– ಆಡಿಯೋ ಬಾಂಬ್ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಾ?
– ಹೊಸ ಕಾರ್ಡ್ ಪ್ಲೇ ಮಾಡಿದ್ರಾ ಎಸ್.ಟಿ ಸೋಮಶೇಖರ್?
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ vs ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುತ್ತಿದೆಯಾ ಎಂಬ ಚರ್ಚೆ ಶುರುವಾಗಿದೆ.
ದೇಶವೇ ಅಲ್ಲೋಲ ಕಲ್ಲೋಲವಾಗುವಂತಹ ಸುದ್ದಿ ಹಾಗೂ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ʻಆಡಿಯೋ ಬಾಂಬ್ʼ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ಕುಮಾರಸ್ವಾಮಿ ಅವರು ದಾಖಲೆಗಳನ್ನ ಬಿಡುಗಡೆ ಮಾಡುವ ಮುನ್ನವೇ, ಅದರ ಕುರಿತಾದ ಮಾಹಿತಿ ಅಥವಾ ಆಡಿಯೋ ಸೋರಿಕೆಯಾಯಿತಾ ಎಂಬ ಪ್ರಶ್ನೆಯೂ ಎದುರಾಗಿದೆ.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಶಾಸಕ ಎಸ್.ಟಿ ಸೋಮಶೇಖರ್ (ST Somashekar) ನೀಡಿರುವ ಹೇಳಿಕೆ ಮತ್ತಷ್ಟು ಸಸ್ಪೆನ್ಸ್ಗೆ ಕಾರಣವಾಗಿದೆ. ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಬಹುದು ಎಂಬ ಸುಳಿವಿನ ಬೆನ್ನಲ್ಲೇ ಸೋಮಶೇಖರ್ ನೀಡಿರುವ ಹೇಳಿಕೆಯ ಹಿಂದಿನ ಉದ್ದೇಶವೇನು ಎಂಬ ಚರ್ಚೆ ಕೂಡ ಕುತೂಹಲ ಕೆರಳಿಸಿದೆ.
ಹೆಚ್.ಡಿ. ಕುಮಾರಸ್ವಾಮಿ ಅವರು, ಡಿ.ಕೆ. ಶಿವಕುಮಾರ್ ಅವರ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸೋಮಶೇಖರ್ ಆರೋಪಿಸಿದ್ದಾರೆ.

ಹಾಗಾದ್ರೆ ಸೋಮಶೇಖರ್ ದಿಢೀರ್ ಹೇಳಿಕೆ ನೀಡಿದ್ದು ಯಾಕೆ? ಸೋಮಶೇಖರ್ ಅವರಿಗೆ ಸರ್ಕಾರದ ಕಡೆಯಿಂದ ಯಾವುದಾದರೂ ಮಾಹಿತಿ ಸಿಕ್ಕಿದೆಯಾ? ಅಥವಾ ಆಡಿಯೋ ಬಿಡುಗಡೆಗೂ ಮುನ್ನವೇ ಅದರ ಪರಿಣಾಮ ಕಡಿಮೆ ಮಾಡುವ ರಾಜಕೀಯ ತಂತ್ರವೇ ಇದು? ಇದೆಲ್ಲದಕ್ಕಿಂತ ಮುಖ್ಯವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ಇರುವುದಾಗಿ ಹೇಳಲಾಗುತ್ತಿರುವ ಆಡಿಯೋ ಯಾವುದು? ಕುಮಾರಸ್ವಾಮಿ ಬಳಿ ಪ್ರಭಾವಿ ನಾಯಕನ ಆಡಿಯೋ ನಿಜವಾಗ್ಲೂ ಇದ್ಯಾ? ಆ ಆಡಿಯೋ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ್ದಾ? ಅಥವಾ ಬೇರೆ ಯಾವುದೇ ನಾಯಕರಿಗೆ ಸಂಬಂಧಿಸಿದ್ದಾ? ಅನ್ನೋದು ಪ್ರಮುಖ ಪ್ರಶ್ನೆಯಾಗಿವೆ.
ಆಡಿಯೋ ನಿಜವಾಗಿಯೂ ಬಿಡುಗಡೆಯಾದರೆ, ಅದರಲ್ಲಿರುವ ಅಂಶಗಳೇನು ಎಂಬ ಕುತೂಹಲವೂ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ವಿಜಯದಶಮಿ ಸಂದರ್ಭದಲ್ಲಿ ದಾಖಲೆಗಳನ್ನ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರೆ, ಅದಕ್ಕೂ ಮುನ್ನವೇ ಆಡಿಯೋ ಬಿಡುಗಡೆಯಾಗುತ್ತದೆಯಾ ಎಂಬ ಪ್ರಶ್ನೆ ಎದುರಾಗಿದೆ. ಇದರೊಂದಿಗೆ, ತಮ್ಮ ವಿರುದ್ಧ ಕೇಳಿಬಂದಿರುವ ‘ಹಿಟ್ ಅಂಡ್ ರನ್’ ಆರೋಪಗಳಿಗೆ ದಾಖಲೆಗಳ ಮೂಲಕ ಉತ್ತರ ನೀಡಲು ಕುಮಾರಸ್ವಾಮಿ ಮುಂದಾಗುತ್ತಾರಾ? ಎಂಬ ಚರ್ಚೆಯೂ ನಡೆಯುತ್ತಿದೆ.
ಸದ್ಯಕ್ಕೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದ್ದು, ಕುಮಾರಸ್ವಾಮಿ ಅವರ ಮುಂದಿನ ನಡೆ ಮೇಲೆ ರಾಜ್ಯ ರಾಜಕಾರಣದ ಗಮನ ನೆಟ್ಟಿದೆ.

