ನ್ಯೂಯಾರ್ಕ್: ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಪೇಸ್‌ಎಕ್ಸ್(SpaceX) ಸಂಸ್ಥೆಯು ಷೇರು ಮಾರುಕಟ್ಟೆ (Share Market) ಪ್ರವೇಶಿಸಿದ ಬೆನ್ನಲ್ಲೇ ಎಲೋನ್ ಮಸ್ಕ್ (Elon Musk) ವಿಶ್ವದ ಮೊದಲ ಟ್ರಿಲಿಯನೇರ್ (ಲಕ್ಷ ಕೋಟಿ ಒಡೆಯ) ಆಗಿ ಇತಿಹಾಸ ಸೃಷ್ಟಿಸಿದ್ದಾರೆ.
ವಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯಲ್ಲಿ ಸ್ಪೇಸ್‌ಎಕ್ಸ್ ಷೇರುಗಳು 11% ಕ್ಕಿಂತ ಹೆಚ್ಚು ಏರಿಕೆ ಕಂಡು 150 ಡಾಲರ್ ತಲುಪಿದವು. ಇದರಿಂದಾಗಿ ಮಸ್ಕ್ ಅವರ ಸಂಪತ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ಬ್ಲೂಮ್‌ಬರ್ಗ್ ಮತ್ತು ಫೋರ್ಬ್ಸ್ ವರದಿಗಳ ಪ್ರಕಾರ ಮಸ್ಕ್ ಅವರ ಸಂಪತ್ತು 1.05 ರಿಂದ 1.1 ಟ್ರಿಲಿಯನ್ ಡಾಲರ್(ಸುಮಾರು 90 ಲಕ್ಷ ಕೋಟಿಗೂ ಅಧಿಕ ರೂ.) ದಾಟಿದೆ. ಮಸ್ಕ್ ಅವರ ಸಂಪತ್ತಿನ ಬಹುಪಾಲು ಭಾಗ ಸ್ಪೇಸ್‌ಎಕ್ಸ್ (766 ಬಿಲಿಯನ್ ಡಾಲರ್) ಮತ್ತು ಟೆಸ್ಲಾ (280 ಬಿಲಿಯನ್ ಡಾಲರ್) ಕಂಪನಿಗಳ ಷೇರುಗಳ ರೂಪದಲ್ಲಿದೆ.
ಸ್ಪೇಸ್‌ಎಕ್ಸ್ ಸಂಸ್ಥೆಯು ಐಪಿಒ (ಇನಿಶಿಯಲ್ ಪಬ್ಲಿಕ್ ಆಫರಿಂಗ್ ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ಸಾರ್ವಜನಿಕರಿಂದ ಬರೋಬ್ಬರಿ 75 ಬಿಲಿಯನ್ ಡಾಲರ್ (ಸುಮಾರು 6.2 ಲಕ್ಷ ಕೋಟಿ ರೂ.) ಬಂಡವಾಳ ಸಂಗ್ರಹಿಸುವ ಮೂಲಕ ವಿಶ್ವದಾಖಲೆ ಬರೆದಿದೆ. ಇದು ಸೌದಿ ಅರಾಮ್ಕೋ ದಾಖಲೆಯನ್ನು ಹಿಂದಿಕ್ಕಿ ಜಗತ್ತಿನ ಅತಿ ದೊಡ್ಡ ಐಪಿಒ ಎನಿಸಿಕೊಂಡಿದೆ.
2019 ರಲ್ಲಿ ಸೌದಿಯ ತೈಲ ಸಂಸ್ಥೆ ಸೌದಿ ಅರಾಮ್ಕೋ 29.4 ಬಿಲಿಯನ್ ಡಾಲರ್ ಸಂಗ್ರಹಿಸಿದ್ದೇ ದೊಡ್ಡ ದಾಖಲೆಯಾಗಿತ್ತು. ಸ್ಪೇಸ್‌ಎಕ್ಸ್ ಇದೀಗ ಅದಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಹಣವನ್ನು ಮಾರುಕಟ್ಟೆಯಿಂದ ಬಾಚಿಕೊಂಡಿದೆ.
“It is certainly hard to believe that a little company (@SpaceX) that started in a warehouse in El Segundo is now going public with the largest IPO ever.” @elonmusk pic.twitter.com/zLcXt0gJ97
— Tesla Owners Silicon Valley (@teslaownersSV) June 12, 2026
ಕಂಪನಿಯು ತನ್ನ ಒಟ್ಟು 55.5 ಕೋಟಿಗೂ ಅಧಿಕ ಷೇರುಗಳನ್ನು ಮಾರಾಟ ಮಾಡಿದ್ದು ಐಪಿಒನಲ್ಲಿ ಒಂದು ಷೇರಿನ ಬೆಲೆಯನ್ನು 135 ಡಾಲರ್ ಎಂದು ನಿಗದಿಪಡಿಸಲಾಗಿತ್ತು. ಆದರೆ ಮಾರುಕಟ್ಟೆಗೆ ಲಿಸ್ಟ್ ಆಗುತ್ತಿದ್ದಂತೆ ಭಾರೀ ಬೇಡಿಕೆಯಿಂದಾಗಿ ಇದು 150 ಡಾಲರ್‌ಗಿಂತಲೂ ಹೆಚ್ಚು ಬೆಲೆಗೆ ವ್ಯಾಪಾರ ಆರಂಭಿಸಿತು.
ಮಾರುಕಟ್ಟೆಯಲ್ಲಿ ಸ್ಪೇಸ್‌ಎಕ್ಸ್ ಷೇರುಗಳಿಗೆ ಎಷ್ಟು ಕ್ರೇಜ್ ಇತ್ತೆಂದರೆ ಕಂಪನಿಗೆ 75 ಬಿಲಿಯನ್ ಡಾಲರ್ ಹಣದ ಅವಶ್ಯಕತೆ ಇತ್ತು. ಆದರೆ ಹೂಡಿಕೆದಾರರು ಬರೋಬ್ಬರಿ 250 ಬಿಲಿಯನ್ ಡಾಲರ್‌ಗೂ ಅಧಿಕ ಹಣ ಹೂಡಲು ಬಿಡ್ ಸಲ್ಲಿಸಿದ್ದರು.
ಐಪಿಒ ನಂತರ ಸ್ಪೇಸ್‌ಎಕ್ಸ್ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್ (ಸುಮಾರು 165 ಲಕ್ಷ ಕೋಟಿ ರೂ.) ದಾಟಿದೆ. ಇದರೊಂದಿಗೆ ಸ್ಪೇಸ್‌ಎಕ್ಸ್ ಅಮೆರಿಕದ 6ನೇ ಅತಿ ದೊಡ್ಡ ಸಾರ್ವಜನಿಕ ಕಂಪನಿಯಾಗಿ ಹೊರಹೊಮ್ಮಿದೆ.
ಸ್ಪೇಸ್‌ಎಕ್ಸ್ ಕಂಪನಿಯಲ್ಲಿ ಆರಂಭದಿಂದಲೂ ದೀರ್ಘಕಾಲ ಕೆಲಸ ಮಾಡುತ್ತಿದ್ದ ಸುಮಾರು 4,400 ಕ್ಕೂ ಹೆಚ್ಚು ಸಾಮಾನ್ಯ ಉದ್ಯೋಗಿಗಳು (ಇಂಜಿನಿಯರ್‌ಗಳು, ವೆಲ್ಡರ್‌ಗಳು ಮತ್ತು ಸಿಬ್ಬಂದಿ) ಈ ಐಪಿಒ ಮೂಲಕ ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿದ್ದಾರೆ. ಕಂಪನಿಯು ಅವರಿಗೆ ಸಂಬಳದ ಭಾಗವಾಗಿ ನೀಡಿದ್ದ ಷೇರುಗಳ ಮೌಲ್ಯ ಈಗ ಗಗನಕ್ಕೇರಿದೆ.
ELON MUSK: “It is certainly hard to believe that little company that started in a warehouse in El Segundo is now going public. It was the largest IPO ever, and let me tell you, if people had told me this was gonna happen, I was like, man, you must be smoking some really good… pic.twitter.com/NAcJ9UkDqT
— DogeDesigner (@cb_doge) June 12, 2026
ಹಣ ಯಾವುದಕ್ಕೆ ಬಳಕೆಯಾಗಲಿದೆ?
ಸ್ಟಾರ್‌ಶಿಪ್ (Starship): ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಬೃಹತ್ ರಾಕೆಟ್ ಅಭಿವೃದ್ಧಿಪಡಿಸಲು.
ಸ್ಟಾರ್‌ಲಿಂಕ್ (Starlink): ಜಗತ್ತಿನಾದ್ಯಂತ ಸ್ಯಾಟಲೈಟ್ ಮೂಲಕ ಹೈ-ಸ್ಪೀಡ್ ಇಂಟರ್ನೆಟ್ ನೀಡುವ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು.
ಕೃತಕ ಬುದ್ಧಿಮತ್ತೆ (AI): ಮಸ್ಕ್ ಅವರ xAI ಸಂಸ್ಥೆಯ ತಂತ್ರಜ್ಞಾನವನ್ನು ಬಾಹ್ಯಾಕಾಶ ಸಂಶೋಧನೆಯೊಂದಿಗೆ ಜೋಡಿಸಲು ಬಳಕೆಯಾಗಲಿದೆ.
ಮಸ್ಕ್ ಅವರ ಸಂಪತ್ತು ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತ ಹಾಗೂ ಗೂಗಲ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ (304 ಬಿಲಿಯನ್ ಡಾಲರ್) ಅವರಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಅವರ ಸಂಪತ್ತು ಐರ್ಲೆಂಡ್ ಅಥವಾ ಸ್ವೀಡನ್‌ನಂತಹ ದೇಶಗಳ ಒಟ್ಟು ದೇಶೀಯ ಜಿಡಿಪಿಗಿಂತಲೂ ದೊಡ್ಡದಾಗಿದೆ.
