಿಡ 62,000 ರೂ., ಅಡಿಕೆ ಮರಕ್ಕೆ 7,440 ರೂ., ಬಾಳೆ ಎಕರೆಗೆ 10.86 ಲಕ್ಷ ರೂ., ರೇಷ್ಮೆಗೆ 14 ಲಕ್ಷ ಪ್ರತಿ ಎಕರೆಗೆ, ಹಲಸು ಎಕರೆಗೆ 42,750ರೂ., ಹುಣಸೆ ಎಕರೆಗೆ 53,310ರೂ., ಸೀಬೆ ಎಕರೆಗೆ 3,940 ರೂ., ಸಪೋಟ ಎಕರೆಗೆ 43,166 ರೂ. ಹಣ ನಿಗದಿ ಮಾಡಲಾಗಿದೆ ಎಂದು ಹೇಳಿದ್ದರು.
ಯೋಜನೆ ವ್ಯಾಪ್ತಿಯಲ್ಲಿ ಕೇವಲ ಒಂದು ಗುಂಟೆ ಜಮೀನು ಇರುವ ಮಾಲೀಕರಿಗೆ ವಿಶೇಷ ಪರಿಹಾರ ನೀಡಲಾಗುವುದು. 1 ಗುಂಟೆ ಜಮೀನು ಕಳೆದುಕೊಳ್ಳುವ ರೈತರಿಗೆ 5 ಲಕ್ಷ ಇಡಿಗಂಟು ನೀಡಲು ಜಿಬಿಡಿಎ ಮುಂದಾಗಿದೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯ ಗ್ರಾಮಗಳಿಗೆ ಬಿಜೆಪಿ ನಿಯೋಗ ಭೇಟಿ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಈಗಾಗಲೇ 9 ಗ್ರಾಮಗಳ ಪೈಕಿ 3 ಗ್ರಾಮಗಳ 519 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ನೋಟಿಸ್ ಪಡೆದು ಒಪ್ಪಿಗೆ ನೀಡಿರುವ ರೈತರಿಗೆ ಭೂ ಪರಿಹಾರದ ಚೆಕ್ ವಿತರಣೆ ಮಾಡಲಾಗುತ್ತಿದೆ.
