ಲಕ್ನೋ: ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ (Rinku Singh) ಹಾಗೂ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ (Priya Saroj) ಅವರ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 4ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಉತ್ತರ ಪ್ರದೇಶದ ಲಕ್ನೋದಲ್ಲಿರುವ ರಾಮಾಡಾ ಹೋಟೆಲ್‌ನಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ.
ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರು 2025ರ ಜೂನ್ 8ರಂದು ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥ ಸಮಾರಂಭದಲ್ಲಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕ್ರಿಕೆಟಿಗ ಪಿಯೂಷ್ ಚಾವ್ಲಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇವರ ವಿವಾಹವನ್ನು 2026ರ ಜೂನ್‌ನಲ್ಲೇ ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ರಿಂಕು ಸಿಂಗ್ ಅವರ ತಂದೆಯ ನಿಧನದ ಹಿನ್ನೆಲೆ ವಿವಾಹವನ್ನು ಮುಂದೂಡಲಾಗಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹ ಮುಂದೂಡಲಾಗಿದ್ದು, ಇದೀಗ ಡಿ.4ರಂದು ಹೊಸ ದಿನಾಂಕ ನಿಗದಿಯಾಗಿದೆ.

ರಿಂಕು ಸಿಂಗ್ ಅವರ ತಂದೆ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಹೀಗಾಗಿ ಕುಟುಂಬದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ವಿವಾಹವನ್ನು ಮುಂದೂಡಲು ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಇದೀಗ ಡಿಸೆಂಬರ್‌ನಲ್ಲಿ ನಡೆಯಲಿರುವ ವಿವಾಹ ಸಮಾರಂಭಕ್ಕೆ ನಿಶ್ಚಿತಾರ್ಥದಂತೆಯೇ ಹಲವು ಗಣ್ಯರು ಹಾಗೂ ಪ್ರಮುಖ ವ್ಯಕ್ತಿಗಳು ಆಗಮಿಸುವ ನಿರೀಕ್ಷೆಯಿದೆ.
ಪ್ರಿಯಾ ಸರೋಜ್ ಯಾರು?
ಉತ್ತರ ಪ್ರದೇಶದ ವಾರಣಾಸಿಯ ಕಾರ್ಖಿಯಾನ್ ಗ್ರಾಮದ ಪ್ರಿಯಾ ಸರೋಜ್, 2024ರಲ್ಲಿ ಮಚ್ಲಿಶಹರ್‌ನ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಬಿಜೆಪಿಯ ಅನುಭವಿ ಬಿಪಿ ಸರೋಜ್ ಅವರನ್ನು 35,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದ ಪ್ರಿಯಾ, ದೇಶದ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಿಯಾ ರಾಜಕೀಯ ಕುಟುಂಬದ ಹಿನ್ನಲೆ ಹೊಂದಿದ್ದರೂ, ತಮ್ಮ ಕಾನೂನು ವೃತ್ತಿ ಮುಂದುವರಿಸಿದ್ದರು. ನವದೆಹಲಿಯ ವಾಯುಪಡೆಯ ಸುವರ್ಣ ಮಹೋತ್ಸವ ಸಂಸ್ಥೆಯಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿದ ಪ್ರಿಯಾ ಸರೋಜ್, ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿಯನ್ನು ಪಡೆದುಕೊಂಡಿದ್ದಾರೆ. ಕಾನೂನು ಪದವಿಯ ನಂತರ, ಸರೋಜ್ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಆರಂಭದಲ್ಲಿ ರಾಜಕೀಯವು ಅವರ ವೃತ್ತಿಜೀವನದ ಯೋಜನೆಗಳ ಭಾಗವಾಗಿರಲಿಲ್ಲ. ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಮೂರು ಬಾರಿ ಸಂಸದರಾಗಿದ್ದು, ಪ್ರಸ್ತುತ ಉತ್ತರ ಪ್ರದೇಶದ ಕೆರಕತ್‌ನಿಂದ ಶಾಸಕರಾಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಿಯಾ ಸರೋಜ್ ರಾಜಕೀಯ ಪ್ರವೇಶದ ಮೂಲಕ ತಮ್ಮ ತಂದೆಯ ರಾಜಕೀಯ ಪರಂಪರೆಯನ್ನ ಮುಂದುವರಿಸಿದ್ದಾರೆ.


