– ಕೇಂದ್ರ ಸರ್ಕಾರ ಅನುಮೋದನೆ ನೀಡದಂತೆ ವಿಜಯ್ ಸರ್ಕಾರ ಒತ್ತಾಯ
ಚೆನ್ನೈ: ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನೆಗೆ ತಾಂತ್ರಿಕ ಮತ್ತು ಪರಿಸರ ಅನುಮತಿ (ಕ್ಲಿಯರೆನ್ಸ್) ಸೇರಿ ಯಾವುದೇ ಅನುಮೋದನೆ ನೀಡದಂತೆ ಕೇಂದ್ರ ಸರ್ಕಾರವನ್ನ (Central Government) ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ (Tamil Nadu Assembly) ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಿತು. ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ನಿರ್ಣಯ ಮಂಡಿಸಿದರು.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು (Mekedatu Dam Project) ನಿರ್ಮಿಸುವ ಕರ್ನಾಟಕ ಸರ್ಕಾರದ ನಿರ್ಧಾರ ʻಏಕಪಕ್ಷೀಯ ಕ್ರಮʼವಾಗಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯು ಕಾವೇರಿ ಜಲ ವಿವಾದ ನ್ಯಾಯಮಂಡಳಿಯ 2007 ರ ಅಂತಿಮ ತೀರ್ಪು ಮತ್ತು ಸುಪ್ರೀಂ ಕೋರ್ಟ್‌ನ 2018 ರ ಆದೇಶವನ್ನ ನಿರ್ಲಕ್ಷಿಸಿದೆ. ಅಲ್ಲದೇ ಜಲಾನಯನ ರಾಜ್ಯಗಳ ಒಪ್ಪಿಗೆ ಅಥವಾ ಕೇಂದ್ರ ಸರ್ಕಾರದ ಅನುಮೋದನೆಯಿಲ್ಲದೇ ಇದನ್ನ ಅನುಸರಿಸಲಾಗಿದೆ. ಇಂತಹ ಕ್ರಮವು ಸ್ವೀಕಾರಾರ್ಹವಲ್ಲ ಎಂದು ವಿಜಯ್ (C Joseph Vijay) ಮಂಡಿಸಿದ ನಿರ್ಣಯದಲ್ಲಿ ತಿಳಿಸಿದರು.

ಕಾವೇರಿ ಜಲಾನಯನ ಪ್ರದೇಶವು ನೀರಿನ ಕೊರತೆ ಇರುವ ಪ್ರದೇಶವಾಗಿದೆ. ಲಭ್ಯವಿರುವ ನೀರನ್ನ ಈಗಾಗಲೇ ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ ಎಂದು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ಎರಡೂ ಗಮನಿಸಿವೆ. ಜಲಾನಯನ ಪ್ರದೇಶದಲ್ಲಿ ಯಾವುದೇ ಹೊಸ ಯೋಜನೆ ಕೈಗೊಳ್ಳಬಾರದು ಹಾಗೂ ಜೊತೆಗೆ ಹೆಚ್ಚುವರಿ ಪ್ರಮಾಣದ ನೀರನ್ನ ಬಳಸಿಕೊಳ್ಳಲು ಅವಕಾಶ ನೀಡಬಾರದು ಎಂದು ನಿರ್ಣಯವು ಒತ್ತಿಹೇಳಿದೆ.
ಕಾವೇರಿ ನೀರಿನ ಸಮಸ್ಯೆ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಆದ್ದರಿಂದ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಸ್ಥಳದಲ್ಲಿ ಇತರ ಜಲಾನಯನ ರಾಜ್ಯಗಳ ಒಪ್ಪಿಗೆಯಿಲ್ಲದೇ ಹಾಗೂ ಕೇಂದ್ರ ಸರ್ಕಾರದ ಅನುಮೋದನೆಯಿಲ್ಲದೇ ಅಣೆಕಟ್ಟು ಅಥವಾ ಹೊಸ ನೀರು ಸಂಗ್ರಹಣಾ ಯೋಜನೆ ಕೈಗೊಳ್ಳಬಾರದು. ಈ ರೀತಿ ಕರ್ನಾಟಕ ಸರ್ಕಾರ ಸಲಹೆ ನೀಡುವಂತೆ ಸದನವು ಒತ್ತಾಯಿಸುತ್ತದೆ ಎಂದು ನಿರ್ಣಯದಲ್ಲಿ ತಿಳಿಸಿದೆ.

ತಮಿಳುನಾಡು ಸರ್ಕಾರವು ಕೇಂದ್ರ ಜಲ ಆಯೋಗ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದು, ರಾಜ್ಯದ ರೈತರ ಹಿತಾಸಕ್ತಿಯನ್ನ ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಸಲ್ಲಿಸಿರುವ ವಿವರವಾದ ಯೋಜನಾ ವರದಿ (DPR)ಯನ್ನು ಪರಿಶೀಲಿಸಬಾರದು, ಪ್ರಕ್ರಿಯೆಗೊಳಿಸಬಾರದು ಹಾಗೂ ಅನುಮೋದಿಸಬಾರದು ಎಂದು ಆಗ್ರಹಿಸಿದೆ.
ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಮಂಡಿಸಿದ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯ ಎಲ್ಲಾ ಪಕ್ಷಗಳ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು.
