ಕಲಬುರಗಿ: ಏ.22ರಂದು ಪಹಲ್ಗಾಮ್ ದಾಳಿಯಾದ (Pahalgam Terrorist Attack) ನಂತರದಿಂದ ಮೇ12ರವರೆಗೆ ಮೋದಿ (PM Modi) ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಮಧ್ಯೆ ಮೋದಿ ಎಲ್ಲಿಗೆ ಹೋಗಿದ್ದರು ಎಂದು ಬಹಿರಂಗಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ವಿರಾಮ ಘೋಷಣೆ ಬಳಿಕ ಅದಮ್‌ಪುರ ಸೇನಾ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ, ನಮ್ಮ ಸೈನಿಕರಿಗೆ ನೈತಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆದರೆ ಮೋದಿ ಹಲವು ಪ್ರಶ್ನೆಗಳಿಗೆ ಇಲ್ಲಿಯವರೆಗೂ ಉತ್ತರಿಸಿಲ್ಲ. ಏ.22ರಂದು ಪಹಲ್ಗಾಮ್ ಘಟನೆ ನಡೆದಾಗಲೂ ಪ್ರಧಾನಿ ಮೋದಿ ಬಿಹಾರ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮಾಕ್ ಡ್ರಿಲ್ ನಡೆದ ಭಾರತದ ಗಡಿ ಭಾಗದಲ್ಲೂ ಮೋದಿ ಕಂಡು ಬರಲಿಲ್ಲ. ಟ್ರಂಪ್ ಯುದ್ಧ ವಿರಾಮ ಘೋಷಣೆ ಮಾಡಿದ ಬಳಿಕ ಮೇ 12ರಂದು ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ಕಾಣಿಸಿಕೊಂಡರು. ಹಾಗಾದರೆ, ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಮೋದಿ ಎಲ್ಲಿಗೆ ಹೋಗಿದ್ದರು? ಎಂಬುದನ್ನು ಬಹಿರಂಗಪಡಿಸಲಿ ಎಂದರು. ಇದನ್ನೂ ಓದಿ: ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ
ಮೋದಿ ಆಪ್ತ ಮಿತ್ರ ಟ್ರಂಪ್ ಈವರೆಗೆ ನಾಲ್ಕು ಬಾರಿ ಭಾರತ ಮತ್ತು ಪಾಕ್ ಮಧ್ಯೆ ಯುದ್ಧ ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮಂಗಳವಾರ ಸೌದಿ ಅರೇಬಿಯಾದಲ್ಲಿಯೂ ಟ್ರಂಪ್ ಅದನ್ನೇ ಹೇಳಿದ್ದಾರೆ. ಇಷ್ಟು ಸಾಲದು ಎಂಬಂತೆ ನಮ್ಮನ್ನು ಉಗ್ರ ರಾಷ್ಟ್ರಕ್ಕೆ ಟ್ರಂಪ್ ಹೋಲಿಕೆ ಮಾಡುತ್ತಿದ್ದಾರೆ. ಇಷ್ಟಾದರೂ, ಮೋದಿ ಏಕೆ ಮೌನವಹಿಸಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಪ್ರತಿ ಬಾರಿಯೂ ತಮ್ಮಿಂದಲೇ ಕದನ ವಿರಾಮ ಸಾಧ್ಯವಾಗಿದೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಹಾಗಾದರೆ, ನಮ್ಮ ವಿದೇಶಾಂಗ ನೀತಿ ಟ್ರಂಪ್ ಅವರಿಗೆ ಅಡವಿಡಲಾಗಿದೆಯೇ? ಒಂದು ಕಡೆ ಟ್ರಂಪ್, ಈ ಎರಡು ದೇಶಗಳು ನನ್ನಿಂದಲೇ ನಡೆಯುತ್ತಿವೆ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ. ಆದರೂ ಮೋದಿ ಮೌನವಾಗಿದ್ದಾರೆ. ನಮ್ಮ ರಾಷ್ಟ್ರದ ಘನತೆ-ಗೌರವ ಬೇರೆ ರಾಷ್ಟ್ರದ ಬಳಿ ಇಡಬೇಡಿ. ಅವರು (ಟ್ರಂಪ್) ನಿಮಗೆ ಸ್ನೇಹಿತರೇ ಆಗಿದ್ದರೂ ಸರಿ, ನಮ್ಮನ್ನು ಅವರ ಬಳಿ ಅಡವಿಡಬೇಡಿ ಎಂದರು.
ಬಹಿರಂಗವಾಗಿ ಸುದ್ದಿಗೋಷ್ಠಿ ಮಾಡುವಂತೆ ಮೋದಿಗೆ ಸವಾಲ್
ಮೋದಿಯವರ ಮನ್ ಕೀ ಬಾತ್ ಕೇಳಿ ಕೇಳಿ ಜನರ ಕಿವಿ ಕಿತ್ತು ಹೋಗಿದೆ. ಹಾಗಾಗಿ, ಕನಿಷ್ಠ ನಿಮ್ಮದೇ ಮೀಡಿಯಾ ಸ್ನೇಹಿತರು ಹಾಗೂ ಇತರ ಮಾಧ್ಯಮದವರ ಜೊತೆ ಸುದ್ದಿಗೋಷ್ಠಿ ಮಾಡಿದರೆ ನಮ್ಮ ಪ್ರಧಾನಿಗೆ 56 ಇಂಚಿನೆದೆ ಇದೆ ಎಂದು ನಾವೆಲ್ಲರೂ ಒಪ್ಪುತ್ತೇವೆ ಎಂದು ಲೇವಡಿ ಮಾಡಿದರು.ಇದನ್ನೂ ಓದಿ: ಕಾರವಾರಕ್ಕೆ ಸರಕು ಹಡಗಿನಲ್ಲಿ ಆಗಮಿಸಿದ್ದ ಪಾಕ್ ಪ್ರಜೆ ಶಿಪ್ ಸಮೇತ ವಾಪಸ್