– ಇರಾನ್ ವಿರುದ್ಧ ಯುದ್ಧ ಶುರುವಾದ ನಂತರ ಅಮೆರಿಕ ಮೊದಲ ಭೇಟಿ
– ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ
ವಾಷಿಂಗ್ಟನ್: ಫ್ಲೋರಿಡಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ (G20 Summit) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಡಿಸೆಂಬರ್‌ನಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಜಿ-20 ಶೃಂಗಸಭೆಯು ಡಿಸೆಂಬರ್ 14 ಮತ್ತು 15 ರಂದು ಫ್ಲೋರಿಡಾದಲ್ಲಿ ನಡೆಯಲಿದೆ. ಜಿ-20 ಸಭೆಯ ಅಂಗವಾಗಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನ ಒಳಗೊಂಡ ಕ್ವಾಡ್ ನಾಯಕರ ಶೃಂಗಸಭೆಯನ್ನು ನಡೆಸುವ ಕುರಿತೂ ಸಿದ್ಧತೆಗಳು ನಡೆಯುತ್ತಿವೆ.

ಈ ಭೇಟಿ ವೇಳೆ ʻಕ್ವಾಡ್ʼ (Quad) ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಯುವ ನಿರೀಕ್ಷೆಯೂ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ (America) ಭೇಟಿಯ ಕುರಿತು ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಸ್ಪಷ್ಟನೆ ಬಂದಿಲ್ಲ. ಆದಾಗ್ಯೂ ಶೃಂಗ ಸಭೆಯಲ್ಲಿ ಮೋದಿ ಅವರ ಸಂಭಾವ್ಯ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಸಿದ್ಧತೆಗಳು ನಡೆಯುತ್ತಿವೆ. ಅಧಿಕೃತ ವೇಳಾಪಟ್ಟಿ ಇನ್ನಷ್ಟೇ ಸಿದ್ಧವಾಗಬೇಕಿದೆ. ಅಮೆರಿಕ ಬಳಿಕ ಕೆನಡಾಗೂ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹಿಂದೆಯೇ ಸುಳಿವುಕೊಟ್ಟಿದ್ದ ರಾಯಭಾರಿ ಸೆರ್ಗಿಯೊ
ಕೆಲ ದಿನಗಳ ಹಿಂದೆಯಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್, ಪ್ರಧಾನಿ ಮೋದಿ ಅವರನ್ನು ಅಮೆರಿಕಕ್ಕೆ ಮತ್ತೆ ಸ್ವಾಗತಿಸುವುದಾಗಿ ಹೇಳಿದ್ದರು. ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದರು.

ದ್ವಿಪಕ್ಷೀಯ ಮಾತುಕತೆ ಮೇಲೆ ಕಣ್ಣು
ಅಮೆರಿಕ – ಇರಾನ್ ಯುದ್ಧ ಶುರುವಾದ ಬಳಿಕ ಪ್ರಧಾನಿ ಅವರು ಅಮೆರಿಕಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ. ಇದೇ ವೇಳೆ ಹಾರ್ಮುಜ್ ಜಲಸಂಧಿ ಹಾಗೂ ಶೇ.100 ಸುಂಕ ವಿಧಿಸುವ ಬಿಲ್ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

