Connect with us

Latest

ಯೋಗಿಯ ಯುಪಿಯಲ್ಲಿ ದಲಿತರು, ಅಲ್ಪಸಂಖ್ಯಾತರಿಗೆ ಹಿಂಸೆ: ಮಮತಾ ಬ್ಯಾನರ್ಜಿ

Published

on

– ಯುಪಿ ಪ್ರಕರಣ ಸೀತೆಯ ಅಗ್ನಿ ಪರೀಕ್ಷೆಯಂತಾಗಿದೆ

ಕೋಲ್ಕತ್ತಾ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೀಗ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಈ ಕುರಿತು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಮಾತನಾಡಿರುವ ಅವರು, ಯುಪಿಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಶವವನ್ನು ರಾತ್ರೋರಾತ್ರಿ ಸುಟ್ಟಿರುವುದು ಸೀತೆಯ ಅಗ್ನಿ ಪರೀಕ್ಷೆಯಂತಾಗಿದೆ. ಸೀತೆ ಅಗ್ನಿ ಪರೀಕ್ಷೆ ಎದುರಿಸಿದಂತೆ ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆಯ ದೇಹವನ್ನು ಮಧ್ಯರಾತ್ರಿ ಸುಡುವ ಮೂಲಕ ಅಗ್ನಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹರಿಹಾಯ್ದಿದ್ದಾರೆ.

ಉತ್ತರ ಪ್ರದೇಶದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸಂತ್ರಸ್ತೆ ಕೇವಲ ಅತ್ಯಾಚಾರಕ್ಕೆ ಒಳಗಾಗಿಲ್ಲ. ಬಳಿಕ ಅವಳ ದೇಹವನ್ನು ಸುಡಲಾಗಿದೆ. ಅಪರಾಧ ನಡೆದಿದ್ದರೆ ಪೊಲೀಸರು ತನಿಖೆ ನಡೆಸಬೇಕು. ಆದರೆ ಇದ್ಯಾವ ರೀತಿಯ ನಿಯಮ. ಪೊಲೀಸರು ಪ್ರಕರಣವನ್ನು ನಿರ್ವಹಿಸಿದ ರೀತಿಯಿಂದಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಯುವತಿಯ ತಾಯಿಗೂ ಸಹ ಬೆದರಿಕೆ ಹಾಕಲಾಗಿದ್ದು, ಮಗಳ ಚಿತೆಯಲ್ಲಿಯೇ ಅವರನ್ನೂ ಸುಡುವುದಾಗಿ ಹೆದರಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮಾಡುವ ಮೂಲಕವೂ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಅಸಹ್ಯಕರ ಘಟನೆಯಾಗಿದ್ದು, ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಕುಟುಂಬಸ್ಥರನ್ನು ಹೊರಗಿಟ್ಟು ಪೊಲೀಸರು ಒತ್ತಾಯಪೂರ್ವಕವಾಗಿ ಅಂತ್ಯಸಂಸ್ಕಾರ ನೆರವೇರಿಸಿರುವುದು ತೀವ್ರ ನಾಚಿಕೆಗೇಡಿನ ಸಂಗತಿಯಾಗಿದೆ.

ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಯುವತಿಯ ಮೇಲೆ ಮೇಲ್ಜಾತಿಯ ನಾಲ್ವರು ಪುರುಷರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ನಂತರ ಯುವತಿಯನ್ನು ಚಿಕಿತ್ಸೆಗಾಗಿ ಸಫ್ದರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಳು. ಬಳಿಕ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ನೀಡದೆ ರಾತ್ರೋ ರಾತ್ರಿ ಹತ್ರಾಸ್ ಗ್ರಾಮದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಕುಟುಂಬಸ್ತರು ಎಷ್ಟೇ ಮನವಿ ಮಾಡಿದರೂ ಸಂತ್ಯ ಸಂಸ್ಕಾರ ಮಾಡಲು ಅನುಮತಿ ನೀಡಿರಲಿಲ್ಲ. ಈ ಪ್ರಕರಣದ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *