– 2005 ರಿಂದ 2016 ವರೆಗೆ ಉತ್ಪಾದನೆಯಾದ ವಾಹನಗಳ ಮೇಲೆ ಪರಿಣಾಮ
– ಅಧ್ಯಯನ ನಡೆಸಿ E20 ಜಾರಿಗೆ ತರಲಾಗಿದೆ
– ಎಂಜಿನ್‌ನಲ್ಲಿ ಮಾರ್ಪಾಡು ಮಾಡುವ ಅಗತ್ಯವಿಲ್ಲ
ನವದೆಹಲಿ: ಏಪ್ರಿಲ್ 1, 2005 ರಿಂದ ಆರಂಭವಾಗಿ 2016 ಕ್ಕಿಂತ ಮೊದಲು ತಯಾರಾದ ಬಿಎಸ್-III (BS-III) ವಾಹನಗಳಲ್ಲಿ E20 ಇಂಧನವನ್ನು ಬಳಸಿದಾಗ ಅವುಗಳಲ್ಲಿನ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸಬೇಕಾಗಬಹುದು ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಉತ್ತರಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಅವರು E20 ಇಂಧನದ ಬಳಕೆಯಿಂದ ವಾಹನದ ಮೈಲೇಜ್ ಮೇಲಾಗುವ ಪರಿಣಾಮದ ಕುರಿತಾದ ಕಳವಳಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದರು.
ವಾಹನ ಮೈಲೇಜ್ ಎನ್ನುವುದು ಕೇವಲ ಇಂಧನದ ವಿಧವನ್ನು ಮಾತ್ರವಲ್ಲದೆ ಇತರೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ವಾಹನ ತಯಾರಕರು ಮತ್ತು ವಾಹನ ಎಂಜಿನ್ ಪರೀಕ್ಷಾ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎಂದು ಹೇಳಿದರು.
ಎರಡು ಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ಮೇಲೆ E20 ಇಂಧನದ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಡೆಹ್ರಾಡೂನ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (IIP), ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಮತ್ತು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಜಂಟಿಯಾಗಿ ಅಧ್ಯಯನ ನಡೆಸಿವೆ. ಈ ಅಧ್ಯಯನಗಳು ಕಾರು ಮತ್ತು ದ್ವಿಚಕ್ರ ವಾಹನಗಳ ಎಂಜಿನ್‌ಗಳಲ್ಲಿ ಯಾವುದೇ ಮಾರ್ಪಾಡು ಮಾಡುವ ಅಗತ್ಯವಿಲ್ಲ ಎಂಬುದನ್ನು ತೋರಿಸಿವೆ ಎಂದು ಅವರು ವಿವರಿಸಿದರು.
ಈ ಅಧ್ಯಯನಗಳು ಹಳೆಯ ವಾಹನಗಳು ಸಹ E20 ಇಂಧನದೊಂದಿಗೆ ಚಲಿಸಿದಾಗ ಕಾರ್ಯಕ್ಷಮತೆಯಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸಗಳನ್ನು ಪ್ರದರ್ಶಿಸಿಲ್ಲ ಅಥವಾ ಯಾವುದೇ ಅಸಹಜ ಸವೆತ ತೋರಿಸಿಲ್ಲ ಎಂಬುದನ್ನು ಖಚಿತಪಡಿಸಿವೆ. ಚಾಲನಾ ಸಾಮರ್ಥ್ಯ, ಸ್ಟಾರ್ಟ್ ಆಗುವಿಕೆ, ಲೋಹದ ಹೊಂದಾಣಿಕೆ, ಮತ್ತು ಪ್ಲಾಸ್ಟಿಕ್ ಹೊಂದಾಣಿಕೆಯಂತಹ ನಿಯತಾಂಕಗಳಲ್ಲಿ ಯಾವುದೇ ಸಮಸ್ಯೆಗಳು ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಕರ್ನಾಟಕ ಮತದಾರರ ಪಟ್ಟಿಯಿಂದ 84.31 ಲಕ್ಷ ಮಂದಿ ಔಟ್: ಚುನಾವಣಾ ಆಯೋಗ
ಗಡ್ಕರಿ ಹೇಳಿದ್ದೇನು?
ನೀತಿ ಆಯೋಗದ 2020 ರ ಡಿಸೆಂಬರ್ 26 ರಂದು ರಚಿಸಿದ್ದ ಅಂತರ-ಸಚಿವಾಲಯ ಸಮಿತಿಯು (IMC) ವಾಹನ ಹೊಂದಾಣಿಕೆ ಮತ್ತು ಎಥೆನಾಲ್ ಮಿಶ್ರಣದ ಮೈಲೇಜ್/ಕ್ಷಮತೆಯ ಅಂಶಗಳನ್ನು ಸಮಗ್ರವಾಗಿ ಪರೀಕ್ಷಿಸಿದೆ. ಈ ಮೌಲ್ಯಮಾಪನಕ್ಕೆ IOCL, ARAI ಮತ್ತು SIAM ನಡೆಸಿದ ಸಂಶೋಧನೆಗಳು ಬೆಂಬಲ ನೀಡಿದ್ದವು.
ಜೂನ್ 2021 ರಲ್ಲಿ ಬಿಡುಗಡೆಯಾದ ಸಮಿತಿಯ “ಭಾರತದಲ್ಲಿ ಎಥೆನಾಲ್ ಮಿಶ್ರಣದ ಮಾರ್ಗಸೂಚಿ 2020-25 (Roadmap for Ethanol Blending in India 2020-25) ವರದಿಯನ್ನು ವಾಹನ ತಯಾರಕರು, ತೈಲ ಕಂಪನಿಗಳು ಮತ್ತು ಕೃಷಿ ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರ ಸಿದ್ಧಪಡಿಸಲಾಯಿತು. ಇದು ವಸ್ತುಗಳ ಹೊಂದಾಣಿಕೆ, ಎಂಜಿನ್ ಮಾಪನಾಂಕ ನಿರ್ಣಯ (Calibration), ಇಂಧನ ವ್ಯವಸ್ಥೆಗಳು, ಚಾಲನಾ ಸಾಮರ್ಥ್ಯ, ಬಾಳಿಕೆ, ಹೊರಸೂಸುವಿಕೆ ಮತ್ತು ಇಂಧನ ಕ್ಷಮತೆಯನ್ನು ಪರಿಶೀಲಿಸಿತ್ತು. E-20 ಇಂಧನ ಪರಿಚಯಿಸುವ ಮುನ್ನವೇ ಈ ಸಮಿತಿಯ ವರದಿ ಬಂದಿತ್ತು.
ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಕಾರ್ಯಕ್ರಮವನ್ನು ಹಂತ ಹಂತವಾಗಿ, ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಮತ್ತು ಸಮಾಲೋಚನಾತ್ಮಕ ವಿಧಾನದ ಮೂಲಕ ಅನುಷ್ಠಾನಗೊಳಿಸಲಾಗಿದೆ. ಬ್ರೆಜಿಲ್‌ನಂತಹ ದೇಶಗಳು ದಶಕಗಳಿಂದ ಹೆಚ್ಚಿನ ಎಥೆನಾಲ್ ಮಿಶ್ರಣಗಳನ್ನು ಬಳಸುತ್ತಿದ್ದು, ಜಾಗತಿಕವಾಗಿ ಇದನ್ನು ಶತಮಾನಕ್ಕೂ ಹೆಚ್ಚು ಕಾಲ ಬಳಸಲಾಗುತ್ತಿದೆ. ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ – ವರದಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಏಪ್ರಿಲ್ 2026 ರಲ್ಲಿ E20 ಅನ್ನು ಪರಿಚಯಿಸುವ ಮೊದಲು, ಎಂಜಿನ್ ಬಾಳಿಕೆ, ವಸ್ತುಗಳ ಹೊಂದಾಣಿಕೆ, ಇಂಧನ ವ್ಯವಸ್ಥೆಗಳು, ತುಕ್ಕು ನಿರೋಧಕತೆ, ಚಾಲನಾ ಸಾಮರ್ಥ್ಯ, ಹೊರಸೂಸುವಿಕೆ, ಇಂಧನ ಉಳಿತಾಯ ಮತ್ತು ಒಟ್ಟಾರೆ ವಾಹನದ ಕಾರ್ಯಕ್ಷಮತೆಯನ್ನು ಒಳಗೊಂಡಂತೆ ವ್ಯಾಪಕವಾದ ಪ್ರಯೋಗಾಲಯ ಅಧ್ಯಯನಗಳು ಬಾಳಿಕೆ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳನ್ನು ನಡೆಸಿದ ಬಳಿಕ ಜಾರಿಗೆ ತರಲಾಗಿದೆ.
BS ಅಥವಾ ಭಾರತ್ ಸ್ಟೇಜ್ ಎಂಬುದು ಭಾರತದ ವಾಹನ ಹೊರಸೂಸುವಿಕೆ ಮಾನದಂಡವಾಗಿದ್ದು, ಇದು ಕಾರ್ಬನ್ ಮಾನಾಕ್ಸೈಡ್ (CO), ಸಾರಜನಕದ ಆಕ್ಸೈಡ್‌ಗಳು (NOx), ಹೈಡ್ರೋಕಾರ್ಬನ್‌ಗಳು (HC) ಮತ್ತು ಕಣಗಳ ದ್ರವ್ಯರಾಶಿಯಂತಹ (PM) ಮಾಲಿನ್ಯಕಾರಕಗಳಿಗೆ ಮಿತಿಯನ್ನು ನಿಗದಿಪಡಿಸುತ್ತದೆ.
