ಚಿಕ್ಕಬಳ್ಳಾಪುರ: ವರ್ಕ್ ಫ್ರಂ ಹೋಮ್ (Work From Home Fraud) ಹೆಸರಿನಲ್ಲಿ ಜನರಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಿರಣ್ ಮತ್ತು ಪತ್ನಿ ಆರತಿ ಬಂಧಿತ ಆರೋಪಿಗಳು. ಇಬ್ಬರೂ ಸೇರಿಕೊಂಡು ಕಾಳಿಕಾ ದೇವಿ ಎಂಟರ್ ಪ್ರೈಸಸ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದರು. ಆರೋಪಿಗಳು ದೇವನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಸಲಿಂಗ ಪ್ರೀತಿಗೆ ಕುಟುಂಬದ ವಿರೋಧ; ಮನನೊಂದು ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಯುವತಿಯರು
ಸಾವಿರಾರು ಜನರಿಗೆ ಮನೆಗೆ ಕೆಲಸ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಕೊಡುವುದಾಗಿ ರೀಲ್ಸ್ ಮಾಡಿದ್ದರು. ಜನರಿಂದ ಲಕ್ಷ ಲಕ್ಷ ಹಣ ಡೆಪಾಸಿಟ್ ಮಾಡಿಸಿಕೊಂಡು ವಂಚಿಸಿ ತಲೆಮರೆಸಿಕೊಂಡಿದ್ದರು.
ಒಬ್ಬೊಬ್ಬರಿಂದ 2 ಲಕ್ಷದಿಂದ 20 ಲಕ್ಷದವರೆಗೂ ಹಣ ಡೆಪಾಸಿಟ್ ಮಾಡಿಸಿಕೊಂಡಿದ್ದರು. ಮೇಣದ ಬತ್ತಿ, ಡ್ರೈ ಫ್ರೂಟ್ಸ್, ಅಗರಬತ್ತಿ ಪ್ಯಾಕಿಂಗ್ ಕೆಲಸದ ಹೆಸರಲ್ಲಿ ಭಾರಿ ವಂಚನೆ ಎಸಗಿದ್ದರು. ಕಚ್ಚಾ ಪದಾರ್ಥಗಳ ಪ್ಯಾಕಿಂಗ್‌ಗೆ ಒಂದು ತಿಂಗಳಿಗೆ ಒಂದು ಲಕ್ಷ ಡೆಪಾಸಿಟ್ ಮಾಡಿದರೆ 23 ಸಾವಿರ ಹಣ ಕೊಡುವುದಾಗಿ ನಂಬಿಸಿದ್ದರು. ದಂಪತಿ ಮಾತು ನಂಬಿ ಜನರು ಸಾಲ ಸೂಲ ಮಾಡಿ ಲಕ್ಷ ಲಕ್ಷ ಹಣ ಡೆಪಾಸಿಟ್ ಮಾಡಿದ್ದರು. ಇದನ್ನೂ ಓದಿ: ಕರ್ತವ್ಯಕ್ಕೆ ತೆರಳಲು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ BEO ನಿಧನ
ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ, ಕೋಲಾರ ಸೇರಿದಂತೆ ಹಲವು ಕಡೆ ವಂಚನೆ ಮಾಡಿದ್ದರು. ಹಣ ಕಟ್ಟಿದವರು ಕೆಲಸವೂ ಇಲ್ಲ, ಹಣವು ಇಲ್ಲದೆ ಕಳೆದ ಕೆಲ ತಿಂಗಳಿಂದ ಕಂಗಾಲಾಗಿದ್ದಾರೆ. ಜನರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಪೊಲೀಸರು ಖತರ್ನಾಕ್ ದಂಪತಿಗಳನ್ನು ಬಂಧಿಸಿದ್ದಾರೆ. ಜನರಿಂದ ಪಡೆದ ಕೋಟಿ ಕೋಟಿ ಹಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.



