ನವದೆಹಲಿ: ಕಳೆದ ವರ್ಷ 260 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾದ (Air India) ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಇಂಧನ ನಿಯಂತ್ರಣ ಸ್ವಿಚ್(Fuel Control Switch) ಅಥವಾ ಅದರ ‘ಲಾಕಿಂಗ್ ಮೆಕ್ಯಾನಿಸಂ’ನಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ವಿಮಾನದ ಮೂಲ ಉಪಕರಣ ತಯಾರಕರು ನಡೆಸಿದ ಸುಧಾರಿತ ಪರೀಕ್ಷೆಗಳು ಸ್ವಿಚ್ ಸಾಮಾನ್ಯ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದನ್ನು ದೃಢಪಡಿಸಿವೆ. ಪ್ರಸ್ತುತ ಅಮೆರಿಕದ ಸಿಯಾಟೆಲ್ನಲ್ಲಿರುವ ಬೋಯಿಂಗ್ ಕಂಪನಿಯ ಘಟಕದಲ್ಲಿ ಪೂರ್ಣ ಪ್ರಮಾಣದ ‘ಥ್ರಸ್ಟ್ ಕಂಟ್ರೋಲ್ ಮಾಡ್ಯೂಲ್’ನ ಸವಿಸ್ತಾರ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಹೇಳಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆಯನ್ನು ವಿಳಂಬಗೊಳಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಪ್ರಮುಖ ವಿಮಾನ ಅಪಘಾತಗಳ ತನಿಖೆಗೆ ಯಾವುದೇ ನಿರ್ದಿಷ್ಟ ಕಾಲಮಿತಿಯಿರುವುದಿಲ್ಲ ಮತ್ತು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ. ತನಿಖೆ ಪೂರ್ಣಗೊಂಡ ನಂತರ ಅಂತಿಮ ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.

ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೊರಟಿದ್ದ ಬೋಯಿಂಗ್ 787-8 ವಿಮಾನ (AI171) ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು 260 ಜನರು ಜೀವ ಕಳೆದುಕೊಂಡಿದ್ದರು. ಈ ದುರಂತದ ನಂತರ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನ ಕಾರ್ಯನಿರ್ವಹಣೆ ತೀವ್ರ ಪರಿಶೀಲನೆಗೆ ಒಳಪಟ್ಟಿತ್ತು ಮತ್ತು ವಿಮಾನ ವ್ಯವಸ್ಥೆಯ ಕುರಿತು ಸಾಲು ಸಾಲು ತನಿಖೆಗಳು ಪ್ರಾರಂಭವಾಗಿದ್ದವು. ಇದನ್ನೂ ಓದಿ: BS-III ವಾಹನಗಳಿಗೆ E20 ಎಫೆಕ್ಟ್- ರಬ್ಬರ್ ಭಾಗ, ಗ್ಯಾಸ್ಕೆಟ್ ಬದಲಾಯಿಸಬೇಕು: ಗಡ್ಕರಿ
ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನ ರಚನಾತ್ಮಕ ಸಮಗ್ರತೆ ಸೇರಿದಂತೆ ಅದರ ಲಾಕಿಂಗ್ ವ್ಯವಸ್ಥೆಯ ವಿವರವಾದ ತನಿಖೆಯಲ್ಲಿ ಯಾವುದೇ ಅಸಹಜತೆ ಕಂಡುಬಂದಿಲ್ಲ ಎಂದು ಸಚಿವರು ತಿಳಿಸಿದರು.
ಫ್ಯೂಯಲ್ ಕಂಟ್ರೋಲ್ ಸ್ವಿಚ್ ಯಾವುದೇ ದೋಷದಿಂದ ಮುಕ್ತವಾಗಿದ್ದರೂ, ಪೂರ್ಣ ಪ್ರಮಾಣದ ಥ್ರಸ್ಟ್ ಕಂಟ್ರೋಲ್ ಮಾಡ್ಯೂಲ್‌ನ ತಪಾಸಣೆ ಪ್ರಸ್ತುತ ಸೀಟಲ್‌ನಲ್ಲಿ ನಡೆಯುತ್ತಿದ್ದು, ತನಿಖಾಧಿಕಾರಿಗಳು ಅದರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಎಎಐಬಿ (AAIB) ಅಂತಿಮ ವರದಿ ನೀಡಲು ವಿಳಂಬ ಮಾಡುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿ ಸರ್ಕಾರ ಪ್ರಮುಖ ವಿಮಾನ ಅಪಘಾತಗಳ ತನಿಖೆಯು ನಿಗದಿತ ಸಮಯದ ಚೌಕಟ್ಟನ್ನು ಅನುಸರಿಸುವುದಿಲ್ಲ, ಇದು ಒಂದು ಪ್ರಕ್ರಿಯೆಯಾಗಿದ್ದು, ಪ್ರಸ್ತುತ AI-171 ತನಿಖೆಯು ಅಂತಿಮ ಹಂತದಲ್ಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
