– 300 ಕೋಟಿ ಯೋಜನೆ 3 ಕೋಟಿಗೆ ಸೀಮಿತ
ನವದೆಹಲಿ: ಹಣದ ಕೊರತೆಯಿಂದ ಅಯೋಧ್ಯೆಯ (Ayodhya) ಧನ್ನಿಪುರದಲ್ಲಿ ನಿರ್ಮಾಣವಾಗಬೇಕಿದ್ದ ಭವ್ಯ ಮಸೀದಿಯ ಬದಲಾಗಿ, ಕಡಿಮೆ ವೆಚ್ಚದಲ್ಲಿ ಸಣ್ಣ ಮಸೀದಿ ನಿರ್ಮಿಸಲು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ (Indo Islamic Cultural Foundation) ತೀರ್ಮಾನಿಸಿದೆ.
300 ಕೋಟಿ ರೂ. ವೆಚ್ಚದ ಯೋಜನೆ ಈಗ ಕೇವಲ 3 ಕೋಟಿ ರೂ. ವೆಚ್ಚದ ಸಣ್ಣ ಮಸೀದಿ ನಿರ್ಮಾಣಕ್ಕೆ ಸೀಮಿತವಾಗುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸುನ್ನಿ ವಕ್ಫ್ ಮಂಡಳಿಗೆ ಅಯೋಧ್ಯೆಯಿಂದ ಸುಮಾರು 25 ಕಿ.ಮೀ ದೂರದ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಜಾಗ ನೀಡಲಾಗಿತ್ತು. ಮಸೀದಿ ನಿರ್ಮಾಣಕ್ಕಾಗಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ರಚನೆಯಾಗಿತ್ತು. ಆರಂಭದಲ್ಲಿ ಮಸೀದಿಯ ಜೊತೆಗೆ ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡುಗೆಮನೆ ಹಾಗೂ ಇನ್ನಿತರ ಸಾರ್ವಜನಿಕ ಸೌಲಭ್ಯಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು.
ಈ ಸಂಪೂರ್ಣ ಯೋಜನೆಗೆ ಸುಮಾರು 300 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇದುವರೆಗೆ ಟ್ರಸ್ಟ್‌ಗೆ ಕೇವಲ 1.5 ಕೋಟಿ ರೂ. ದೇಣಿಗೆ ಮಾತ್ರ ಬಂದಿರುವುದರಿಂದ ಯೋಜನೆಯನ್ನು ಮರುಪರಿಶೀಲನೆ ಮಾಡಲಾಗಿದೆ.
ಇದೀಗ ಟ್ರಸ್ಟ್ ಹೊಸ ಯೋಜನೆ ರೂಪಿಸಿದ್ದು, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸಣ್ಣ ಮಸೀದಿ ನಿರ್ಮಿಸಲು ನಿರ್ಧರಿಸಿದೆ. ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡುಗೆಮನೆ ಸೇರಿದಂತೆ ಇತರ ಸಾರ್ವಜನಿಕ ಸೌಲಭ್ಯಗಳನ್ನು ಸದ್ಯ ಕೈಬಿಡುವ ಸಾಧ್ಯತೆ ಇದೆ.ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ| ಅಂತಿಮ ಹಂತದಲ್ಲಿ ತನಿಖೆ- ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನಲ್ಲಿ ಯಾವುದೇ ಲೋಪವಿಲ್ಲ: ಸರ್ಕಾರ
ಮಸೀದಿ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ಪ್ರಸ್ತಾವಿತ ಮಸೀದಿಯ ನಕ್ಷೆಯನ್ನು ತಿರಸ್ಕರಿಸಿದ್ದೂ ಯೋಜನೆ ವಿಳಂಬವಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಯೋಧ್ಯೆಯ ಸ್ಥಳೀಯ ಮುಸ್ಲಿಮರು ಧನ್ನಿಪುರ ಮಸೀದಿ ಯೋಜನೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಲ್ಲ ಎನ್ನಲಾಗಿದೆ. ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ಪ್ರಮುಖ ಮುಸ್ಲಿಂ ವಾದಿಯಾಗಿದ್ದ ಇಕ್ಬಾಲ್ ಅನ್ಸಾರಿ ಕೂಡ, ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ವಿಳಂಬವಾದರೂ ಮುಸ್ಲಿಂ ಸಮುದಾಯ ಹೆಚ್ಚು ಚಿಂತಿಸುತ್ತಿಲ್ಲ ಎಂದು ಈ ಹಿಂದೆ ಹೇಳಿದ್ದರು.
ಅಯೋಧ್ಯೆಯಿಂದ ದೂರದಲ್ಲಿರುವ ಧನ್ನಿಪುರಕ್ಕೆ ನಮಾಜ್ ಸಲ್ಲಿಸಲು ಹೆಚ್ಚಿನ ಜನರು ಹೋಗುವ ಸಾಧ್ಯತೆ ಕಡಿಮೆ. ಹೀಗಾಗಿ ಈ ಯೋಜನೆ ಆರಂಭದಿಂದಲೇ ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದು ಅಯೋಧ್ಯೆ ವಕ್ಫ್ ಸಮಿತಿಯ ಕೆಲ ಸದಸ್ಯರ ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ಕಲ್ಲಿದ್ದಲು ಹಗರಣ: ನಿಧನವಾಗಿ 2 ವರ್ಷದ ಬಳಿಕ ಸುಪ್ರೀಂನಿಂದ ಕ್ಲೀನ್ ಚಿಟ್
