ನವದೆಹಲಿ: ನಾಗಪುರದ ವಿದ್ಯಾರ್ಥಿಯೊಬ್ಬನಿಗೆ (Nagpura Student) ಭಾರತದ ಬದಲು ವಿದೇಶದ ಅಬುಧಾಬಿ ಪರೀಕ್ಷಾ ಕೇಂದ್ರ ಹಂಚಿಕೆಯಾದ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಸ್ಪಷ್ಟನೆ ನೀಡಿದೆ.
ವಿದ್ಯಾರ್ಥಿಯ ಲಾಗಿನ್ ಐಡಿಯಿಂದಲೇ ಅಬುಧಾಬಿ ಕೇಂದ್ರವನ್ನು ಆಯ್ಕೆ ಮಾಡಲಾಗಿತ್ತು ಎಂದು ಎನ್‌ಟಿಎ ಡಿಜಿಟಲ್ ಪುರಾವೆಗಳ ಸಮೇತ ಸ್ಪಷ್ಟಪಡಿಸಿದ್ದು, ತಾಂತ್ರಿಕ ದೋಷದ ಆರೋಪವನ್ನು ತಳ್ಳಿಹಾಕಿದೆ. ಆದಾಗ್ಯೂ, ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಇದೀಗ ಆತನ ಪರೀಕ್ಷಾ ಕೇಂದ್ರವನ್ನು ಮರಳಿ ನಾಗಪುರಕ್ಕೇ ಬದಲಾಯಿಸಲಾಗಿದೆ.
ನಾಗಪುರದ ಅಬ್ದುಲ್ಲಾ ಮೇ 3 ರಂದು ನಡೆದಿದ್ದ ಮೊದಲ ನೀಟ್ ಪರೀಕ್ಷೆಯನ್ನು (NEET Exam) ನಾಗಪುರದ ಕೇಂದ್ರದಲ್ಲೇ ಬರೆದಿದ್ದ. ಆದರೆ ಪೇಪರ್ ಲೀಕ್ ವಿವಾದದಿಂದಾಗಿ ಪರೀಕ್ಷೆ ಮರುನಿಗದಿಯಾದಾಗ, ಹೊಸ ಪ್ರವೇಶ ಪತ್ರವನ್ನು (Admit Card) ಡೌನ್‌ಲೋಡ್ ಮಾಡಿ ನೋಡಿದ ಪೋಷಕರು ಶಾಕ್ ಆಗಿದ್ದರು. ಏಕೆಂದರೆ ಅದರಲ್ಲಿ ಪರೀಕ್ಷಾ ಕೇಂದ್ರ ಯುಎಇಯ ಅಬುಧಾಬಿ ಇಂಡಿಯನ್ ಸ್ಕೂಲ್ ಎಂದು ನಮೂದಾಗಿತ್ತು.
ಇದರಿಂದ ಕಂಗಾಲಾದ ವಿದ್ಯಾರ್ಥಿಯ ತಂದೆ ಮೊಹಮ್ಮದ್ ತಾಲಿಬ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು. “ನಾವು ಮಹಾರಾಷ್ಟ್ರದ ನಾಗಪುರ, ವಾರ್ಧಾ ಮತ್ತು ಭಂಡಾರಾ ಕೇಂದ್ರಗಳನ್ನು ಆಯ್ಕೆ ಮಾಡಿದ್ದೆವು. ಆದರೆ ಪರೀಕ್ಷೆಗೆ ಕೇವಲ 36 ಗಂಟೆ ಬಾಕಿ ಇರುವಾಗ ವಿದೇಶದ ಕೇಂದ್ರ ನೀಡಲಾಗಿದೆ. ನನ್ನ ಮಗನಿಗೆ ಪಾಸ್‌ಪೋರ್ಟ್ ಕೂಡ ಇಲ್ಲ, ಈಗ ತುರ್ತಾಗಿ ವಿದೇಶಕ್ಕೆ ಕರೆದೊಯ್ಯುವುದು ಹೇಗೆ?” ಎಂದು ಪ್ರಶ್ನಿಸಿದ್ದರು. ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡು ಎನ್‌ಟಿಎ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ನೀಟ್ ಮರುಪರೀಕ್ಷೆಯಲ್ಲಿ ಎಡವಟ್ಟು – ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ ನಿಗದಿ
ಎನ್‌ಟಿಎ ಸ್ಪಷ್ಟನೆ ಏನು?
ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಟಿಎ, ಇದು ವ್ಯವಸ್ಥೆಯ ತಾಂತ್ರಿಕ ದೋಷವಲ್ಲ, ಬದಲಾಗಿ ವಿದ್ಯಾರ್ಥಿಯ ಖಾತೆಯಿಂದಲೇ ಆದ ಬದಲಾವಣೆ ಎಂದು ಸ್ಪಷ್ಟಪಡಿಸಿದೆ.
ಎನ್‌ಟಿಎ ದಾಖಲೆಗಳ ಪ್ರಕಾರ, ಮೇ 21 ರಂದು ವಿದ್ಯಾರ್ಥಿಯ ಅಧಿಕೃತ ಲಾಗಿನ್ ಐಡಿ ಮೂಲಕ ಪೋರ್ಟಲ್‌ಗೆ ಲಾಗ್ ಇನ್ ಆಗಿ, ಪರೀಕ್ಷಾ ನಗರದ ಆದ್ಯತೆಯನ್ನು ಬದಲಾಯಿಸಲಾಗಿದೆ. ಅದರಲ್ಲಿ ಮೊದಲ ಆದ್ಯತೆಯಾಗಿ ಅಬುಧಾಬಿ ಮತ್ತು ಎರಡನೇ ಆದ್ಯತೆಯಾಗಿ ದುಬೈ ಅನ್ನು ಆಯ್ಕೆ ಮಾಡಲಾಗಿತ್ತು.
ಈ ಬದಲಾವಣೆಗಳನ್ನು ಮಾಡಲು ಬಳಸಲಾದ ಕಂಪ್ಯೂಟರ್/ಮೊಬೈಲ್‌ನ ಐಪಿ ಅಡ್ರೆಸ್ (IP Address) ಹಾಗೂ ಈ ಹಿಂದೆ ಮೇ 3ರ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ಮತ್ತು ಮೇ 24 ರಂದು ಫೀಸ್ ರಿಫಂಡ್ ಬ್ಯಾಂಕ್ ವಿವರ ಅಪ್‌ಡೇಟ್ ಮಾಡಲು ಬಳಸಲಾದ ಐಪಿ ಅಡ್ರೆಸ್ ಎರಡೂ ಒಂದೇ ಆಗಿದೆ. ಅಂದರೆ ನಾಗಪುರದ ಅದೇ ನೆಟ್‌ವರ್ಕ್‌ನಿಂದಲೇ ಈ ಬದಲಾವಣೆ ನಡೆದಿದೆ.
ಜೂನ್ 16 ರಂದು ಇದೇ ಐಪಿ ಅಡ್ರೆಸ್‌ನಿಂದ ಹೊಸ ಅಡ್ಮಿಟ್ ಕಾರ್ಡ್ ಕೂಡ ಡೌನ್‌ಲೋಡ್ ಮಾಡಲಾಗಿದೆ ಎಂದು ಎನ್‌ಟಿಎ ಡಿಜಿಟಲ್ ಲಾಗ್‌ಗಳನ್ನು ಬಿಡುಗಡೆ ಮಾಡಿದೆ.
ವಿದ್ಯಾರ್ಥಿಯ ಲಾಗಿನ್‌ನಿಂದಲೇ ಈ ತಪ್ಪಾಗಿದ್ದರೂ, ಮಾನವೀಯತೆ ಹಾಗೂ ವಿದ್ಯಾರ್ಥಿಯ ಭವಿಷ್ಯದ ಹಿತದೃಷ್ಟಿಯಿಂದ ಎನ್‌ಟಿಎ ಹಿರಿಯ ಅಧಿಕಾರಿಗಳು ಜೂನ್ 19 ಶುಕ್ರವಾರದಂದು ತುರ್ತು ಕ್ರಮ ಕೈಗೊಂಡಿದ್ದಾರೆ.
ವಿದ್ಯಾರ್ಥಿಯ ತಂದೆಯನ್ನು ನೇರವಾಗಿ ಸಂಪರ್ಕಿಸಿದ ಅಧಿಕಾರಿಗಳು, ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ಅಬ್ದುಲ್ಲಾನ ಪರೀಕ್ಷಾ ಕೇಂದ್ರವನ್ನು ಅಬುಧಾಬಿಯಿಂದ ಮರಳಿ ನಾಗಪುರಕ್ಕೇ ಸ್ಥಳಾಂತರಿಸಿದ್ದಾರೆ.
ಈ ಮೂಲಕ ವಿದ್ಯಾರ್ಥಿ ಭಾನುವಾರ ಯಾವುದೇ ಆತಂಕವಿಲ್ಲದೆ ತನ್ನ ನಗರದಲ್ಲೇ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗಿದೆ. ತಾಂತ್ರಿಕವಾಗಿ ತಪ್ಪು ಯಾರದ್ದೇ ಇರಲಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಸ್ಥೆ ಬದ್ಧವಾಗಿದೆ ಎಂದು ಎನ್‌ಟಿಎ ತಿಳಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ವಿದೇಶಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯ (NRI) ಮತ್ತು ವಿದೇಶಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭಾರತದ ಹೊರಗೆ ಒಟ್ಟು 14 ಅಂತಾರಾಷ್ಟ್ರೀಯ ನಗರಗಳಲ್ಲಿ ನೀಟ್ (NEET UG) ಪರೀಕ್ಷೆಯನ್ನು ನಡೆಸುತ್ತದೆ. ದುಬೈ, ಅಬುಧಾಬಿ, ಶಾರ್ಜಾ, ದೋಹಾ, ಕುವೈತ್ ಸಿಟಿ, ಮಸ್ಕತ್, ರಿಯಾದ್, ಮನಾಮಾ, ಸಿಂಗಾಪುರ, ಕೌಲಾಲಂಪುರ, ಬ್ಯಾಂಕಾಕ್, ಕೊಲಂಬೊ, ಕಠ್ಮಂಡು, ಲಾಗೋಸ್‌ನಲ್ಲಿ ಪರೀಕ್ಷೆ ನಡೆಸುತ್ತದೆ.
