– ಕೊಲೆಗೈದು ‘ಈಟಿಂಗ್ ದೋಸೆ ವಿಥ್ ಸನ್’ ಅಂತ ಸ್ಟೇಟಸ್ ಹಾಕ್ದ
– ಶವದ ಜೊತೆ 6 ತಿಂಗ್ಳ ಕಂದಮ್ಮನ ಬಿಟ್ಟು ಹೋದ
– ಪರಸ್ತ್ರೀ ಸೆರಗಲ್ಲಿ ಮಲಗಲು ಹೆಂಡ್ತಿಯನ್ನ ಕೊಂದ
– ಒಂದು ಕೊಲೆ, ಎರಡು ಆತ್ಮಹತ್ಯೆ, ಮೂರು ಮಕ್ಕಳು ಅನಾಥ
– ಅವ್ಳು ಬಿಟ್ಟು ಬಂದ್ಳು, ಇವ್ನು ಕೊಂದು ಹೋಗಲು ರೆಡಿಯಾಗಿದ್ದ
ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ನಡೆದಿದ್ದ ಒಂಟಿ ಮಹಿಳೆ ಕತ್ತು ಸೀಳಿ ಮನೆ ದೋಚಿದ್ದ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿ ಸತ್ತಾಗ ಮೊಸಳೆ ಕಣ್ಣೀರಿಟ್ಟಿದ್ದ ವೈದ್ಯ ಮಹಾಶಯನೇ ಮರ್ಡರ್ ಮಿಸ್ಟರಿ ಹಿಂದಿರುವ ಸರ್ಜರಿ ಎಕ್ಸ್ ಪರ್ಟ್ ಆಗಿದ್ದಾನೆ.
ದಂತವೈದ್ಯ ರೇವಂತ್ ಪತ್ನಿ ಕವಿತಾಳನ್ನು ಕೊಂದ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಈ ಮೂಲಕ ಒಂಟಿ ಮಹಿಳೆಯ ಕೊಲೆ ಪ್ರಕರಣದಿಂದ ಇಡೀ ಕಡೂರು ತಲ್ಲಣವಾಗಿದೆ. ಆರು ತಿಂಗಳ ಮಗು ನೋಡಿ ಕಣ್ಣೀರಿಟ್ಟಿದ್ದ ಕಡೂರಿನ ಜನತೆ ಮೂಕ ವಿಸ್ಮಿತರಾಗಿದ್ದಾರೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ವೈದ್ಯನ ಕಣ್ಣಲ್ಲೇ ಹಂತಕ ಕಂಡಿದ್ದು, ಬುದ್ಧಿವಂತ ಡಾಕ್ಟರ್ ಏನು ಆಟವಾಡುತ್ತಾನೋ ಆಡಲಿ ಎಂದು ಪೊಲೀಸರು ಮೂಕ ಪ್ರೇಕ್ಷಕರಂತೆ ನಟಿಸಿದ್ದರು. ಆದರೆ ವಿಚಾರಣೆಯಲ್ಲಿ ಪೊಲೀಸರ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿದ್ದ ವೈದ್ಯ ಅಂದರ್ ಆಗೋದು ಗ್ಯಾರಂಟಿ ಎಂದು ಖಚಿತವಾಗುತ್ತಿದ್ದಂತೆ ಭಯ ಭೀತನಾಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಾಣಾಗಿದ್ದ.
Advertisement
Advertisement
ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಡೂರಿನ ಜನ ಬೇಸರ ವ್ಯಕ್ತಪಡಿಸಿದ್ದರು. ಹೆಂಡತಿ ಸತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಭಾವಿಸಿದ್ದರು. ಅಲ್ಲದೆ ವೈದ್ಯನ ಎರಡು ಮಕ್ಕಳನ್ನು ಕಂಡು ಕಣ್ಣೀರಿಟ್ಟಿದ್ದರು. ಆದರೆ ಅಸಲಿ ವಿಷಯ ಪೊಲೀಸರಿಗೆ ಮಾತ್ರ ತಿಳಿದಿತ್ತು. ನಾಲ್ಕು ದಿನದಿಂದ ಹಗಲಿರುಳು ಮಾಹಿತಿ ಸಂಗ್ರಹಿಸಿದ್ದೆವು, ಬಂಧಿಸುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬುದ್ಧಿವಂತ, ಹಂತಕ ಜಸ್ಟ್ ಮಿಸ್ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೊಬ್ಬಳ ಮೇಲಿನ ಆಸೆಗೆ ವೈದ್ಯ ತನ್ನ ಪತ್ನಿಯನ್ನೇ ಕೊಂದ, ಪೊಲೀಸರ ಮೇಲಿನ ಭಯಕ್ಕೆ ತಾನೂ ಆತ್ಮಹತ್ಯೆ ಮಾಡಿಕೊಂಡ. ಆದರೆ ಅನಾಥವಾಗಿದ್ದು ಮಾತ್ರ ನಾಲ್ಕು ಹಾಗೂ ಆರು ತಿಂಗಳ ಕಂದಮ್ಮಗಳು.
Advertisement
Advertisement
ಪತ್ನಿ ಕೊಲ್ಲಲು ಕಾರಣವೇನು?
ಬೀರೂರಿನಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ದಂತವೈದ್ಯ ರೇವಂತ್‍ಗೆ, ಉಡುಪಿ ಮೂಲದ ಕವಿತಾ ಜೊತೆಗೆ ಏಳು ವರ್ಷದ ಹಿಂದೆ ಮದುವೆಯಾಗಿತ್ತು. ನಾಲ್ಕು ವರ್ಷ ಹಾಗೂ ಆರು ತಿಂಗಳ ಎರಡು ಮಕ್ಕಳಿದ್ದರು. ಸುಖಿ ಕುಟುಂಬ, ಕವಿತಾ ಕೂಡ ಸುಂದರ ಹೆಣ್ಣು. ಇಬ್ಬರದ್ದು ಸುಂದರ ಸಂಸಾರ. ಆದರೆ ಡಾಕ್ಟರ್ ರೇವಂತ್‍ಗೆ ಪತ್ನಿಯಿಂದ ದೂರವಿರುವ ಮಾಯಾಂಗನೆಯ ಸ್ನೇಹವಾಗಿತ್ತು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು 45ರ ಹರೆಯದ ಡಾಕ್ಟರ್ ಅಂಕಲ್ ಪರಸ್ತ್ರೀಯೊಂದಿಗೆ ಲವರ್ಸ್ ಡೇ ಆಚರಿಸಿದ್ದ. ಈ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಗಲಾಟೆ ಕೂಡ ನಡೆದಿತ್ತಂತೆ. ಹಾಗಾಗಿ ಏಳು ವರ್ಷದಿಂದ ಸಂಸಾರ ಮಾಡಿ ಬೇಜಾರಾಗಿದ್ದ ವೈದ್ಯ ಪರ ಸ್ತ್ರೀಯ ಸೆರಗಲ್ಲಿ ಸರಸವಾಡಲು ಹೆಂಡತಿಯನ್ನೇ ಮರ್ಡರ್ ಮಾಡಲು ಸ್ಕೆಚ್ ಹಾಕಿದ್ದ. ದರೋಡೆಕೋರರ ತಲೆಗೆ ಕಟ್ಟುವಂತೆ ಪತ್ನಿಯ ಕೊಲೆ ಮಾಡಿದ್ದ.
ಬ್ಲೂಪ್ರಿಂಟ್ ರೆಡಿ ಮಾಡಿದ್ದ:
ವೈದ್ಯ ಆವೇಶದಲ್ಲೋ-ಆತಂಕದಲ್ಲೋ ಅಥವಾ ಮುಗಿಸಿ ಬಿಡೋಣವೆಂದೋ ಏಕಾಏಕಿ ಕೊಲೆ ಮಾಡಿಲ್ಲ. ಬದಲಿಗೆ ಹೀಗೆ ಮಾಡಿದರೆ ಹೀಗೆ ಆಗುತ್ತದೆ. ಏನು ಮಾಡಬೇಕು ಎಂದೆಲ್ಲ ಬ್ಲೂಪ್ರಿಂಟ್ ಸಿದ್ಧ ಮಾಡಿಕೊಂಡಿದ್ದ. ಪೊಲೀಸರನ್ನ ದಡ್ಡರೆಂದು ಭಾವಿಸಿದ್ದ ಡಾಕ್ಟರ್, ಪ್ಲ್ಯಾನ್ ಮಾಡಿದ ರೀತಿಯಲ್ಲೇ ಎಲ್ಲ ಮಾಡಿ ಮುಗಿಸಿದ್ದ. ಆದರೆ ಘಟನೆ ನಡೆದು ಮೂರೇ ದಿನಕ್ಕೆ ಹಂತಕನಿವನೇ ಎಂದು ಕಡೂರು ಪೊಲೀಸರಿಗೆ ಖಚಿತವಾಗಿತ್ತು. ಆದರೆ ಇರಲಿ ನೋಡೋಣ ಎಂದು ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದರು. ನಂತರ ಕೊಲೆಗಡುಕ ಯಾರೂ ಅಲ್ಲ ಅವನೇ ಎಂಬುದು ಪಕ್ಕಾಗಿದೆ. ನಂತರ ಬಂಧಿಸುವಷ್ಟರಲ್ಲಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೃಶ್ಯಂ ಚಿತ್ರದ ರೀತಿಯಲ್ಲೇ ಮರ್ಡರ್ ಗೆ ಸ್ಕೆಚ್:
ಫೆಬ್ರವರಿ 17ರ ಮಧ್ಯಾಹ್ನ 3.30ಕ್ಕೆ ಪತ್ನಿಗೆ ಆಭರಣ ಕೊಡಿಸಿಕೊಂಡು ಬಂದಿದ್ದಾನೆ. ಆಗ ನಾಲ್ಕು ವರ್ಷದ ಮಗುವೂ ಜೊತೆಗಿತ್ತು. ಮನೆಗೆ ಬಂದವನೇ ಸಿದ್ಧವಿದ್ದ ಪ್ಲ್ಯಾನ್‍ನಂತೆ ಔಷಧಿಯಿಂದ ಪತ್ನಿಯ ಜ್ಞಾನ ತಪ್ಪಿಸಿ, ಹೊಟ್ಟೆಗೆ ಇಂಜಕ್ಷನ್ ನೀಡಿದ್ದಾನೆ. ಜ್ಞಾನ ತಪ್ಪಿದ ನಂತರ ಕಾರ್ ಶೆಡ್‍ಗೆ ಎಳೆದೊಯ್ದು, ಎದೆಹಾಲು ಕುಡಿಯುವ ಆರು ತಿಂಗಳ ಮಗುವಿನ ಎದುರೇ ಒಂದು ಬಾರಿ ಬ್ಲೆಡ್‍ನಿಂದ ಕುತ್ತಿಗೆಗೆ ಹೊಡೆದು, ರಕ್ತ ಹರಿಯಬಾರದೆಂದು ಕಾಲು ಓರೆಸುವ ಮ್ಯಾಟ್‍ಗಳನ್ನು ದೇಹದ ಸುತ್ತ ಹಾಕಿ, ಬಾಗಿಲು ಹಾಕಿ ಬಂದಿದ್ದಾನೆ. ನಂತರ ಮನೆಯಲ್ಲಿನ ವಸ್ತುಗಳನ್ನ ಕದಲಿದ್ದಾನೆ. ಬೀರೂವಿನಲ್ಲಿದ್ದ ಹಣ-ಬೆಳ್ಳಿ-ಬಂಗಾರವನ್ನು ಅವನೇ ಎಸ್ಕೇಪ್ ಮಾಡಿದ್ದಾನೆ. ನಾಲ್ಕು ವರ್ಷದ ಮಗ ಅಮ್ಮ ಎಂದು ಕೂಗಿದಾಗ ವಾಶ್ ರೂಂಗೆ ಹೋಗಿದ್ದಾಳೆಂದು ಮಗನ ಬುಕ್‍ಗಳನ್ನು ಬ್ಯಾಗಿಗೆ ಹಾಕಿಕೊಂಡು ಕ್ಲಿನಿಕ್‍ನಲ್ಲೇ ಹೋಂ ವರ್ಕ್ ಮಾಡುವಂತೆ ಬಾ ಎಂದು ಕರೆದೊಯ್ದಿದ್ದಾನೆ. ಪತ್ನಿಯ ಹೆಣ ಜೊತೆ ಆರು ತಿಂಗಳ ಕೂಸನ್ನೂ ಬಿಟ್ಟು ಬೀಗ ಹಾಕಿ ಹೋಗಿದ್ದಾನೆ.
ದೋಸೆ ತಿನ್ನೋ ಫೋಟೋ ಹಾಕಿ ಫೋನ್:
ಮನೆಯಿಂದ ಕ್ಲಿನಿಕ್‍ಗೆ ಮಗನ ಜೊತೆ ಹೋದ ವೈದ್ಯ, ‘ಐ ಆ್ಯಮ್ ಈಟೀಂಗ್ ದೋಸಾ, ವಿಥ್ ಮೈ ಸನ್ ಅಟ್ ಫೇಮಸ್ ಹೋಟೆಲ್ ಇನ್ ಬೀರೂರು’ ಎಂದು ವಾಟ್ಸಪ್‍ನಲ್ಲಿ ಸ್ಟೇಟಸ್ ಹಾಕಿದ್ದಾನೆ. ಅಲ್ಲದೆ ಫ್ರೆಂಡ್ಸ್‍ಗಳಿಗೆ ಸಹ ಫೋಟೋ ಕಳುಹಿಸಿದ್ದಾನೆ. ತಾನು ಅಮಾಯಕ ಎಂದು ತೋರಿಸಲು ಎಲ್ಲಾ ಮಾಡಿದ್ದಾನೆ. ಅಲ್ಲದೆ ಬೀರೂರಿನ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನಿಗೆ ಫೋನ್ ಮಾಡಿ ಕ್ಲಿನಿಕ್‍ಗೆ ಕರೆಸಿಕೊಂಡಿದ್ದಾನೆ. ನಂತರ ಮನೆಗೆ ಹೋಗೋಣ ಬಾ ಎಂದು ತಾಯಿ ಕರೆದರೆ, ಇರು ಅಮ್ಮ ಕೆಲಸ ಇದೆ ಹೋಗೋಣ ಎಂದು ಎರಡು ಗಂಟೆ ಸಮಯ ತಳ್ಳಿದ್ದಾನೆ. ಅಲ್ಲದೆ ಸಾಯಿಸಿ ಬಂದ ಹೆಂಡತಿಗೆ ಬೇಕೆಂದೇ ಫೋನ್ ಮಾಡಿದ್ದಾನೆ.
ಇಬ್ಬರು ಸಂಬಂಧಿಕರಿಗೆ ಕರೆ ಮಾಡಿ, ಕ್ಲಿನಿಕ್ ಬಳಿ ಕರೆಸಿಕೊಂಡ. ಬಾಳೆಕಾಯಿ ಮಂಡಿಗೆ ಹೋಗ್ಬೇಕು ಎಂದರೂ ಬಿಡದೆ ಹೇ.. ಬರ್ರೋ.. ಎಂದು ಜೊತೆಗೆ ಕರೆತಂದಿದ್ದಾನೆ. ಅಲ್ಲದೆ ಮನೆಯಿಂದ ಹೊರಡುವಾಗ ತನ್ನ ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ತಾನೇ ಎರಡ್ಮೂರು ಬಾರಿ ನೋಡಿದ್ದ. ಬರುವಾಗಲು ಮತ್ತೆ-ಮತ್ತೆ ನೋಡಿದ್ದಾನೆ. ಮನೆಗೆ ಹೋದವನೆ ಸೋಫಾ ಮೇಲೆ ಕೂತು ಕವಿತಾ… ಕವಿತಾ… ಎಂದು ಕೂಗಿದ್ದಾನೆ. ಹುಡುಕಿಲ್ಲ, ಮಗು ಅಮ್ಮ.. ಅಮ್ಮ.. ಎಂದು ಹುಡುಕಿದೆ. ತಮ್ಮಂದಿರು ಅತ್ತಿಗೆ… ಅತ್ತಿಗೆ… ಎಂದು ಕೂಗಿದ್ದಾರೆ. ವೈದ್ಯ ರೇವಂತ್ ತಾಯಿ ಕೂಡ ಕೂಗಿದ್ದಾರೆ, ನಂತರ ಒಳಗೆ ಹೋಗಿ ನೋಡಿದಾಗ ದಿಗ್ಭ್ರಾಂತರಾಗಿದ್ದಾರೆ. ಆಗ ವೈದ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ವಿಷಯ ಕೇಳಿ ಸ್ಥಳಕ್ಕೆ ಬಂದ ಪೊಲೀಸರಿಗೂ ಶಾಕ್ ಆಗಿತ್ತು. 206 ರಾಷ್ಟ್ರೀಯ ಹೆದ್ದಾರಿ ಸದಾ ಜನ ಓಡಾಡೋ ಜಾಗ ಹೀಗಾಯ್ತಲ್ಲ ಎಂದು ಪೊಲೀಸರು ತಲೆಕೆಡಿಸಿಕೊಂಡು ಹುಡುಕಾಟ ನಡೆಸಿದ್ದಾರೆ. ಆದರೆ ಮಡದಿ ಕಳೆದುಕೊಂಡ ವೈದ್ಯನ ಮುಖದ ಭಾವ ಕಂಡು ಎಲ್ಲೋ ಮಿಸ್ ಹೊಡೀತಿದೆಯಲ್ಲಾ ಎಂದು ಕಡೂರು ಸರ್ಕಲ್ ಇನ್ಸ್‍ಪೆಕ್ಟರ್ ಮಂಜುನಾಥ್ ಭಾವಿಸಿದ್ದಾರೆ. ಬೀರೂರಿನ ಪಿಎಸ್‍ಐ ರಾಜಕುಮಾರ್, ಸಖರಾಯಪಟ್ಟಣ ಸಬ್ ಇನ್ಸ್‍ಪೆಕ್ಟರ್ ಮೌನೇಶ್, ಕಡೂರಿನ ಪಿಎಸ್‍ಐ ವಿಶ್ವನಾಥ್ ಹಾಗೂ ಸಿಬ್ಬಂದಿ ನಾಲ್ಕು ದಿನಗಳ ಕಾಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿ, ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೇನು ವೈದ್ಯನನ್ನು ಬಂಧಿಸುವಷ್ಟರಲ್ಲಿ ಪಾಪ ಪ್ರಜ್ಞೆಯೋ ಅಥವಾ ಪೊಲೀಸರ ಮೇಲಿನ ಭಯಕ್ಕೋ ಆತ್ಮಹತ್ಯಗೆ ಶರಣಾಗಿದ್ದಾನೆ. ಆದರೆ ಎರಡು ಮಕ್ಕಳು ಮಾತ್ರ ಅನಾಥವಾಗಿವೆ.
ಡಾ.ರೇವಂತ್ ಏನೋ ಆತ್ಮಹತ್ಯೆಗೆ ಶರಣಾದ. ಹೆಂಡತಿ ಕೊಲೆ ಹಿಂದೆ ಅವನೊಬ್ಬನೇ ಇಲ್ಲ. ಅವನು-ಅವಳ ಮಧ್ಯೆ ಮತ್ತೊಬ್ಬಳಾಗಿದ್ದ ಹರ್ಷಿತಾ ಹಾಗೂ ಮತ್ತಿಬ್ಬರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಅವನನ್ನು ಬಂಧಿಸಿದ ಬಳಿಕ ಆ ಮೂವರನ್ನು ಬಂಧಿಸಲು ಯೋಚಿಸಿದ್ದರು. ಆದರೆ ಇದೀಗ ನಾನೂ ಪ್ರಕರಣದಲ್ಲಿ ಭಾಗಿಯಾಗುತ್ತೇನೆ, ಪೊಲೀಸರು ನನ್ನನ್ನೂ ಬಂಧಿಸುತ್ತಾರೆ ಎಂಬ ಭಯದಿಂದಲೋ, ಕುಟುಂಬ ಸರ್ವನಾಶ ಮಾಡಿದ ಪಾಪಪ್ರಜ್ಞೆಯಿಂದಲೋ ವೈದ್ಯನ ಲವರ್ 32ರ ಹರ್ಷಿತಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಗ ಅವಳ ಮಗುವೂ ಅನಾಥವಾಗಿದೆ. ಹರ್ಷಿತಾಳಿಗೂ ಗಂಡ ಬೇಡವಾಗಿದ್ದ, ರೇವಂತ್‍ಗೆ ಪತ್ನಿ ಕವಿತಾ ಬೇಡವಾಗಿದ್ದಳು, ಅವಳು ಬಿಟ್ಟು ಬಂದಳು, ಇವನು ಕೊಲೆ ಮಾಡಿಯೇ ಬರಲು ರೆಡಿಯಾಗಿದ್ದ. ಆದರೆ ಇದೀಗ ಒಂದು ಕೊಲೆ, ಎರಡು ಆತ್ಮಹತ್ಯೆಯಲ್ಲಿ ಮೂರು ಮಕ್ಕಳು ಅನಾಥವಾಗಿವೆ.