ಕಲಬುರಗಿ: ನಗರದ ಎಸ್‌ಪಿ ಕಚೇರಿ ಸಮೀಪದಲ್ಲಿರುವ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ(Kalaburagi Government College) ತರಗತಿ ನಡೆಯುತ್ತಿದ್ದ ವೇಳೆ ಮೇಲ್ಛಾವಣಿಯ ಸಿಮೆಂಟ್ ಪದರು ಏಕಾಏಕಿ ಕುಸಿದು ಬಿದ್ದ ಪರಿಣಾಮ ಐವರು ವಿದ್ಯಾರ್ಥಿನಿಯರು (Students) ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಕಾಲೇಜಿನ ಪ್ರಥಮ ಪಿಯುಸಿ ಕಾಮರ್ಸ್ ತರಗತಿ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಆ ಸಮಯದಲ್ಲಿ ತರಗತಿಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಠ ಆಲಿಸುತ್ತಿದ್ದರು. ಇದೇ ವೇಳೆ ಮೇಲ್ಛಾವಣಿಯ ಸಿಮೆಂಟ್ ಹೆಪ್ಪುಗಟ್ಟಿದ ಭಾಗಗಳು ವಿದ್ಯಾರ್ಥಿನಿಯರ ಮೇಲೆ ಬಿದ್ದ ಪರಿಣಾಮ ಸೃಷ್ಠಿ, ಸ್ನೇಹಾ, ಶೀತಲ್, ಪೂಜಾ ಹಾಗೂ ದಿವ್ಯಾ ಸೇರಿದಂತೆ ಐವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.
ಗಾಯಾಳು ವಿದ್ಯಾರ್ಥಿನಿಯರನ್ನು ತಕ್ಷಣ ನಗರದ ಟ್ರಾಮ್ ಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಲ ವಿದ್ಯಾರ್ಥಿನಿಯರಿಗೆ ತಲೆ, ಬೆನ್ನು ಹಾಗೂ ಮೊಣಕೈ ಭಾಗಗಳಿಗೆ ಪೆಟ್ಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಇನ್ನು ಘಟನೆಯ ದೃಶ್ಯಗಳು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಭೀಕರವಾಗಿ ಸೆರೆಯಾಗಿದ್ದು, ಮೇಲ್ಛಾವಣಿ ಕುಸಿಯುತ್ತಿದ್ದಂತೆ ವಿದ್ಯಾರ್ಥಿನಿಯರು ಭಯಭೀತರಾಗಿ ಜೀವ ಉಳಿಸಿಕೊಳ್ಳಲು ತರಗತಿಯಿಂದ ಹೊರಗೆ ಚೆಲ್ಲಾಪಿಲ್ಲಿಯಾಗಿ ಓಡಿಬರುವ ದೃಶ್ಯಗಳು ಕಂಡುಬಂದಿವೆ.
ಘಟನೆಗೆ ಕಾಲೇಜು ಕಟ್ಟಡದ ದುಸ್ಥಿತಿ ಹಾಗೂ ಸಮರ್ಪಕ ನಿರ್ವಹಣೆಯ ಕೊರತೆಯೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ. ಕಾಲೇಜಿನ ಮೂರನೇ ಅಂತಸ್ತಿನ ರೂಮ್ ನಂಬರ್ 17 ರಲ್ಲಿ ಎರಡು ವರ್ಷದ ಮೊದಲೇ ಮೇಲ್ಛಾವಣಿ ಕುಸಿದಿತ್ತು, ಈಗ ಮತ್ತೆ ರೂಮ್ ನಂಬರ್ 18ರಲ್ಲಿ ಈ ದುರಂತ ಮರುಕಳಿಸಿದೆ. ಇಡೀ ಕಾಲೇಜಿನ ಪ್ರತಿಯೊಂದು ಕೋಣೆಗಳೂ ಬಿರುಕು ಬಿಟ್ಟಿದ್ದು, ದೂರದ ಹಳ್ಳಿಗಳಿಂದ ಆಗಮಿಸುವ 2000ಕ್ಕೂ ಹೆಚ್ಚು ಬಡ ವಿದ್ಯಾರ್ಥಿನಿಯರು ಪ್ರತಿದಿನ ಆತಂಕದಲ್ಲೇ ವಿದ್ಯಾಭ್ಯಾಸ ಮಾಡುವಂತಾಗಿದೆ. ಇದನ್ನೂ ಓದಿ: ಕರ್ತವ್ಯ ಲೋಪದ ಹಿನ್ನೆಲೆ ಅಮಾನತು – ಜೈಲರ್ ಆತ್ಮಹತ್ಯೆ
ಸರಕಾರಿ ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ಸುರಕ್ಷತೆ ಕುರಿತು ಮತ್ತೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಕೂಡಲೇ ಇಡೀ ಕಟ್ಟಡವನ್ನು ಪರಿಶೀಲನೆ ನಡೆಸಿ ಬಾಲಕಿಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಹಾಗೂ ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.
ಮೇಲ್ಛಾವಣಿ ಕುಸಿದು ಆಸ್ಪತ್ರೆಗೆ ದಾಖಲಾಗಿರುವ ಬಡ ವಿದ್ಯಾರ್ಥಿನಿಯರಿಗೆ ಟ್ರಾಮ್ ಕೇರ್‌ನಲ್ಲಿ ಕಳಪೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಗತ್ಯ ಔಷಧಿಗಳು ಸ್ಟಾಕ್ ಇಲ್ಲ ಎಂದು ವೈದ್ಯರು ಹೊರಗಡೆಯಿಂದ ತರಲು ಚೀಟಿ ನೀಡುತ್ತಿರುವುದರಿಂದ ಹಣವಿಲ್ಲದೆ ಪೋಷಕರು ಕಂಗಾಲಾಗಿದ್ದಾರೆ. ಸರಕಾರವೇ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಅಲ್ಲಮಪ್ರಭು ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಟ್ರಾಮ್ ಕೇರ್ ಗೆ ತೆರಳಿ ವಿದ್ಯಾರ್ಥಿನೀಯರ ಆರೋಗ್ಯ ವಿಚಾರಿಸಿದರು. ಇದಲ್ಲದೇ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಪರಿಶೀಲಿಸಿದರು. ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಗುಣಮಟ್ಟದ ಚಿಕಿತ್ಸೆ ಸಿಗದಿದ್ದರೆ, ತಕ್ಷಣವೇ ಎಚ್‌ಕೆಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದರು. ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಅಶೋಕ್ ಬಗಲಿ ಹಾಗೂ ಸಾಯಿಬಣ್ಣ ತಳವಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲೇಜು ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ರಾಯಪ್ಪ ಹುಣಸಗಿ ಭೇಟಿ ನೀಡಿ ಪರಿಶೀಲಿಸಿದರು.
ತನಿಖೆಯಾಗಲಿ
ಈ ಕಾಲೇಜು ಕಟ್ಟಡವನ್ನು ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿತ್ತು. 2017 ರಲ್ಲಿ ಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಇದಕ್ಕೆ ಅಡಿಗಲ್ಲು ನೆರವೇರಿಸಿದ್ದರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸ್ವಂತ ತವರಲ್ಲೇ ಇಂತಹ ಕಳಪೆ ಹಾಗೂ ಜೀವಹಂತಕ ಕಾಮಗಾರಿ ನಡೆದಿರುವುದು ಕಾಮಗಾರಿಯ ಬಗ್ಗೆ ಪ್ರೆಶ್ನೆ ಎದ್ದಿದೆ. ಈ ದುರಂತದ ಬಗ್ಗೆ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಹಾಗೂ ಸಾಯಿಬಾಣ್ಣ ತಳವಾರ್ ಆಗ್ರಹಿಸಿದರು.
