ಬೆಂಗಳೂರು: ಟೌನ್‌ಶಿಪ್ (Bidadi Township) ನೆಪದಲ್ಲಿ ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಜೆಡಿಎಸ್ (JDS) ಪಕ್ಷವು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದೆ.
ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ ರಮೇಶ್ ಗೌಡ (H.M Ramesh Gowda) ಅವರ ನೇತೃತ್ವದಲ್ಲಿ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾದ ಪಕ್ಷದ ನಿಯೋಗವು, ಬಿಡದಿ ಭಾಗದಲ್ಲಿ ನೀರಾವರಿ ಮತ್ತು ಕೃಷಿಯೋಗ್ಯ ಫಲವತ್ತಾದ ಭೂಮಿ ಇದೆ. ಅದನ್ನು ರಿಯಲ್ ಎಸ್ಟೇಟ್ ಉದ್ದೇಶದಿಂದ ಟೌನ್‌ಶಿಪ್ ಯೋಜನೆಗೆ ಕಸಿದುಕೊಳ್ಳುವುದು ಅಕ್ಷ್ಯಮ್ಯ ಎಂದು ಜೆಡಿಎಸ್ ನಿಯೋಗ ಕಿಡಿಕಾರಿದೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯ ಗ್ರಾಮಗಳಿಗೆ ಬಿಜೆಪಿ ನಿಯೋಗ ಭೇಟಿ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವ ಹಾಗೂ ಮುಂದಿನ ತಿಂಗಳು ಬೃಹತ್ ಪ್ರಮಾಣದಲ್ಲಿ ಭೂಸ್ವಾಧೀನ ವಿಸ್ತರಿಸಲು ಹೊರಟಿರುವ ಸರ್ಕಾರದ ನಿಲುವನ್ನು ಖಂಡಿಸಿ, ಹಾಗೂ ಭೂಸ್ವಾಧೀನ ಯೋಜನೆಯನ್ನು ಕೂಡಲೇ ಕೈ ಬಿಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಇಂದು,..@JanataDal_S pic.twitter.com/TKKoAjD9HJ
— H M Ramesh Gowda (@Rameshg89832595) June 19, 2026
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹೆಚ್.ಎಂ. ರಮೇಶ್ ಗೌಡ ಅವರು, ಈಗಾಗಲೇ ಮೊದಲ ಹಂತದ ಭೂಸ್ವಾದಿನದ ನೋಟಿಫಿಕೇಶನ್ ಹೊರಟಿಸಿರುವ ರಾಜ್ಯ ಸರ್ಕಾರವು ಸಂಪೂರ್ಣವಾಗಿ ರೈತ ವಿರೋಧಿ ನಿಲುವು ತಳೆದಿದೆ. ಮುಂದಿನ ತಿಂಗಳು ಬೃಹತ್ ಪ್ರಮಾಣದಲ್ಲಿ ಭೂಸ್ವಾಧೀನ ವಿಸ್ತರಿಸಲು ಹೊರಟಿರುವ ಸರ್ಕಾರದ ನಿಲುವು ಹಾಗೂ ಭೂಸ್ವಾಧೀನ ಯೋಜನೆಯನ್ನು ಕೂಡಲೇ ಕೈ ಬಿಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮನವಿ ಪತ್ರವನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಸುಮಾರು 498 ಎಕರೆಗೂ ಹೆಚ್ಚು ಫಲವತ್ತಾದ ಭೂಮಿಯನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಇದರಿಂದ ಸುಮಾರು 750 ಕುಟುಂಬಗಳು ಬೀದಿಪಾಲಾಗುತ್ತಿವೆ. ಈ ಪೈಕಿ 614 ಅಂದರೆ 81% ರೈತರು ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರರು ಆಗಿದ್ದಾರೆ. ಒಪ್ಪತ್ತಿನ ಊಟಕ್ಕಾಗಿ ಕಷ್ಟಪಡುತ್ತಿರುವ ಶ್ರಮಜೀವಿಗಳು ಅವರಾಗಿದ್ದಾರೆ. ಅರ್ಧ ಎಕರೆ, ಕಾಲು ಎಕರೆ ಭೂಮಿ ಹೊಂದಿರುವ ಅವರು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಅಂತಹ ರೈತರನ್ನು ಒಕ್ಕಲಿಸುವುದು ಅಮಾನವೀಯ ಅವರು ಕಿಡಿಕಾರಿದರು.
ಇದಲ್ಲದೆ ಮುಂದಿನ ತಿಂಗಳು ಸುಮಾರು 7481ರಿಂದ 9,600 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಸಂಚು ರೂಪಿಸಿದೆ. ರೈತರು ಭೂಮಿ ಕೊಡಲು ಇಷ್ಟಪಡುತ್ತಿಲ್ಲ. ಹೀಗಾಗಿ ಸರ್ಕಾರವೇ ಕೋರ್ಟ್ ನಲ್ಲಿ ಪರಿಹಾರ ಹಣವನ್ನು ಜಮೆ ಮಾಡಿ ಭೂಮಿಯನ್ನು ಕಸಿದುಕೊಳ್ಳಲು ಹುನ್ನಾರ ನಡೆಸಿದೆ. ಇದರಿಂದ ಸಾವಿರಾರು ರೈತರು ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಭೂಮಿಯನ್ನು ಕಸಿದುಕೊಳ್ಳುತ್ತಿರುವ ಭಾಗವು ಹೈನುಗಾರಿಕೆಯ ಸಮೃದ್ಧ ಜಾಗವಾಗಿದ್ದು, ಮಾಸಿಕ ಸುಮಾರು 6 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ಬೆಂಗಳೂರು ಡೇರಿಗೆ ಪೂರೈಕೆ ಮಾಡುತ್ತಿದೆ. ಭೂಮಿ ರಿಯಲ್ ಎಸ್ಟೇಟ್ ಕುಳಗಳ ಪಾಲಾದರೆ ಅಷ್ಟೂ ಹಾಲಿನ ಉತ್ಪಾದನೆ ನಿಂತು ಹೋಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್, ಮೈತ್ರಿಪಕ್ಷಗಳ ನಡುವೆ ಬಿಡದಿ ಟೌನ್‌ಶಿಪ್ ಜಟಾಪಟಿ – ಪೋಸ್ಟರ್ ವಾರ್
