ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ (Vinay Kulkarni) ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಶುಕ್ರವಾರ ರಾತ್ರಿ ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿ ಮಾಧ್ಯಮಗಳೊಂದಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನೇರವಾಗಿ ವಾಹನದಲ್ಲಿ ತೆರಳಿದರು. ಈ ವೇಳೆ ಜೈಲು ಹೊರಗೆ ಸೇರಿದ್ದ ಅಭಿಮಾನಿಗಳು ಅವರಿಗೆ ಹೂವಿನ ಹಾರ ಹಾಕಿ ಸ್ವಾಗತ ಕೋರಿದರು. ಕೆಲ ಅಭಿಮಾನಿಗಳೊಂದಿಗೆ ಶೇಕ್‌ಹ್ಯಾಂಡ್ ಮಾಡಿ ಅವರು ಅಲ್ಲಿಂದ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದತ್ತ ತೆರಳಿದರು.
ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವಿನಯ್ ಕುಲಕರ್ಣಿ, ತಮ್ಮ ಶಿಕ್ಷೆಗೆ ತಡೆ ನೀಡುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿ ಇಂದು ಜಾಮೀನು ಮಂಜೂರು ಮಾಡಿದೆ.ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಜಾಹೀರಾತು ನೋಡಿದ್ರೆ ಹಣ ಕೊಡ್ತೀವಿ ಅಂತ ವಂಚನೆ – ಖಾಸಗಿ ಕಂಪನಿಯ 3.70 ಕೋಟಿ ಆಸ್ತಿ ಜಪ್ತಿ
ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 10 ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಆರೋಪಿ ಚನ್ನಕೇಶವ ಟಿಂಗರಿಕರ್ ಅವರಿಗೂ ಜಾಮೀನು ದೊರೆತಿದೆ. ಇಬ್ಬರು ಶ್ಯೂರಿಟಿ ಹಾಗೂ 5 ಲಕ್ಷ ರೂ. ಬಾಂಡ್ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಇದೇ ವೇಳೆ, ಪಾಸ್‌ಪೋರ್ಟ್ ಅನ್ನು ಸೆಷನ್ಸ್ ಕೋರ್ಟ್‌ಗೆ ಸಲ್ಲಿಸುವಂತೆ ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ತೊರೆಯಬಾರದು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ. ಜಾಮೀನು ದೊರೆತಿರುವುದರಿಂದ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಸದ್ಯಕ್ಕೆ ಮುಂದುವರಿಯಲಿದೆ. ಇನ್ನೊಂದೆಡೆ ಹೈಕೋರ್ಟ್ ನೀಡಿರುವ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಯೋಗೇಶ್‌ಗೌಡ ಅವರ ಸಹೋದರ ಗುರುನಾಥಗೌಡ ತಿಳಿಸಿದ್ದಾರೆ.ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ; ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
