ಧಾರವಾಡ: ಧಾರವಾಡ(Dharwad) ಜಿಲ್ಲಾ ನ್ಯಾಯಾಲಯಕ್ಕೆ (District Court) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ (Bomb threat) ಬಂದ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಕಲಾಪಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಹೊರಗೆ ಕಳುಹಿಸಲಾಯಿತು.
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಅನುಮಾನಾಸ್ಪದ ಇ-ಮೇಲ್ ಬಂದಿದ್ದು, ಅದರಲ್ಲಿ ಬಾಂಬ್ ಸ್ಫೋಟದ ಬಗ್ಗೆ ಬೆದರಿಕೆ ಹಾಕಲಾಗಿದೆ. “Karunanidhi.kundi.@underworlddog” ಎಂಬ ಇ-ಮೇಲ್ ವಿಳಾಸದಿಂದ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ನಿನ್ನೆ ಮಧ್ಯಾಹ್ನ 2 ಗಂಟೆಗೆ ನಿಮ್ಮ ನ್ಯಾಯಾಲಯದಲ್ಲಿ 23 ಸರಣಿ ಗುಂಡುಗಳು ಸ್ಫೋಟಗೊಂಡಿವೆ. ನಿನ್ನೆ ನಡೆದಿದ್ದು ಸ್ಯಾಂಪಲ್ ಪರೀಕ್ಷೆ. ಇಂದು ನಡೆಯುವುದು ನಿಜ ಎಂದು ಉಲ್ಲೇಖಿಸಲಾಗಿದೆ.
ಬೆದರಿಕೆ ಮೇಲ್ ಬಂದ ತಕ್ಷಣ ಪೊಲೀಸರು ಅಲರ್ಟ್ ಆಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದೊಳಗಿದ್ದ ಸಿಬ್ಬಂದಿ, ವಕೀಲರು ಹಾಗೂ ಸಾರ್ವಜನಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ.ಇದನ್ನೂ ಓದಿ: ನಡು ರಸ್ತೆಯಲ್ಲಿ ತಲ್ವಾರ್‌ನಿಂದ ಬೃಹತ್ ಕೇಕ್ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್ – ಪುಂಡನ ವಿರುದ್ಧ ಎಫ್‌ಐಆರ್
ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ನ್ಯಾಯಾಲಯದ ಆವರಣದಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಜಿಲ್ಲಾ ನ್ಯಾಯಾಲಯದ ಪ್ರತಿಯೊಂದು ವಿಭಾಗದಲ್ಲೂ ಪರಿಶೀಲನೆ ನಡೆಯುತ್ತಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ನ್ಯಾಯಾಲಯದ ಆವರಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಬೆದರಿಕೆ ಮೇಲ್ ಕಳುಹಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.ಇದನ್ನೂ ಓದಿ: ಗ್ರಾಹಕನ ಸೋಗಿನಲ್ಲಿ ಬಂದು ಸಿನಿಮಾ ಶೈಲಿಯಲ್ಲಿ ಚಿನ್ನದ ಸರ ಕದ್ದು ಪರಾರಿ
