ಮುಂಬೈ: ಅಯೋಧ್ಯೆ (Ayodhya) ರಾಮಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ಪ್ರಕರಣ (Ram Temple Theft Case) ಕೇವಲ ಟ್ರೇಲರ್ ಅಷ್ಟೇ. ಕಾಶಿ, ಮಥುರಾದ ಕತೆ ಇನ್ನೂ ಬಾಕಿ ಇದೆ ಎಂದು ಬಿಜೆಪಿ ವಿರುದ್ಧ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ವಾಗ್ದಾಳಿ ನಡೆಸಿದರು.
ದಾದರ್‌ನಲ್ಲಿ ನಡೆದ ‘ರಾಮ ರಕ್ಷಾ’ ಆಂದೋಲನದಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ, ರಾಮ ಮಂದಿರ ನಿರ್ಮಾಣದಲ್ಲಿ ಶಿವಸೇನೆ ದೊಡ್ಡ ಪಾತ್ರ ವಹಿಸಿದೆ. ರಾಮಮದಿರದಲ್ಲಿ ದೇಣಿಗೆ ಕಳ್ಳತನವಾಗಿದೆ. ಕಾಶಿ, ಮಥುರಾದ ವಿಚಾರ ಇನ್ನೂ ಹೊರಬರಬೇಕಿದೆ. ಈ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಹಿಂದೂಗಳು ಬಿಜೆಪಿ ವಿರುದ್ಧ ಎದ್ದು ನಿಲ್ಲಬೇಕು. ಹಿಂದೂಗಳು ಮೂರ್ಖರಲ್ಲ. ರಾಮ ಮಂದಿರದಲ್ಲಿ ಲೂಟಿಗೆ ಕಾರಣರಾದವರನ್ನು ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಮಮಂದಿರ ದೇಣಿಗೆ ಹಗರಣ – 5 ಕೋಟಿ ಮೌಲ್ಯ, 147 ಕೆಜಿ ತೂಕದ ಚಿನ್ನ ಲೇಪಿತ ʻರಾಮಚರಿತಮಾನಸʼ ಪುಸ್ತಕ ನಾಪತ್ತೆ
ಬಿಜೆಪಿಯಿಂದ ಮುಕ್ತವಾದ ಹಿಂದುತ್ವ ಬಯಸುತ್ತೇನೆ
ರಾಮನ ದೇಣಿಗೆ ಕದ್ದ ತಪ್ಪಿತಸ್ಥರಿಗೆ ಅವರ ಅಪರಾಧದ ಹೊರತಾಗಿಯೂ ಕ್ಲೀನ್ ಚಿಟ್ ನೀಡಲಾಗುತ್ತದೆ ಎಂದು ಅವರು ಭವಿಷ್ಯ ನುಡಿದರು. ಪ್ರಧಾನಿ ನರೇಂದ್ರ ಮೋದಿಯವರು ‘ಹಿಂದುತ್ವ’ವನ್ನು ನಾಶಮಾಡಲು ಬಯಸುತ್ತಿದ್ದಾರೆ. ನಾನು ಬಿಜೆಪಿಯಿಂದ ಮುಕ್ತವಾದ ‘ಹಿಂದುತ್ವ’ವನ್ನು ಬಯಸುತ್ತೇನೆ ಎಂದರು.
ರಾಮನ ಹೆಸರು ಹೇಳುವ ಹಕ್ಕಿಲ್ಲ
ರಾಮ ಮಂದಿರದಲ್ಲಿ ಕಳ್ಳತನಕ್ಕೆ ಕಾರಣರಾದವರಿಗೆ ರಾಮನ ಹೆಸರು ಹೇಳುವ ಹಕ್ಕಿಲ್ಲ. ಭಗವಾನ್ ರಾಮನನ್ನು ರಕ್ಷಿಸುವಲ್ಲಿ ನನ್ನೊಂದಿಗೆ ಸೇರಲು ನಾನು ಎಲ್ಲಾ ಹಿಂದೂಗಳಿಗೆ ಕರೆ ನೀಡುತ್ತೇನೆ. ಇಂದು, ಎಲ್ಲಾ ವರ್ಗದ ಹಿಂದೂಗಳು ನನ್ನೊಂದಿಗೆ ಇಲ್ಲಿ ನಿಂತಿದ್ದಾರೆ ಎಂದರು. ಪ್ರತಿಭಟನೆ ವೇಳೆ ಉದ್ಧವ್ ಮತ್ತು ಅವರ ಬೆಂಬಲಿಗರು ಹನುಮಾನ್ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಪಠಿಸಿದರು.
ರಾಮ ಮಂದಿರದಲ್ಲಿ ಕಳ್ಳತನದ ಆರೋಪಗಳಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ವಿವಾದಕ್ಕೆ ಕಾರಣವಾಗಿದೆ. ರಾಜಕೀಯ ಪಕ್ಷಗಳು ಇದಕ್ಕಾಗಿ ಬಿಜೆಪಿಯನ್ನು ಟೀಕಿಸುತ್ತಿವೆ. ಈ ಪ್ರಕರಣವನ್ನು ಉತ್ತರ ಪ್ರದೇಶದ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಇದುವರೆಗೆ ಎಂಟು ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಭಾರತದ ದೇವಾಲಯಗಳನ್ನು ನಿರ್ವಹಿಸೋದ್ಯಾರು? – ರಾಜ್ಯಗಳ ಪಾತ್ರ ಏನು?
