ಬಳ್ಳಾರಿ: ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ(Alcohol) ಮಾಡಿ ದಾಂಧಲೆ ನಡೆಸುವ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಪುಂಡರ ಹಾವಳಿ ಮಿತಿಮೀರಿದ ಹಿನ್ನೆಲೆಯಲ್ಲಿ ಬಳ್ಳಾರಿ ಪೊಲೀಸರು (Ballari Police) ಭಾನುವಾರ(ಜು.12) ಭರ್ಜರಿ ಕಾರ್ಯಾಚರಣೆ ನಡೆಸಿ ತಕ್ಕ ಶಾಸ್ತಿ ಮಾಡಿದ್ದಾರೆ.
ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸುತ್ತಿದ್ದ ಒಟ್ಟು 174 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸುಮನ್ ಡಿ. ಪನ್ನೇಕರ್ ಅವರ ನೇತೃತ್ವದಲ್ಲಿ ನಗರದ ವಿವಿಧೆಡೆ ಏಕಕಾಲಕ್ಕೆ ಈ ವಿಶೇಷ ರೌಂಡ್ಸ್ ಹಾಗೂ ದಾಳಿ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪೊಲೀಸರು ವಶಕ್ಕೆ ಪಡೆದ 174 ಜನರ ಪೈಕಿ ತೀವ್ರ ನಶೆಯಲ್ಲಿದ್ದ 111 ಜನರನ್ನು ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ತಪಾಸಣೆಯ ವೇಳೆ ಇಬ್ಬರು ಬರೀ ಮದ್ಯವಲ್ಲದೇ, ಅಪಾಯಕಾರಿ ಮಾದಕ ವಸ್ತುಗಳನ್ನು ಸೇವಿಸಿರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ನಾಲ್ವರು ಯುವಕರು ಡ್ರಗ್ಸ್ ಸೇವನೆ ಮಾಡಿ ಸಿಕ್ಕಿಬಿದ್ದಿದ್ದಾರೆ.
ಮಾದಕ ವಸ್ತು ಸೇವನೆ ಮಾಡಿದ್ದ ನಾಲ್ವರು ಯುವಕರ ವಿರುದ್ಧ ಕಠಿಣವಾದ ಮಾದಕ ಪದಾರ್ಥಗಳ ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ಪ್ರಕರಣ ದಾಖಲಿಸಿ, ಜೈಲಿಗಟ್ಟಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ ಉಳಿದ 170 ಜನರ ವಿರುದ್ಧ ಲಘು ಪ್ರಕರಣಗಳನ್ನು (Petty Cases) ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
ಬಳ್ಳಾರಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆ ರಸ್ತೆ ಬದಿ ಕುಳಿತು ಕುಡಿಯುವುದು ಹಾಗೂ ಸಾರ್ವಜನಿಕ ಮಹಿಳೆಯರು, ನಾಗರಿಕರಿಗೆ ತೊಂದರೆ ಕೊಡುವ ಪ್ರಕರಣಗಳು ಹೆಚ್ಚಾಗಿದ್ದವು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ತಕ್ಷಣ ಕಾರ್ಯಪ್ರವೃತ್ತರಾದ ಎಸ್‌ಪಿ ಸುಮನ್ ಡಿ. ಪನ್ನೇಕರ್ ಅವರು ವಿಶೇಷ ಟೀಂ ರಚಿಸಿ ಈ ಬಿಸಿ ಮುಟ್ಟಿಸಿದ್ದಾರೆ.
ರಾತ್ರಿ ವೇಳೆ ನಗರದ ಶಾಂತಿ ಮತ್ತು ಸಾರ್ವಜನಿಕರ ನೆಮ್ಮದಿಗೆ ಭಂಗ ತರುವವರ ವಿರುದ್ಧ ಇಂತಹ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲೂ ಮುಂದುವರೆಯಲಿವೆ ಎಂದು ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
