ವಾಷಿಂಗ್ಟನ್: ಅಮೆರಿಕದ(USA) ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನವೊಂದರಲ್ಲಿ ಪ್ರವಾಸಿಗನೊಬ್ಬನ ಮೇಲೆ ಕಾಡುಕೋಣ (Bison) ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ಮಾಡುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ. ಪ್ರವಾಸಿಗನನ್ನು ಬೆನ್ನಟ್ಟಿದ ಕಾಡುಕೋಣ ತನ್ನ ಕೋಡುಗಳಿಂದ ಆತನನ್ನು ಬರೋಬ್ಬರಿ 8 ಅಡಿಗೂ ಹೆಚ್ಚು ಎತ್ತರಕ್ಕೆ ಗಾಳಿಯಲ್ಲಿ ತೂರಿದೆ.
ನಡೆದಿದ್ದು ಏನು?
ವ್ಯೋಮಿಂಗ್‌ನಲ್ಲಿರುವ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್‌ಗೆ ಭೇಟಿ ನೀಡಿದ್ದ ಪ್ರವಾಸಿಗನೊಬ್ಬ ವನ್ಯಜೀವಿಗಳನ್ನು ನೋಡಲು ನಿಯಮಗಳನ್ನು ಮೀರಿ ಕಾಡುಕೋಣದ ತೀರಾ ಹತ್ತಿರ ಹೋಗಿದ್ದಾನೆ. ಸಾಮಾನ್ಯವಾಗಿ ಕಾಡುಕೋಣಗಳು ಶಾಂತವಾಗಿದ್ದರೂ, ತಮ್ಮ ಹತ್ತಿರ ಯಾರಾದರೂ ಬಂದರೆ ಅಥವಾ ತಮಗೆ ಅಪಾಯವಿದೆ ಎಂದು ಅನಿಸಿದರೆ ತಕ್ಷಣವೇ ರೊಚ್ಚಿಗೇಳುತ್ತವೆ. ಈ ಪ್ರವಾಸಿಗ ತೀರಾ ಹತ್ತಿರ ಬಂದಿದ್ದರಿಂದ ಕೋಪಗೊಂಡ ಕಾಡುಕೋಣ ಹಠಾತ್ತನೆ ಆತನತ್ತ ನುಗ್ಗಿ ಬೆನ್ನಟ್ಟಿದೆ. ಇದನ್ನೂ ಓದಿ: ಟ್ರಂಪ್ ಆಪ್ತ ಸೆನೆಟರ್ ಸಾವಿನ ಹಿಂದೆ ಹತ್ಯೆಯ ಶಂಕೆ – ಇರಾನ್, ರಷ್ಯಾ ಕೈವಾಡದ ಬಗ್ಗೆ ಚರ್ಚೆ
A tourist was seriously injured Friday evening after being thrown 8 feet into the air by a bull bison in Yellowstone National Park. Professional photographer Mike Macleod filmed the incident and said the bison was “angry, agitated and charging anything and everything.” (No audio) pic.twitter.com/ELmHQjvxFj
— Molly Ploofkins (@Mollyploofkins) July 12, 2026
ಪ್ರಾಣಭಯದಿಂದ ಪ್ರವಾಸಿಗ ಓಡಲು ಯತ್ನಿಸಿದ್ದಾನಾದರೂ, ವೇಗವಾಗಿ ಬಂದ ಕಾಡುಕೋಣ ತನ್ನ ಬಲಿಷ್ಠವಾದ ಕೋಡುಗಳಿಂದ ಆತನನ್ನು ಕೆಳಗಿನಿಂದ ಮೇಲಕ್ಕೆ ಎತ್ತಿ ಎಸೆದಿದೆ. ಘಟನೆಯ ತೀವ್ರತೆಗೆ ಆ ವ್ಯಕ್ತಿ ಗಾಳಿಯಲ್ಲಿ ಸುಮಾರು 8 ಅಡಿಯಷ್ಟು ಎತ್ತರಕ್ಕೆ ಹಾರಿ, ನಂತರ ನೆಲಕ್ಕೆ ಬಿದ್ದಿದ್ದಾನೆ. ಈ ಭಯಾನಕ ದೃಶ್ಯವನ್ನು ಹತ್ತಿರದಲ್ಲೇ ಇದ್ದ ಇತರ ಪ್ರವಾಸಿಗರು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.
ದಾಳಿಗೊಳಗಾದ ಪ್ರವಾಸಿಗನಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ವನ್ಯಜೀವಿ ಇಲಾಖೆ, ರಾಷ್ಟ್ರೀಯ ಉದ್ಯಾನವನಗಳಲ್ಲಿ ವನ್ಯಜೀವಿಗಳಿಂದ ಕನಿಷ್ಠ ಸುಮಾರು 75 ಅಡಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ.

