ಮುಂಬೈ: ಪೋಕ್ಸೋ ಪ್ರಕರಣದಲ್ಲಿ (POCSO Case) ಜೈಲು ಸೇರಿದ್ದ 18ರ ಯುವಕನಿಗೆ ಜೂ.21 ರಂದು ನಿಗದಿಯಾಗಿರುವ ನೀಟ್ ಮರು ಪರೀಕ್ಷೆಗೆ (NEET UG 2026 re-Exam) ಹಾಜರಾಗಲು ಮುಂಬೈನ (Mumbai) ವಿಶೇಷ ಪೋಕ್ಸೋ ನ್ಯಾಯಾಲಯ ನಾಲ್ಕು ದಿನಗಳ ತಾತ್ಕಾಲಿಕ ಜಾಮೀನು ನೀಡಿದೆ.
ಆರೋಪಿಯ ಜಾಮೀನು ಅರ್ಜಿಗೆ ಸಂತ್ರಸ್ತೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಇದರಿಂದ ಜಾಮೀನಿನಲ್ಲಿದ್ದಾಗ ಸಂತ್ರಸ್ತೆಯ ಕುಟುಂಬಕ್ಕೆ ಮಾನಹಾನಿ, ಬೆದರಿಕೆ ಹಾಕುವುದಿಲ್ಲ ಎಂಬ ಭರವಸೆ ಮೇಲೆ ವಿಶೇಷ ನ್ಯಾ.ಎಸ್ ಆರ್ ಶರ್ಮಾ ಅವರಿದ್ದ ಪೀಠ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆದೇಶದಲ್ಲಿ 50,000 ರೂ.ಗಳ ಬಾಂಡ್ ಮತ್ತು ಅದೇ ಮೊತ್ತದ ಶೂರಿಟಿ ನೀಡುವಂತೆ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ನೀಟ್‌ಗಾಗಿ ಟೆಲಿಗ್ರಾಂ ನಿಷೇಧ – ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್
ನೀಟ್ ಮರು ಪರೀಕ್ಷೆ ನಡೆದ ಒಂದು ದಿನದ ನಂತರ ಅಂದರೆ ಜೂ.22 ರಂದು ಮಧ್ಯಾಹ್ನ 2 ಗಂಟೆಯ ಮೊದಲು ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಸೂಚಿಸಿದೆ.
ಆರೋಪಿ ಪರವಾಗಿ ವಕೀಲ ಕಪಿಲ್ ವಿಶ್ವಾಸ್ ಜೋಡ್ಜ್ ವಾದ ಮಂಡಿಸಿ, ಅಪರಾಧ ನ್ಯಾಯ ವ್ಯವಸ್ಥೆಯು ಶಿಕ್ಷೆಗೊಳಗಾದ ಅಪರಾಧಿಗಳು ಮತ್ತು ಜೈಲಿನಲ್ಲಿರುವ ವ್ಯಕ್ತಿಗಳ ಪುನರ್ವಸತಿಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿವೆ. ಇದರಿಂದ ಅರ್ಜಿದಾರನಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಮನವಿ ಮಾಡಿದರು.
ಪೊಲೀಸ್ ಬೆಂಗಾವಲಿನಲ್ಲಿ ಪರೀಕ್ಷೆ ಬರೆಸುವುದರಿಂದ ಆತನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. ಆರೋಪಿಗೆ ಪರೀಕ್ಷೆಗೆ ತಯಾರಿ ನಡೆಸಲು ಸಮಯ ಬೇಕಾಗುತ್ತದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಚೈತ್ರಾಲಿ ಪನ್ಶಿಕರ್, ಯುವಕನ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ. ನ್ಯಾಯಾಲಯ ಜಾಮೀನು ನೀಡಬಾರದು ಎಂದು ವಾದಿಸಿದರು. ಆರೋಪಿಗೆ ಒಂದು ದಿನ ಮಾತ್ರ ಪೊಲೀಸ್ ಬೆಂಗಾವಲಿನಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ವಾದ ಪ್ರತಿವಾದವನ್ನು ಗಮನಿಸಿದ ನ್ಯಾಯಾಲಯ (Court), ಸಂತ್ರಸ್ತೆಯನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಬಾರದು. ಸಾಕ್ಷ್ಯಗಳನ್ನು ಹಾಳು ಮಾಡಬಾರದು. ಪ್ರಕರಣದಲ್ಲಿ ಪರಿಚಯವಿರುವ ಯಾರನ್ನೂ ಪ್ರಚೋದಿಸುವುದಾಗಲಿ ಅಥವಾ ಬೆದರಿಕೆ ಹಾಕುವುದಾಗಲಿ ಮಾಡಬಾರದು ಎಂದು ನಿರ್ದೇಶಿಸಿತು. ಅಲ್ಲದೇ ಪರೀಕ್ಷೆಗೆ ಹಾಜರಾದ ಬಗ್ಗೆ ದಾಖಲೆ ಒದಗಿಸುವಂತೆ ಸೂಚಿಸಿ, ಜಾಮೀನು ಮಂಜೂರು ಮಾಡಿತು. ಇದನ್ನೂ ಓದಿ: ವಚನಾನಂದ ಶ್ರೀ ಜಾಮೀನು ರದ್ದತಿ ಅರ್ಜಿ ಅದೇಶ ಜೂನ್ 30ಕ್ಕೆ ಮುಂದೂಡಿಕೆ
