ತಿರುವನಂತಪುರಂ: ಕೌಲಾಲಂಪುರದಿಂದ ಕೊಚ್ಚಿಗೆ (Kochi) ಹೊರಟಿದ್ದ ಬಾಟಿಕ್ ಏರ್ ವಿಮಾನ ರಾತ್ರಿ ಇಳಿಯುವ ಕೆಲವೇ ನಿಮಿಷಗಳ ಮೊದಲು ಕೇರಳದ (Kerala) ವ್ಯಕ್ತಿಯೊಬ್ಬ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಪ್ರಯತ್ನಿಸಿದ ಘಟನೆ ನಡೆದಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ.
ಆರೋಪಿಯನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೂತನಾಡ್ ನಿವಾಸಿ 34 ವರ್ಷದ ಜಮ್ಶೀರ್ ಅಥಾನಿಕ್ಕಲ್ ಎಂದು ಗುರುತಿಸಲಾಗಿದ್ದು, ತುರ್ತು ನಿರ್ಗಮನದ ಪಕ್ಕದಲ್ಲಿರುವ ಕಿಟಕಿಯ ಸೀಟಿನಲ್ಲಿ ಕುಳಿತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: EMI ಕಟ್ಟಿಲ್ಲ ಅಂತ ರಾತ್ರಿ ಕರೆ ಮಾಡೋ ಹಾಗಿಲ್ಲ; ಸಾಲ ವಸೂಲಿಗೆ RBI ಹೊಸ ರೂಲ್ಸ್
ವಿಮಾನವು ಕೊಚ್ಚಿಯಲ್ಲಿ ಇಳಿಯಲು ಮುಂದಾದಾಗ, ಅಥಾನಿಕ್ಕಲ್ ಇದ್ದಕ್ಕಿದ್ದಂತೆ ಎದ್ದು ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಯತ್ನಿಸಿದ್ದಾನೆ. ಕ್ಯಾಬಿನ್ ಸಿಬ್ಬಂದಿ ಮತ್ತು ತನ್ನನ್ನು ತಡೆಯಲು ಬಂದ ಸಹ ಪ್ರಯಾಣಿಕರಿಗೂ ಆತ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ರಾತ್ರಿ 11:30 ರ ಸುಮಾರಿಗೆ ವಿಮಾನವು ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವವರೆಗೂ ಪ್ರಯಾಣಿಕರು ಮತ್ತು ಸಿಬ್ಬಂದಿ, ಆರೋಪಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಟಿಕ್ ಏರ್‌ನ ಭದ್ರತಾ ತಂಡದ ದೂರಿನ ಮೇರೆಗೆ, ಸಿಐಎಸ್‌ಎಫ್ ಸಿಬ್ಬಂದಿ ವಿಮಾನ ಇಳಿದ ತಕ್ಷಣ ಆತನನ್ನು ವಶಕ್ಕೆ ತೆಗೆದುಕೊಂಡು ನಂತರ ನೆಡುಂಬಸ್ಸೆರಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಕುರಿತು ಸರ್ವಪಕ್ಷ ಸಭೆಯ ಅಗತ್ಯವಿಲ್ಲ, ಕೀಳುಮಟ್ಟದ ರಾಜಕೀಯ ಬೇಡ: ಉದಯನಿಧಿಗೆ ತ.ನಾಡು ಸಿಎಂ ತರಾಟೆ
ವಿಮಾನಕ್ಕೆ ಹಾನಿ ಮಾಡಲು ಯತ್ನಿಸಿದ, ಕ್ರಿಮಿನಲ್ ಬೆದರಿಕೆ ಹಾಕಿದ ಮತ್ತು ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸದಿರುವ ಆರೋಪದ ಮೇಲೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.



