ಮಡಿಕೇರಿ: ಕೊಡಗು ಜಿಲ್ಲೆಯ (Kodagu) ಸುಂಟಿಕೊಪ್ಪ–ಕುಶಾಲನಗರ ಮುಖ್ಯ ರಸ್ತೆಯ 7ನೇ ಹೊಸಕೋಟೆ ಬಳಿ ಇಂದು ಬೆಳಿಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕೆಲಕಾಲ (Road Accident) ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕುಶಾಲನಗರ ಕಡೆಯಿಂದ ಬರುತ್ತಿದ್ದ ರಿಟ್ಜ್ ಕಾರು 7ನೇ ಹೊಸಕೋಟೆ ಬಳಿ ಕಲ್ಲುಕೋರೆ ರಸ್ತೆಗೆ ತಿರುಗುತ್ತಿದ್ದ ವೇಳೆ, ಅದರ ಹಿಂಬದಿಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಸುಂಟಿಕೊಪ್ಪ ಕಡೆಯಿಂದ ಬರುತ್ತಿದ್ದ ಬಲೆನೋ ಕಾರು ಕೂಡ ನಿಯಂತ್ರಣ ತಪ್ಪಿ ರಿಟ್ಜ್ ಕಾರಿಗೆ ಗುದ್ದಿದೆ. ಇದರಿಂದ ಮೂರು ವಾಹನಗಳು ಸರಣಿ ಅಪಘಾತಕ್ಕೆ ಒಳಗಾಗಿವೆ.
ಡಿಕ್ಕಿಯ ರಭಸಕ್ಕೆ ರಿಟ್ಜ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಸುಂಟಿಕೊಪ್ಪದ ಮಾತಾಜಿ ಜ್ಯುವೆಲ್ಲರ್ಸ್ ಮಾಲೀಕ ರಮೇಶ್ ಶೇಟ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: ಯುಎಸ್-ಇರಾನ್ ಯುದ್ಧದ ನಡುವೆಯೂ RBI ರೆಪೊ ದರ 5.25% ರಲ್ಲೇ ಸ್ಥಿರ
ಅಪಘಾತದಲ್ಲಿ ಮೂರು ವಾಹನಗಳಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ರಸ್ತೆ ಮಧ್ಯೆ ವಾಹನಗಳು ನಿಂತಿದ್ದರಿಂದ ಸುಂಟಿಕೊಪ್ಪ–ಕುಶಾಲನಗರ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶಾಸಕರ ಬೆಂಬಲಿಗರು ಉದ್ರೇಕಗೊಂಡು ತಾಲೂಕು ಬಂದ್ ಮಾಡಿದ್ದು ತಪ್ಪು: ಯತೀಂದ್ರ ಸಿದ್ದರಾಮಯ್ಯ
