ಚೆನ್ನೈ: ಸೋಮವಾರ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ (IPL 2026) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಸೋಲಿಸಿದ ಬಳಿಕ ಸನ್‌ರೈಸರ್ಸ್ ಹೈದರಾಬಾದ್‌ನ (Sunrisers Hyderabad) ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ‘ವಿಸಿಲ್ ಪೋಡು’ ಸನ್ನೆ ಮೂಲಕ ಸಂಭ್ರಮಿಸಿ ಸಿಎಸ್‌ಕೆ ಅಭಿಮಾನಿಗಳನ್ನು ಕೆಣಕಿದ್ದಾರೆ.
ಪಂದ್ಯ ಮುಗಿದ ಬಳಿಕ ಇಶಾನ್ ಕಿಶನ್ ಮಾಡಿದ ಸೆಲೆಬ್ರೇಷನ್ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಘೋಷವಾಕ್ಯ ‘ವಿಸಿಲ್ ಪೋಡು’ (Whistle Podu) ಸನ್ನೆಯನ್ನು ಇಶಾನ್ ಕಿಶನ್ ಅನುಕರಿಸಿದ್ದಾರೆ. ಇಶಾನ್ ಕಿಶನ್ ಮೈದಾನದಲ್ಲೇ ನಿಂತು ಚೆಪಾಕ್ ಪ್ರೇಕ್ಷಕರನ್ನು ನೋಡಿ ಬಾಯಿಗೆ ಕೈಯಿಟ್ಟು ಸೀಟಿ ಊದುವಂತೆ ಸನ್ನೆ ಮಾಡಿದರು. ಅಷ್ಟೇ ಅಲ್ಲದೆ, ಮನೆಗೆ ಹೋಗಿ ಎನ್ನುವ ಸನ್ನೆಯನ್ನು ತೋರಿಸಿದ್ದಾರೆ. ತವರು ಮೈದಾನದಲ್ಲಿ ಸಿಎಸ್‌ಕೆ ಮಣಿಸಿದ ಜೋಶ್‌ನಲ್ಲಿ ಇಶಾನ್ ಕಿಶನ್ ಈ ರೀತಿ ಸಂಭ್ರಮಿಸಿದ್ದು, ಚೆನ್ನೈ ಅಭಿಮಾನಿಗಳಿಗೆ ಕೊಂಚ ಸಿಟ್ಟು ತರಿಸಿದೆ.
Ishan Kishan to CSK fans –
Doing Whistle Podu
Go Home Gesture
Go Away Gesturepic.twitter.com/HpqicvkmDN— Ajay Jadeja (@AjayJadeja171) May 19, 2026
ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇಆಫ್ ಪ್ರವೇಶಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಚೆನ್ನೈ 7 ವಿಕೆಟ್ ನಷ್ಟಕ್ಕೆ 180 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 181 ರನ್ ಹೊಡೆದು ಜಯ ಸಾಧಿಸಿತು.
ತವರಿನಲ್ಲಿ ಚೆನ್ನೈ ಸೋತ ಕಾರಣ ಐಪಿಎಲ್ ಪ್ಲೇಆಫ್ ಕನಸು ಕ್ಷೀಣಿಸಿದೆ. ಮುಂದೆ ಪಂಜಾಬ್, ರಾಜಸ್ಥಾನ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಾವಾಡುವ ಎಲ್ಲಾ ಪಂದ್ಯಗಳನ್ನು ಸೋತರಷ್ಟೇ ಪ್ಲೇಆಫ್ ಪ್ರವೇಶಿಸಬಹುದು.
ಚೇಸಿಂಗ್ ಶುರುಮಾಡಿದ ಸನ್‌ರೈಸರ್ಸ್ ಹೈದರಾಬಾದ್ 18 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭದಲ್ಲಿ ಎಡವಿದರೂ ಕೂಡ ಅಭಿಷೇಕ್ ಶರ್ಮಾ ಹಿಡಿತ ಸಾಧಿಸಿದರು. ಆನಂತರ ಕ್ರೀಸ್‌ಗೆ ಬಂದ್ ಇಶಾನ್ ಕಿಶನ್ ಹಾಗೂ ಹೆನ್ರಿಚ್ ಕ್ಲಾಸೇನ್ 41 ಎಸೆತಕ್ಕೆ ಬರೋಬ್ಬರಿ 75 ರನ್‌ಗಳ ಜೊತೆಯಾಟವಾಡಿದರು.
ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 26 ರನ್, ಹೆನ್ರಿಚ್ ಕ್ಲಾಸೇನ್ 26 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸ್ ಬಾರಿಸಿ 47 ರನ್ ಗಳಿಸಿದರು. ಇಶಾನ್ ಕಿಶನ್ 47 ಎಸೆತಗಳಲ್ಲಿ 3 ಸಿಕ್ಸ್, 7 ಬೌಂಡರಿ ಬಾರಿಸಿ, 70 ರನ್ ಚಚ್ಚಿದರು. ಚೆನ್ನೈ ಪರ ಬೌಲಿಂಗ್ ಮಾಡಿದ ಮುಖೇಶ್ ಚೌಧರಿ 2 ವಿಕೆಟ್, ಅಕೇಲ್ ಹೊಸೈನ್ ಹಾಗೂ ನೂರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು.

