ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಅವರ ಮುಂದಿನ ಸಿನಿಮಾ ಬಗ್ಗೆ ಹಲವು ದಿನಗಳಿಂದ ಚರ್ಚೆ ಆಗುತ್ತಲೇ ಇದೆ. ಕೆಜಿಎಫ್ 2 (KGF 2) ಸಿನಿಮಾ ರಿಲೀಸ್ ದಿನದಿಂದ ಈವರೆಗೂ ಯಶ್ ನಟನೆಯ 19ನೇ ಸಿನಿಮಾ ಬಗ್ಗೆ ಅಭಿಮಾನಿಗಳು ಅಪ್ ಡೇಟ್ ಕೇಳುತ್ತಲೇ ಇದ್ದಾರೆ. ಆದರೆ, ಈವರೆಗೂ ಒಂದೇ ಒಂದು ಅಪ್ ಡೇಟ್ ಕೂಡ ನೀಡಿರಲಿಲ್ಲ. ಈಗ ಶ್ರೀಲಂಕಾ ದೇಶದಿಂದ ಅಪ್ ಡೇಟ್ ಸಿಕ್ಕಿದೆ. ಅದು ಶ್ರೀಲಂಕಾ (Sri Lanka) ಸರಕಾರವೇ ಈ ಮಾಹಿತಿಯನ್ನು ಹೊರಹಾಕಿದೆ.
ಕಳೆದ ಮೂರು ದಿನಗಳಿಂದ ಯಶ್ ಶ್ರೀಲಂಕಾದಲ್ಲಿ ಬೀಡು ಬಿಟ್ಟಿದ್ದಾರೆ. ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿದವರು ಯಶ್ ಶ್ರೀಲಂಕಾ ಪ್ರವಾಸದಲ್ಲಿ ಇದ್ದಾರೆ ಅಂದುಕೊಂಡಿದ್ದರು. ಬೇಸಿಗೆ ರಜೆಯನ್ನು ಕಳೆಯಲು ಅವರು ಅಲ್ಲಿಗೆ ಹೋಗಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಶ್ರೀಲಂಕಾ ಸರಕಾರ ಬೇರೆಯದ್ದೇ ಮಾಹಿತಿಯನ್ನು ಕೊಟ್ಟಿದೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉತ್ತರಾ ಬಾಕರ್ ವಿಧಿವಶ
ಈ ಕುರಿತು ಬೋರ್ಡ್ ಆಫ್ ಇನ್ ವೆಸ್ಟ್ ಮೆಂಟ್ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ (Dinesh Verakkodi) ಅವರು ಮಾಹಿತಿ ಹಂಚಿಕೊಂಡಿದ್ದು, ‘ಭಾರತದ ಜನಪ್ರಿಯ ವ್ಯಕ್ತಿಯಾಗಿರುವ, ಯಶ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ನಟ ನವೀನ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಮೂರು ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರು ಆಗಿರುವ ಅವರು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೇಳಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಹಲವು ದಿನಗಳಿಂದ ಯಶ್ ಮತ್ತು ತಂಡ ಶ್ರೀಲಂಕಾದಲ್ಲಿ ಬೀಡು ಬಿಟ್ಟಿದೆ. ಅಲ್ಲಿನ ಸಿನಿಮಾ ಉದ್ಯಮಿಗಳನ್ನು ಮತ್ತು ತಂತ್ರಜ್ಞರನ್ನು ಯಶ್ ಭೇಟಿ ಮಾಡುತ್ತಿದ್ದಾರೆ. ಅಲ್ಲದೇ, ಚಿತ್ರೀಕರಣ ಸ್ಥಳವನ್ನೂ ಅವರು ಹುಡುಕುತ್ತಿದ್ದಾರೆ. ಅಲ್ಲಿಗೆ ಸದ್ಯದಲ್ಲಿ ಯಶ್ 19ನೇ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.