ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿಯಲ್ಲಿ ಹಗಲು ಹೊತ್ತಿನಲ್ಲೇ ಗ್ರಾಹಕನ ಸೋಗಿನಲ್ಲಿ ಬಂದ ಖದೀಮನೊಬ್ಬ ಆಭರಣ ಅಂಗಡಿಯಿಂದ ಚಿನ್ನದ ಸರವನ್ನು (Gold Chain) ಕದ್ದೊಯ್ದಿರುವ ಘಟನೆ ನಡೆದಿದೆ.
ಬಾಗಲಕೋಟೆ (Bagalkote) ವಿದ್ಯಾಗಿರಿ ಠಾಣಾ ವ್ಯಾಪ್ತಿಯ ಪ್ರಸಿದ್ಧ ಬೆಂಬಳಗಿ ಜ್ಯುವೆಲ್ಲರ್ಸ್ (Bembagi Jewellers) ಆಭರಣ ಮಳಿಗೆಯಲ್ಲಿ ಈ ಸಿನಿಮಾ ಮಾದರಿಯ ಕಳ್ಳತನ ನಡೆದಿದ್ದು, ಇಡೀ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜೀನ್ಸ್ ಪ್ಯಾಂಟ್, ಲಾಂಗ್ ಶರ್ಟ್ ಹಾಗೂ ಶೂ ಧರಿಸಿ ಫುಲ್ ಅಪ್‌ಟುಡೇಟ್ ಆಗಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಚಿನ್ನದ ಸರ ಖರೀದಿಸುವ ನೆಪದಲ್ಲಿ ಅಂಗಡಿಗೆ ಪ್ರವೇಶಿಸಿದ್ದಾನೆ. ಅಂಗಡಿಯ ಸಿಬ್ಬಂದಿ ಆತನಿಗೆ ವಿವಿಧ ವಿನ್ಯಾಸದ ಚಿನ್ನದ ಸರಗಳನ್ನು ತೋರಿಸುತ್ತಾ ವಿವರಣೆ ನೀಡುತ್ತಿದ್ದರು. ಈ ವೇಳೆ ಕಳ್ಳನ ಪಕ್ಕದಲ್ಲೇ ನಿಂತಿದ್ದ ದಂಪತಿಯೊಬ್ಬರು ತಮಗಾಗಿ ಬೇರೆ ಆಭರಣಗಳನ್ನು ನೋಡುವುದರಲ್ಲಿ ಮಗ್ನರಾಗಿದ್ದರು. ಇದನ್ನೂ ಓದಿ: ಕುಟುಂಬ ಸಮೇತರಾಗಿ ಬೆಳ್ಳಂಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ಡಿಕೆಶಿ
ಇದೇ ಪರಿಸ್ಥಿತಿಯ ಲಾಭ ಪಡೆದ ಆ ಖತರ್ನಾಕ್ ಕಳ್ಳ, ಸಿಬ್ಬಂದಿ ಕೈಲಿದ್ದ 25 ಗ್ರಾಂ ತೂಕದ ಚಿನ್ನದ ಸರವನ್ನು ತಾನು ನೋಡುವುದಾಗಿ ಹೇಳಿ ಕೈಯಲ್ಲಿ ಹಿಡಿದು ಪರಶೀಲಿಸುತ್ತಿದ್ದ. ಕೈಯಲ್ಲಿ ಹಿಡಿದು ಪರಿಶೀಲಿಸುವಂತೆ ನಟಿಸುತ್ತಿದ್ದ ಆತ, ಸಿಬ್ಬಂದಿ ಹಾಗೂ ಪಕ್ಕದಲ್ಲಿದ್ದ ದಂಪತಿಯ ಗಮನ ಬೇರೆಡೆ ಇದ್ದದ್ದನ್ನು ಕಂಡು, ಕ್ಷಣಾರ್ಧದಲ್ಲಿ ಸರದೊಂದಿಗೆ ಅಂಗಡಿಯಿಂದ ಹೊರಗೆ ಓಡಿ ನಾಪತ್ತೆಯಾಗಿದ್ದಾನೆ.
ಹಗಲು ಹೊತ್ತಿನಲ್ಲೇ, ಅದೂ ಜನನಿಬಿಡ ಪ್ರದೇಶದ ಪ್ರತಿಷ್ಠಿತ ಅಂಗಡಿಯಲ್ಲಿ ಇಂತಹ ಧೈರ್ಯದ ಕಳ್ಳತನ ನಡೆದಿರುವುದು ಬಾಗಲಕೋಟೆಯ ಚಿನ್ನದ ವರ್ತಕರು ಹಾಗೂ ಸ್ಥಳೀಯ ವ್ಯಾಪಾರಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಿದ್ಯಾಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
