ಬಳ್ಳಾರಿ: 2028ರ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ (BJP) ಅಧಿಕಾರಕ್ಕೆ ಬರುವುದು ನಿಶ್ಚಿತ. ಆ ಸರ್ಕಾರದಲ್ಲಿ ನಾನೂ ಕೂಡ ಸಚಿವನಾಗುತ್ತೇನೆ. ಆದರೆ ನಮ್ಮ ಸಮಾಜಕ್ಕೆ 7.5% ರಷ್ಟು ಮೀಸಲಾತಿ ಸಿಗದಿದ್ದರೆ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲು ಸಿದ್ಧ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ(Ramesh Jarkiholi) ಘೋಷಣೆ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಆಯೋಜಿಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಯಾವ ಪಕ್ಷವೇ ಇರಲಿ, ಅದನ್ನು ಅಧಿಕಾರಕ್ಕೆ ತರುವ ಅಥವಾ ಗದ್ದುಗೆಯಿಂದ ಕೆಳಗಿಳಿಸುವ ರಾಜಕೀಯ ಶಕ್ತಿಯನ್ನು ದೇವರು ನಮ್ಮ ಸಮಾಜಕ್ಕೆ ಕೊಟ್ಟಿದ್ದಾನೆ. 1970ರ ದಶಕದಲ್ಲೇ ನಾವು ಕೇವಲ ಮೂರ್ನಾಲ್ಕು ಸೀಟುಗಳನ್ನು ಗೆದ್ದು, ಇಡೀ ಅಧಿಕಾರದ ಚುಕ್ಕಾಣಿಯನ್ನು ನಮ್ಮ ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದೆವು. ನಾವು ಈಗ ಮತ್ತಷ್ಟು ಪ್ರಬಲವಾಗಿ ಸಂಘಟನೆ ಮಾಡಬೇಕಿದೆ. ಕೇವಲ ನಮ್ಮದೇ ಸಮಾಜವಲ್ಲದೆ, ರಾಜ್ಯದಲ್ಲಿರುವ ಇತರೆಲ್ಲಾ ಸಣ್ಣಪುಟ್ಟ ಸಮುದಾಯಗಳನ್ನು ಜೊತೆಗೆ ಕರೆದುಕೊಂಡು ಹೋದಾಗ ಮಾತ್ರ ನಮಗೆ ನಿಜವಾದ ರಾಜಕೀಯ ಶಕ್ತಿ ಬರಲು ಸಾಧ್ಯ. ಎಂದರು.

ಸಹೋದರ ಹಾಗೂ ಹಾಲಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಅವರು, ಇವತ್ತು ಸಮಾಜದ ಹಿತದೃಷ್ಟಿಯಿಂದ ಮಾತನಾಡಲು ಕೆಲವರಿಗೆ ಧೈರ್ಯವಿಲ್ಲ. ಒಂದು ವೇಳೆ ಸತೀಶ್ ಜಾರಕಿಹೊಳಿ ಇರುವ ಸ್ಥಾನದಲ್ಲಿನಾನೇನಾದರೂ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರುತ್ತಿದ್ದೆ. ಆದರೆ ಅಧಿಕಾರ ತ್ಯಾಗ ಮಾಡುವ ಆ ಶಕ್ತಿ ಮತ್ತು ಧೈರ್ಯ ಸತೀಶ್‌ಗೆ ಇಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾಡಿದ್ದು ಹಸೆಮಣೆ ಏರಬೇಕಿದ್ದವಳು ಆತ್ಮಹತ್ಯೆ – ಡೆತ್‌ನೋಟ್ ಬರೆದಿಟ್ಟು ಪ್ರಾಣಬಿಟ್ಟ ತಂದೆ-ತಾಯಿ, ಮಗಳು
ರಾಜ್ಯದ ಮುಂದಿನ ಸಾರ್ವತ್ರಿಕ ಚುನಾವಣೆಗೆ ಇನ್ನು ಕೇವಲ 22 ತಿಂಗಳುಗಳು ಬಾಕಿ ಇವೆ. 2028ಕ್ಕೆ ಕರ್ನಾಟಕದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇವತ್ತು ವೇದಿಕೆಯ ಮೇಲೆ ಕುಳಿತಿರುವ ನಾವೆಲ್ಲರೂ ಮುಂದಿನ ಬಾರಿಯೂ ಶಾಸಕರಾಗಿ ಆಯ್ಕೆಯಾಗಲಿದ್ದೇವೆ. ಆಡಳಿತಕ್ಕೆ ಬರುವ ನಮ್ಮದೇ ಸರ್ಕಾರದಲ್ಲಿ ಸಮಾಜಕ್ಕೆ ನ್ಯಾಯ ಸಿಗದಿದ್ದರೆ ಹೋರಾಟ ಮಾಡಲು ನಾನು ಸದಾ ಸಿದ್ಧ ಎಂದು ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಭವಿಷ್ಯದ ವಿಶ್ವಾಸವನ್ನು ಪುನರುಚ್ಚರಿಸಿದ್ದಾರೆ.
