ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ 2026ರ ಐಪಿಎಲ್‌ನಲ್ಲಿ (IPL 2026) ಅದ್ಭುತ ಪ್ರದರ್ಶನ ನೀಡಿ ಮೊದಲ ತಂಡವಾಗಿ ಪ್ಲೇ ಆಫ್‌ಗೇರಿದ್ದು, ಅಗ್ರಸ್ಥಾನದಲ್ಲಿದೆ. ಆರ್‌ಸಿಬಿಯ ಆಟವನ್ನು ವೀಕ್ಷಿಸುತ್ತಿರುವ ಮಾಜಿ ಕ್ರಿಕೆಟಿಗರು ಈ ಸಲವೂ ಆರ್‌ಸಿಬಿಯೇ ಕಪ್ ಗೆಲ್ಲಲಿದೆ ಎನ್ನುತ್ತಿದ್ದಾರೆ. ಈ ಪೈಕಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag), ಈ ಬಾರಿಯೂ ಆರ್‌ಸಿಬಿಯೇ (RCB) ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕ್ರಿಕ್‌ಬಜ್‌ನಲ್ಲಿ ಆರ್‌ಸಿಬಿ ತಂಡದ ಪ್ರದರ್ಶನದ ಕುರಿತು ಮಾತನಾಡಿದ ವೀರೇಂದ್ರ ಸೆಹ್ವಾಗ್, ಚಾಂಪಿಯನ್ ತಂಡವು ಅಗ್ರ ಎರಡು ಸ್ಥಾನಗಳಲ್ಲಿ ಅರ್ಹತೆ ಪಡೆಯಬೇಕು. ಅದರಂತೆ ಆರ್‌ಸಿಬಿ ಆಡುತ್ತಿರುವ ರೀತಿಯನ್ನು ನೋಡಿದರೆ, ಈ ವರ್ಷವೂ ಅವರೇ ಟ್ರೋಫಿಯನ್ನು ಎತ್ತಿಹಿಡಿಯುತ್ತಾರೆ ಎಂದು ಅನಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: RCB ಜೊತೆ ಪ್ಲೇಆಫ್ ಪ್ರವೇಶಿಸಿದ ಹೈದರಾಬಾದ್, ಗುಜರಾತ್ – ಇನ್ನುಳಿದ 1 ಸ್ಥಾನಕ್ಕಾಗಿ 5 ತಂಡಗಳ ನಡುವೆ ಪೈಪೋಟಿ

ಆದಾಗ್ಯೂ, ಆರ್‌ಸಿಬಿ ಎದುರಿಸುತ್ತಿರುವ ದೊಡ್ಡ ಸವಾಲನ್ನು ಸಹ ಉಲ್ಲೇಖಿಸಿರುವ ಸೆಹ್ವಾಗ್, ಟ್ರೋಫಿ ಗೆಲುವಿನಲ್ಲಿ ಆರ್‌ಸಿಬಿಗೆ ಕಠಿಣ ಹೋರಾಟ ನೀಡಬಲ್ಲ ತಂಡವೆಂದರೆ ಅದು ಗುಜರಾತ್ ಟೈಟಾನ್ಸ್. ಒಂದು ವೇಳೆ ಗುಜರಾತ್ ತಂಡ ಕೂಡ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದರೆ, ಆರ್‌ಸಿಬಿಗೆ ಅದು ಕಷ್ಟಕರವಾಗಿರುತ್ತದೆ. ಏಕೆಂದರೆ ಗುಜರಾತ್ ಟೈಟಾನ್ಸ್ ಕೂಡ ಉತ್ತಮ ಬೌಲಿಂಗ್ ಘಟಕವನ್ನು ಹೊಂದಿದೆ. ಈ ಎರಡೂ ತಂಡಗಳ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಬಲಿಷ್ಠವಾಗಿರುವುದರಿಂದ ಪ್ಲೇ ಆಫ್‌ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗುವುದನ್ನು ನೋಡಲು ಖುಷಿಯಾಗುತ್ತದೆ. ಉಭಯ ತಂಡಗಳ ಅಗ್ರ ಮೂವರು ಬ್ಯಾಟ್ಸ್ಮನ್‌ಗಳು ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ ಐಪಿಎಲ್ ಆಡ್ತಾರಾ ಧೋನಿ – ಸುರೇಶ್ ರೈನಾ ಹೇಳಿದ್ದೇನು?
ಸೆಹ್ವಾಗ್ ನೀಡಿರುವ ಹೇಳಿಕೆಗೆ ಪೂರಕವಾಗಿ ಆರ್‌ಸಿಬಿ ಕೂಡ ಚಾಂಪಿಯನ್ ತಂಡದಂತೆಯೇ ಪ್ರದರ್ಶನ ನೀಡುತ್ತಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 23 ರನ್‌ಗಳಿಂದ ಜಯಗಳಿಸಿದ ಆರ್‌ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಮೊದಲ ಐಪಿಎಲ್ ತಂಡ ಎನಿಸಿಕೊಂಡಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಆವೃತ್ತಿಯಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿದ್ದು, ಒಂಬತ್ತು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋತಿದ್ದು, ಒಟ್ಟು 18 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಇದನ್ನೂ ಓದಿ: ‘ವಿಸಿಲ್ ಪೋಡು’ ಸನ್ನೆ ಮಾಡಿ ಸಿಎಸ್‌ಕೆ ಅಭಿಮಾನಿಗಳನ್ನು ಕೆಣಕಿದ ಇಶಾನ್ ಕಿಶನ್

