ನವದೆಹಲಿ: ಹುಡುಗಿಯರು ಅಥವಾ ಮಹಿಳೆಯರು ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬುದು ಅವರ ವೈಯಕ್ತಿಕ ಆಯ್ಕೆಯಾಗಿದೆ. ಹುಡುಗಿ ಜೀನ್ಸ್ ಧರಿಸುವುದರಿಂದ ‘ಯುವಕರ ಮನಸ್ಸು ಹಾಳಾಗಬಹುದು’ ಎಂದು ಹೇಳುವುದು ಅತ್ಯಂತ ಆತಂಕಕಾರಿ ಹಾಗೂ ಒಪ್ಪಲಾಗದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
2013ರಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನ ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದ್ದ ತೀರ್ಪನ್ನು ರದ್ದುಗೊಳಿಸಿದ ಹೈಕೋರ್ಟ್, ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಅಪರಾಧ ನಡೆದಿದೆಯೇ ಅಥವಾ ಇಲ್ಲವೇ ಎಂಬುದಷ್ಟೇ ಪರಿಗಣಿಸಬೇಕಾಗಿತ್ತು. ಆದರೆ ವಿಚಾರಣಾ ನ್ಯಾಯಾಲಯವು ಯುವತಿಯ ಹೇಳಿಕೆಯನ್ನ ಅನುಮಾನಿಸಲು ಪ್ರಕರಣಕ್ಕೆ ಸಂಬಂಧಿಸದ ಅಂಶಗಳನ್ನ ಆಧಾರವಾಗಿಸಿಕೊಂಡಿದೆ ಎಂದು ಹೈಕೋರ್ಟ್ ಹೇಳಿದೆ.
ಆದರೆ, ಯುವತಿ ಅಪ್ರಾಪ್ತ ವಯಸ್ಕಳು ಎಂಬುದನ್ನು ಪ್ರಾಸಿಕ್ಯೂಷನ್ ಸಮರ್ಪಕವಾಗಿ ಸಾಬೀತುಪಡಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ POCSO ಕಾಯ್ದೆಯನ್ನ ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯುವತಿಗೆ ಕಿರುಕುಳ ನೀಡಿದ ಆರೋಪ
ಆರೋಪಿ ಯುವತಿಯ ನೆರೆಹೊರೆಯವನಾಗಿದ್ದು, ತನ್ನನ್ನು ಹಿಂಬಾಲಿಸುತ್ತಿದ್ದ, ಲೈಂಗಿಕ ಅರ್ಥದ ಮಾತುಗಳನ್ನ ಆಡುತ್ತಿದ್ದ ಹಾಗೂ ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎಂದು ಯುವತಿ ಆರೋಪಿಸಿದ್ದಳು. 2014ರಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ವೇಳೆ ರಕ್ಷಣಾ ವಕೀಲರು ನಡೆಸಿದ ಪ್ರತಿಪ್ರಶ್ನೆ ಹಾಗೂ ವಾದಗಳಲ್ಲಿ ಯುವತಿಯ ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿಯ ಪ್ರಶ್ನೆಗಳನ್ನು ಎತ್ತಿರುವುದಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಯುವತಿ ಧರಿಸುತ್ತಿದ್ದ ‘ಪಾಶ್ಚಾತ್ಯ’ ಉಡುಪು, ಆ ಪ್ರದೇಶದಲ್ಲಿರುವ ಜನರ ಧರ್ಮ ಹಾಗೂ ಆಕೆಯ ಬಟ್ಟೆಗಳಿಗೆ ಸ್ಥಳೀಯರು ವ್ಯಕ್ತಪಡಿಸಿದ್ದ ಆಕ್ಷೇಪಣೆಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು.
‘ಹುಡುಗಿ ಏನು ಧರಿಸಬೇಕು ಎಂಬುದನ್ನು ಯಾರೂ ನಿರ್ದೇಶಿಸಲು ಸಾಧ್ಯವಿಲ್ಲ’
ಆದ್ರೆ ನ್ಯಾಯಮೂರ್ತಿ ಚಂದ್ರಶೇಖರನ್ ಸುಧಾ ಅವರು ತೀರ್ಪಿನಲ್ಲಿ, “ಹುಡುಗಿ ಅಥವಾ ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ವೈಯಕ್ತಿಕ ಆಯ್ಕೆಯ ವಿಚಾರ. ಆಕೆಯ ನೆರೆಹೊರೆಯವರು, ಸಮಾಜ, ಆರೋಪಿ ಅಥವಾ ನ್ಯಾಯಾಲಯದಲ್ಲಿ ವಾದಿಸುವ ವಕೀಲರು ಕೂಡ ಆಕೆಯ ಉಡುಪಿನ ಬಗ್ಗೆ ನಿರ್ದೇಶನ ನೀಡುವ ಯಾವುದೇ ಹಕ್ಕನ್ನು ಹೊಂದಿಲ್ಲ. ಅದು ಅವರ ಕಾಳಜಿಯ ವಿಷಯವೇ ಅಲ್ಲʼʼ ಎಂದು ಹೇಳಿದ್ದಾರೆ.

ಮುಂದುವರಿದು, ಮಹಿಳೆಯೊಬ್ಬರು ಜೀನ್ಸ್ ಧರಿಸುವುದರಿಂದ ‘ಯುವಕರ ಮನಸ್ಸು ಹಾಳಾಗಬಹುದು’ ಎಂಬ ವಾದವು ʻಆಳವಾಗಿ ಆತಂಕಕಾರಿ ಮತ್ತು ಒಪ್ಪಲಾಗದ ಮನಸ್ಥಿತಿಯನ್ನುʼ ತೋರಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
‘ಹುಡುಗಿಯರನ್ನ ಬಟ್ಟೆಯಿಂ ನಿಯಂತ್ರಿಸುವುದಲ್ಲ, ನಡವಳಿಕೆ ಕಲಿಸಬೇಕು’
ʻಇದಕ್ಕೆ ಪರಿಹಾರವೆಂದರೆ ಹುಡುಗಿಯರು ಮತ್ತು ಮಹಿಳೆಯರ ಉಡುಪುಗಳನ್ನ ನಿಯಂತ್ರಿಸುವುದಲ್ಲ. ಬದಲಾಗಿ, ಪೋಷಕರು ಮತ್ತು ಸಮಾಜವು ಮಕ್ಕಳಿಗೆ ತಮ್ಮ ನಡವಳಿಕೆಯನ್ನು ನಿಯಂತ್ರಿಸಿಕೊಳ್ಳುವುದು, ಇತರರ ವೈಯಕ್ತಿಕ ಗಡಿಗಳನ್ನು ಗೌರವಿಸುವುದು ಹಾಗೂ ಮನೆಯಲ್ಲಿ ಅಥವಾ ಹೊರಗೆ ಪ್ರತಿಯೊಬ್ಬ ಮನುಷ್ಯನನ್ನೂ ಗೌರವ ಮತ್ತು ಘನತೆಯಿಂದ ಕಾಣುವುದನ್ನು ಕಲಿಸಬೇಕುʼ ಎಂದು ನ್ಯಾಯಮೂರ್ತಿ ಸುಧಾ ಹೇಳಿದ್ದಾರೆ.
ಉಡುಪು ಮಹಿಳೆಯ ಘನತೆಯನ್ನ ಕಡಿಮೆ ಮಾಡಲ್ಲ
ಮಹಿಳೆಯೊಬ್ಬಳ ಉಡುಪಿನ ಆಯ್ಕೆಯಿಂದ ಆಕೆಯ ಘನತೆ ಕಡಿಮೆಯಾಗುವುದಿಲ್ಲ. ಆಕೆಯ ವಿರುದ್ಧ ಕಾನೂನುಬಾಹಿರ ಕೃತ್ಯ ಎಸಗಲು ಅದನ್ನು ಯಾವುದೇ ಕಾರಣವಾಗಿಯೂ ಬಳಸಲು ಸಾಧ್ಯವಿಲ್ಲ. ಮಹಿಳೆಯ ಉಡುಪು, ಚಾರಿತ್ರ್ಯ, ಜೀವನಶೈಲಿ, ಧರ್ಮ ಅಥವಾ ವೈಯಕ್ತಿಕ ಆಯ್ಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನ ಪ್ರಕರಣದ ವಿಚಾರಣೆಯಲ್ಲಿ ಕೇಳಲು ಅವಕಾಶ ನೀಡಬಾರದು. ಆದರೆ ಅವು ಪ್ರಕರಣದಲ್ಲಿನ ನಿರ್ದಿಷ್ಟ ವಿಚಾರಕ್ಕೆ ಕಟ್ಟುನಿಟ್ಟಾಗಿ ಸಂಬಂಧಿಸಿದ್ದರೆ ಮಾತ್ರ ಪರಿಗಣಿಸಬಹುದು ಎಂದು ಹೈಕೋರ್ಟ್ ಹೇಳಿದೆ.

ಆರೋಪಿಗೆ ಶಿಕ್ಷೆ; POCSO ಆರೋಪದಿಂದ ವಿನಾಯಿತಿ
ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಲು ನೀಡಿದ್ದ ಕಾರಣಗಳು ಪ್ರಕರಣದ ಮೂಲ ಅಂಶಗಳಿಗೆ ಸಂಬಂಧಿಸದವು ಮತ್ತು ಪ್ರಾಸಿಕ್ಯೂಷನ್‌ನ ಪ್ರಮುಖ ಆರೋಪವನ್ನು ದುರ್ಬಲಗೊಳಿಸುವುದಿಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿದೆ. ಪ್ರಕರಣದ ದಾಖಲೆಗಳಲ್ಲಿರುವ ಸಾಕ್ಷ್ಯಾಧಾರಗಳು IPC ಸೆಕ್ಷನ್ 354A(1)(i) ಅಡಿಯಲ್ಲಿ ಅಪರಾಧ ಸಾಬೀತಾಗಲು ಸಾಕಷ್ಟು ಎಂದು ಹೇಳಿದ ಹೈಕೋರ್ಟ್, ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿದೆ. ಆದರೆ, ಯುವತಿ ಅಪ್ರಾಪ್ತ ವಯಸ್ಕಳು ಎಂಬುದನ್ನು ಸಮರ್ಪಕವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿರುವ ಹಿನ್ನೆಲೆಯಲ್ಲಿ POCSO ಕಾಯ್ದೆಯಡಿ ಆರೋಪವನ್ನ ಅನ್ವಯಿಸಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

