ಯುದ್ಧ ಪೀಡಿತ ದೇಶಗಳ ನಡುವೆ ಮಾತುಕತೆ ಮೂಲಕ ಶಾಂತಿ ನೆಲೆಸುವಂತೆ ಮಾಡುವುದೇ ಕದನ ವಿರಾಮ. ಈ ಮಾತುಕತೆ ಅದೆಷ್ಟು ಮುಖ್ಯ ಎಂಬುದು ಈ ತಲೆಮಾರಿಗೆ ಇರಾನ್ – ಅಮೆರಿಕ ಯುದ್ಧದಿಂದ ಅರ್ಥವಾಗಿದೆ. ಯಾಕಂದರೆ ಕಳೆದ ಕೆಲವು ವಾರಗಳಿಂದ ಇರಾನ್, ಇಸ್ರೇಲ್ ಹಾಗೂ ಅಮೆರಿಕ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷ ಜಗತ್ತಿನ ಮೂಲೆ ಮೂಲೆಗೂ ಸಂಕಷ್ಟ ತಂದೊಡ್ಡಿದೆ. ಆದಷ್ಟು ಬೇಗ ಈ ಸಂಘರ್ಷ ತಣ್ಣಗಾಗಿ ಕದನ ವಿರಾಮ ಘೋಷಣೆ ಆಗಲಿ ಎಂಬುದು ಎಲ್ಲರ ಆಶಯ. ಈ ಬರಹದಲ್ಲಿ ಕದನ ವಿರಾಮ ಎಂದರೇನು? ಅದರ ಉದ್ದೇಶ ಹಾಗೂ ಪ್ರಮುಖ ಕದನ ವಿರಾಮಗಳ ಬಗ್ಗೆ ಚರ್ಚಿಸಲಾಗಿದೆ.
ಕದನ ವಿರಾಮ ಎಂದರೇನು?
ಕದನ ವಿರಾಮ ಎಂದರೆ ಯುದ್ಧ ಅಥವಾ ಸಂಘರ್ಷದಲ್ಲಿ ತೊಡಗಿರುವ ಎರಡು ದೇಶಗಳು ತಾತ್ಕಾಲಿಕವಾಗಿ ಯುದ್ಧ ಅಥವಾ ಸಂಘರ್ಷ ನಿಲ್ಲಿಸುವ ಒಪ್ಪಂದವಾಗಿದೆ. ಮಾನವೀಯ ಕಾರಣಗಳಿಗೆ ಅಥವಾ ಶಾಂತಿ ಮಾತುಕತೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕದನ ವಿರಾಮದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಇದನ್ನೂ ಓದಿ: ಮತ್ತೆ ಯುದ್ಧದ ಭೀತಿ, ಮಾತುಕತೆ ನಡೆಯೋದೇ ಡೌಟ್ – ಇರಾನ್ ನೌಕೆ ವಶಕ್ಕೆ ಪಡೆದ ಅಮೆರಿಕ
ಉದ್ದೇಶ
ನಾಗರಿಕರ ರಕ್ಷಣೆ, ಮಾನವೀಯ ನೆರವು ಮತ್ತು ಹಿಂಸಾಚಾರವನ್ನು ತಗ್ಗಿಸುವುದು ಕದನ ವಿರಾಮದ ಪ್ರಮುಖ ಉದ್ದೇಶವಾಗಿದೆ. ಉಭಯ ದೇಶಗಳ ನಡುವೆ ಮಾತುಕತೆಗಳ ದಾರಿ ಸುಗಮಗೊಳಿಸಲು, ರಾಜತಾಂತ್ರಿಕವಾಗಿ ಸಮಸ್ಯೆಗಳನ್ನು ಪರಿಹರಿಸಲು ಇದು ಅವಕಾಶ ನೀಡುತ್ತದೆ. ವಿಶ್ವದಾದ್ಯಂತ ಸಂಘರ್ಷಗಳನ್ನು ತಗ್ಗಿಸುವಲ್ಲಿ ಮತ್ತು ಶಾಂತಿಯನ್ನು ಬೆಳೆಸುವಲ್ಲಿ ಕದನ ವಿರಾಮಗಳು ಪ್ರಮುಖ ಪಾತ್ರವಹಿಸುವಹಿಸುತ್ತವೆ.
ಕದನ ವಿರಾಮ ಈಗೇಕೆ ಪ್ರಸ್ತುತ
ಅಮೆರಿಕದೊಂದಿಗೆ (USA) ಏಪ್ರಿಲ್ 20 ರಂದು (ಸೋಮವಾರ) ಪಾಕಿಸ್ತಾನದ (Pakistan) ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಯನ್ನು ನಡೆಸಲು ಇರಾನ್(Iran) ಅಧಿಕೃತವಾಗಿ ನಿರಾಕರಿಸಿದೆ. ಅಮೆರಿಕ ಅತಿಯಾದ ಬೇಡಿಕೆಗಳು, ಅಪ್ರಾಯೋಗಿಕ ನಿರೀಕ್ಷೆಗಳು ಮತ್ತು ಪದೇ ಪದೇ ಬದಲಾಗುತ್ತಿರುವ ನಿಲುವುಗಳಿಂದಾಗಿ ಮಾತುಕತೆಯಿಂದ ಹಿಂದೆ ಸರಿಯುತ್ತಿರುವುದಾಗಿ ಇರಾನ್ ತಿಳಿಸಿದೆ.

ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ. ಎರಡನೇ ಸಭೆಗೆ ಹಾಜರಾಗುವುದಿಲ್ಲ. ಇರಾನ್ ಬಂದರುಗಳ ಸುತ್ತಲೂ ನೌಕಾ ದಿಗ್ಬಂಧನ ಮುಂದುವರಿದಿದೆ. ಇದು ಕದನ ವಿರಾಮ ಒಪ್ಪಂದದ ಉಲ್ಲಂಘಿಸುತ್ತದೆ. ಈ ಹಿನ್ನೆಲೆ ಮಾತುಕತೆಗಳಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಇರಾನ್ ಸ್ಪಷ್ಟಪಡಿಸಿದೆ.
ಇರಾನ್ ಅಣು ಬಾಂಬ್ ತಯಾರಿಸುವುದನ್ನು ನಿಲ್ಲಿಸಬೇಕು ಮತ್ತು ತನ್ನ ಬಳಿ ಇರುವ ಯುರೇನಿಯಂ ದಾಸ್ತಾನುಗಳನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕು ಎಂಬುದು ಅಮೆರಿಕದ ಕಠಿಣ ಷರತ್ತು. ಆದರೆ ಇರಾನ್ ತನ್ನ ಯುರೇನಿಯಂ ಪುಷ್ಟೀಕರಣದ ಹಕ್ಕನ್ನು ಬಿಟ್ಟುಕೊಡಲು ನಿರಾಕರಿಸಿದೆ.
ಈಗಾಲೇ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಹಾಗೂ ಅಮೆರಿಕದ ನಿಯೋಗಗಳು ಶಾಂತಿ ಮಾತುಕತೆ ನಡೆಸಿದ್ದವು. ಆದರೆ ಇರಾನ್ ಬೇಡಿಕೆಗೆ ಅಮೆರಿಕ ಒಪ್ಪದ ಕಾರಣ ಮಾತುಕತೆ ಮುರಿದುಬಿದ್ದಿತ್ತು. ಇದರ ನಡುವೆ ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಕರೆಯಿಂದ ಮಾತುಕತೆ ವಿಫಲವಾಗಿದೆ ಎಂದು ಇರಾನ್ ದೂರಿತ್ತು. ಇದಾಗಿಯೂ ಅಮೆರಿಕ ಎರಡನೇ ಸುತ್ತಿನ ಮಾತುಕತೆಗೆ ಮುಂದಾಗಿದ್ದು ಇರಾನ್ ನಿರಾಕರಿಸಿದೆ. ಇದಕ್ಕೂ ಮುನ್ನ ಎರಡೂ ದೇಶಗಳು 20 ದಿನಗಳ ಕದನ ವಿರಾಮ ಘೋಷಿಸಿದ್ದವು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಪರಸ್ಪರ ಘರ್ಷಣೆ ಮುಂದುವರಿಸಿದ್ದವು.
ಇಸ್ರೇಲ್ – ಲೆಬನಾನ್ ಕದನ ವಿರಾಮ
ಇರಾನ್ (Iran) ಮತ್ತು ಅಮೆರಿಕದ (America) ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದ ಇಸ್ರೇಲ್ ಮತ್ತು ಲೆಬನಾನ್ ಯುದ್ಧವನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ (ಏ.17 ರಿಂದ) 10 ದಿನಗಳ ಕದನ ವಿರಾಮಕ್ಕೆ ಸಹಮತ ವ್ಯಕ್ತವಾಗಿದೆ. ಈ ನಡುವೆ ವಿಚಾರದಲ್ಲಿ ಟ್ರಂಪ್ (Donald Trump) ಮತ್ತೆ ಬಡಾಯಿ ಕೊಚ್ಚಿಕೊಂಡರೆ ಮತ್ತೊಂದು ಕಡೆ ಇರಾನ್ ಮೇಲೆ ಮಿಲಿಟರಿ ಕ್ರಮದ ಎಚ್ಚರಿಕೆ ನೀಡಿದ್ದರು.

ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ
ಅಮೆರಿಕದ ದಿಗ್ಬಂಧನದ ಬಳಿಕ ಹಾರ್ಮುಜ್ ಜಲಸಂಧಿಯನ್ನು ಇರಾನ್ ಹಿಡಿತಕ್ಕೆ ತೆಗೆದುಕೊಂಡಿದೆ. ಇದರಿಂದ ಹಡಗುಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ಭಾರತೀಯ ಹಡಗುಗಳ ಮೇಲೂ ಇರಾನ್ ದಾಳಿ ಮಾಡಿದೆ. ಇದರಿಂದ ಮತ್ತಷ್ಟು ಆತಂಕ ಹೆಚ್ಚಾಗಿದ್ದು, ತೈಲ ಹಡಗುಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.

ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ 115 ಡಾಲರ್ (10,703 ರೂ.) ದಾಟಿದೆ. ಇತ್ತೀಚಿನ 24 ಗಂಟೆಗಳ ಒಳಗೆ ಬೆಲೆಗಳಲ್ಲಿ ಏರಿಳಿತ ಸಂಭವಿಸಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಉಂಟಾಗಿದೆ.
ಪ್ರಮುಖ ಯುದ್ಧ ವಿರಾಮಗಳು
1. ಕ್ರಿಸ್ಮಸ್ ಕದನ ವಿರಾಮ: ಮೊದಲನೆ ಮಹಾಯುದ್ಧದ ವೇಳೆ 1914 ರ ಡಿಸೆಂಬರ್ 24 ರಂದು ಜರ್ಮನ್ ಮತ್ತು ಬ್ರಿಟಿಷ್ ಸೈನಿಕರು ಕ್ರಿಸ್ಮಸ್ ಆಚರಿಸಲು ತಾತ್ಕಾಲಿಕವಾಗಿ ಯುದ್ಧ ಸ್ಥಗಿತಗೊಳಿಸಿದ್ದರು.
2. ಕೊರಿಯನ್ ಕದನ ವಿರಾಮ: 1953 ಜುಲೈ 27ರಂದು ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವೆ ಸಹಿ ಹಾಕುವ ಮೂಲಕ 3 ವರ್ಷಗಳ ಯುದ್ಧ ಅಂತ್ಯಗೊಂಡಿತ್ತು.
3. ವಿಯೆಟ್ನಾಂ ಕದನ ವಿರಾಮ: 1973 ಜನವರಿ 27ರಂದು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿ ಅಮೆರಿಕ ಮತ್ತು ವಿಯೆಟ್ನಾಂ ಕದನ ವಿರಾಮ ಘೋಷಿಸಿದ್ದವು.
4. ಗಲ್ಫ್ ಯುದ್ಧ ಒಪ್ಪಂದ: 1991ರ ಮಾರ್ಚ್ 3ರಂದು ಇರಾಕ್ ಮತ್ತು ಕುವೈತ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು.
5. ನಾಗೋರ್ಣೋ-ಕಾರಾಬಾಖ್ ಶಾಂತಿ ಒಪ್ಪಂದ: 2020 ಮತ್ತು 2023ರಲ್ಲಿ ಅರ್ಮೇನಿಯಾ ಮತ್ತು ಅಜರ್ಬೈಜಾನ್ ದೇಶಗಳು ರಷ್ಯಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಸಹಿ ಹಾಕಿದವು.
6. ಇಸ್ರೇಲ್-ಹಮಾಸ್ ಶಾಂತಿ ಒಪ್ಪಂದ: 2021ರ ಮೇ ತಿಂಗಳಲ್ಲಿ ನಡೆದ ಗಾಜಾ ಸಂಘರ್ಷ ಹಿನ್ನೆಲೆಯಲ್ಲಿ ನಡೆದ ಒಪ್ಪಂದ ಇದು.
ಭಾರತ ಪಾಕ್ ಕದನ ವಿರಾಮ
ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Terror Attack) ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹಳಸಿತ್ತು. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಪಾಕಿಸ್ತಾನದೊಳಗೆ ನುಗ್ಗಿ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಆದರೆ, ಅದನ್ನು ವೈಯಕ್ತಿಕವಾಗಿ ಸ್ವೀಕರಿಸಿದ ಪಾಕಿಸ್ತಾನ ಭಾರತದ ಗಡಿಯಲ್ಲಿ ಅಮಾಯಕ ನಾಗರಿಕರ ಮೇಲೆ ಗುಂಡು ಹಾರಿಸಿ ಜೀವಗಳನ್ನು ಬಲಿ ಪಡೆದಿತ್ತು.

ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ವೈಮಾನಿಕ ದಾಳಿ, ಶೆಲ್ ದಾಳಿ, ಗುಂಡಿನ ದಾಳಿ ನಡೆದಿತ್ತು. ಬಳಿಕ ಎರಡೂ ದೇಶಗಳ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಕದನ ವಿರಾಮಕ್ಕೆ ಒಪ್ಪಿಸಿದ್ದರು ಎಂದು ವರದಿಯಾಗಿತ್ತು. ಆದರೆ ಟ್ರಂಪ್ ಮಧ್ಯಸ್ಥಿಕೆಯನ್ನು ಭಾರತ ತಳ್ಳಿಹಾಕಿದೆ.

ಕದನ ವಿರಾಮ ಉಲ್ಲಂಘನೆಗೆ ಕಠಿಣ ಕ್ರಮ
ಕದನ ವಿರಾಮದ ನಿಯಮಗಳನ್ನು ಉಲ್ಲಂಫಿಸುವ ದೇಶಗಳು ಅಂತಾರಾಷ್ಟ್ರೀಯ ಸಮುದಾಯದಿಂದ ಕಠಿಣ ಕ್ರಮಗಳಿಗೆ ಒಳಪಡುತ್ತವೆ. ದೇಶ – ದೇಶಗಳ ನಡುವಿನ ಸಂಬಂಧಗಳಲ್ಲಿ ಬಿರುಕು ಮತ್ತು ನಾಗರಿಕರ ಜೀವನಕ್ಕೂ ಅಪಾಯ ತಂದೊಡ್ಡುವ ಹಿನ್ನೆಲೆಯಲ್ಲಿ ಅಂಥ ದೇಶಗಳು ಆರ್ಥಿಕ ನಿರ್ಬಂಧಗಳು, ರಾಜತಾಂತ್ರಿಕ ಒತ್ತಡ, ಮತ್ತು ಕಾನೂನು ಕ್ರಮಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ.
ಸಮರ ಪ್ರಚೋದನೆ
ವಿಶ್ವಸಂಸ್ಥೆ ನಿಯಮಾವಳಿಗಳ ವಿಧಿ 51ರ ಪ್ರಕಾರ ‘ಆತ್ಮರಕ್ಷಣೆ ನಿಬಂಧನೆ’ಗಳಲ್ಲಿ ವಿವರಿಸಲಾಗಿರುವ ಆ್ಯಕ್ಟ್ ಆಫ್ ವಾರ್‌ನಲ್ಲಿ(ಸಮರ ಪ್ರಚೋದನೆ) ಭಯೋತ್ಪಾದನೆ ನಿಗ್ರಹಕ್ಕೆ ಒತ್ತು ನೀಡಿ ನಿಯಮಗಳನ್ನು ರೂಪಿಸಲಾಗಿದೆ. ಇದರ ಪ್ರಕಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮತಿಯಿಲ್ಲದೆ ಒಂದು ರಾಷ್ಟ್ರವು ಮತ್ತೊಂದರ ಮೇಲೆ ಸುಖಾಸುಮ್ಮನೆ ದಾಳಿ ನಡೆಸುವಂತಿಲ್ಲ. ಆದರೆ ಆತ್ಮರಕ್ಷಣೆ, ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ, ರಾಜಕೀಯ ಸ್ವಾತಂತ್ರ್ಯಕ್ಕೆ ಆಪತ್ತು ಉಂಟಾದ ಸಂದರ್ಭದಲ್ಲಿ ಯಾವುದೇ ರಾಷ್ಟ್ರವು ತಕ್ಷಣದಲ್ಲಿ ದಾಳಿ ನಡೆಸಲು ಅವಕಾಶವಿದೆ. ಇದನ್ನೂ ಓದಿ: ಹಾರ್ಮುಜ್‌ನಲ್ಲಿ ಗುಂಡಿನ ಮೊರೆತ – ಇರಾನ್ ಹಡಗಿನ ಮೇಲೆ ಅಮೆರಿಕ ದಾಳಿ

