ನವದೆಹಲಿ: ಸಂಜು ಸ್ಯಾಮ್ಸನ್ (Sanju Samson), ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಅಫ್ಘಾನಿಸ್ತಾನ (Afghanistan) ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಈ ಗೆಲುವಿನೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನ 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಸೆ.17 ರಂದು 3ನೇ ಹಾಗೂ ಅಂತಿಮ ಟಿ20 ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲೇ ನಡೆಯಲಿದೆ.
ಇಂದು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jaitley Stadium) ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ (Team India) 14.5 ಓವರ್ಗಳಲ್ಲೇ 3 ವಿಕೆಟ್ನಷ್ಟಕ್ಕೆ 163 ರನ್ ಚಚ್ಚಿ ಗೆಲುವು ಸಾಧಿಸಿತು.

ಚೇಸಿಂಗ್ ಮಾಡಿದ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾದರು. ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಿದ ಸಂಜು ಸ್ಯಾಮ್ಸನ್ 22 ಎಸೆತಗಳಲ್ಲಿ ಸ್ಫೋಟಕ 57 ರನ್ (7 ಬೌಂಡರಿ, 4 ಸಿಕ್ಸರ್) ಚಚ್ಚಿದ್ರೆ, ಅಭಿಷೇಕ್ ಶರ್ಮಾ 19 ಎಸೆತಗಳಲ್ಲಿ 39 ರನ್ ಬಾರಿಸಿದ್ರು.
ಇನ್ನೂ ಕೊನೆಯವರೆಗೂ ತಾಳ್ಮೆಯ ಆಟವಾಡಿದ ಇಶಾನ್ ಕಿಶನ್ 23 ಎಸೆತಗಳಲ್ಲಿ ಅಜೇಯ 38 ರನ್ ಬಾರಿಸಿದರು. ತಿಲಕ್ ಅಜೇಯ 15 ರನ್ ಗಳಿಸಿದ್ರೆ, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ 11 ರನ್ ಗಳಿಸಿ ಔಟಾದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಅಫ್ಘಾನ್ ಒಂದೆಡೆ ನಿಧಾನಗತಿಯ ಬ್ಯಾಟಿಂಗ್ ನಡೆಸಿತು, ಮತ್ತೊಂದು ಕಡೆ ಪ್ರಮುಖ ವಿಕೆಟ್ಗಳನ್ನ ಕಳೆದುಕೊಳ್ಳುತ್ತಾ ಸಾಗಿತು. ಒಂದಂಥದಲ್ಲಿ ಅಫ್ಘಾನ್ 130 ರನ್ ಗಳಿಸುವುದೂ ಕಷ್ಟವೆಂದೇ ಭಾವಿಸಲಾಗಿತ್ತು. ಆದ್ರೆ ಕೊನೆಯಲ್ಲಿ ಮೊಹಮ್ಮದ್ ನಭಿ ಹಾಗೂ ರಶೀದ್ ಖಾನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡವು 150 ರನ್ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

