ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ (One Nation, One Election) ಜಾರಿಗೆ ಸಂಬಂಧಿಸಿದ ಎರಡು ಮಹತ್ವದ ಮಸೂದೆಗಳನ್ನು ಪರಿಶೀಲಿಸುತ್ತಿರುವ ಸಂಯುಕ್ತ ಸಂಸದೀಯ ಸಮಿತಿಯ ಅವಧಿಯನ್ನು ಲೋಕಸಭೆ (Lok Sabha) ವಿಸ್ತರಿಸಿದೆ. ಈ ಸಂಬಂಧ ಬುಧವಾರ ಲೋಕಸಭೆಯಲ್ಲಿ ಮಂಡಿಸಲಾದ ನಿರ್ಣಯ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ.
ಜೆಪಿಸಿ (JPC) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಪಿ.ಪಿ.ಚೌಧರಿ ಅವರು ಸಮಿತಿಯ ವರದಿ ಸಲ್ಲಿಕೆಗೆ ನಿಗದಿಪಡಿಸಿದ್ದ ಗಡುವನ್ನು 2026ರ ಚಳಿಗಾಲದ ಸಂಸತ್ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ವಿಸ್ತರಿಸುವಂತೆ ಪ್ರಸ್ತಾವನೆ ಮಂಡಿಸಿದರು. ಸದನವು ಇದಕ್ಕೆ ಅನುಮೋದನೆ ನೀಡಿದೆ. ಇದನ್ನೂ ಓದಿ: ʼನೀವು ನಿಷ್ಪ್ರಯೋಜಕರುʼ – ಸಿಜೆಪಿ ವಕ್ತಾರ ಸೌರವ್ ದಾಸ್ ಟೀಕೆಗೆ ಕಂಗನಾ ಕಿಡಿ
ಸಮಿತಿಯು ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ-2024ಗಳನ್ನು ಪರಿಶೀಲಿಸುತ್ತಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅಗತ್ಯವಿರುವ ಸಂವಿಧಾನಾತ್ಮಕ ಬದಲಾವಣೆಗಳನ್ನು ಜಾರಿಗೆ ತರುವುದು ಈ ಮಸೂದೆಗಳ ಮುಖ್ಯ ಉದ್ದೇಶ. ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆಗೆ ಭಾರೀ ಸ್ಪಂದನೆ, 48 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಲಾಭ – ಪ್ರಹ್ಲಾದ್ ಜೋಶಿ
ಜೆಪಿಸಿ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ರಾಜಕೀಯ ಪಕ್ಷಗಳು, ಕಾನೂನು ತಜ್ಞರು, ಚುನಾವಣಾ ಪರಿಣಿತರು ಹಾಗೂ ವಿವಿಧ ವಲಯಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. 2029ರೊಳಗೆ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳ ಕುರಿತು ಸಮಿತಿ ಅಭಿಪ್ರಾಯ ಸಂಗ್ರಹಿಸುತ್ತಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ಮಸೂದೆ ಅಂಗೀಕಾರ
ಚಳಿಗಾಲದ ಸಂಸತ್ ಅಧಿವೇಶನ ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರದಲ್ಲಿ ಆರಂಭವಾಗಿ ಕ್ರಿಸ್‌ಮಸ್‌ಗೆ ಮುನ್ನ ಮುಕ್ತಾಯಗೊಳ್ಳುತ್ತದೆ. ವರದಿ ಸಲ್ಲಿಕೆಗೆ ಹೆಚ್ಚುವರಿ ಸಮಯ ನೀಡುವ ಉದ್ದೇಶದಿಂದಲೇ ಸಮಿತಿಯ ಅವಧಿಯನ್ನು ವಿಸ್ತರಿಸಲಾಗಿದೆ. 2024ರ ಡಿಸೆಂಬರ್‌ನಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಈ ಜೆಪಿಸಿಯನ್ನು ರಚಿಸಿದ್ದರು. ಮಾಜಿ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವರಾಗಿದ್ದ ಬಿಜೆಪಿ ಸಂಸದ ಪಿ.ಪಿ. ಚೌಧರಿ ಅವರನ್ನು ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಇದನ್ನೂ ಓದಿ: ಸಿಎಂ ಸ್ವಕ್ಷೇತ್ರದಲ್ಲಿ ಬರ ಪರಿಶೀಲನೆ ನಡೆಸಿದ ಬಿಜೆಪಿ ನಿಯೋಗ – ಶೀಘ್ರ ಬರ ಪರಿಹಾರ ಘೋಷಣೆಗೆ ಒತ್ತಾಯ
ಪ್ರಸ್ತುತ ಸಮಿತಿಯಲ್ಲಿ ಲೋಕಸಭೆಯ 27 ಸದಸ್ಯರು ಹಾಗೂ ರಾಜ್ಯಸಭೆಯ 12 ಸದಸ್ಯರು ಸೇರಿದಂತೆ ಒಟ್ಟು 39 ಮಂದಿ ಸದಸ್ಯರಿದ್ದಾರೆ. ಆರಂಭದಲ್ಲಿ 31 ಸದಸ್ಯರಿದ್ದ ಸಮಿತಿಯ ಸದಸ್ಯರ ಸಂಖ್ಯೆಯನ್ನು, ಹೆಚ್ಚಿನ ರಾಜಕೀಯ ಪಕ್ಷಗಳು ಭಾಗವಹಿಸುವ ಆಸಕ್ತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 39ಕ್ಕೆ ಹೆಚ್ಚಿಸಲಾಗಿತ್ತು. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರುಪೂರ್ಣಿಮೆ ಸಂಭ್ರಮ – ಚಿನ್ನದ ಪಲ್ಲಕ್ಕಿಯಲ್ಲಿ ಮೃತ್ತಿಕೆ ಮೆರವಣಿಗೆ
‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಗೆ ತರುವುದರಿಂದ ಚುನಾವಣೆ ವೆಚ್ಚ ಕಡಿಮೆಯಾಗುವುದು, ಆಡಳಿತದಲ್ಲಿ ನಿರಂತರತೆ ಕಾಯ್ದುಕೊಳ್ಳುವುದು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಸಮಯ ದೊರೆಯುವುದು ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ. ಆದರೆ ಸಂವಿಧಾನಾತ್ಮಕ ಹಾಗೂ ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷಗಳು ಮತ್ತು ಕೆಲ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆ ಕೇಸ್ – ಗರ್ಲ್‌ಫ್ರೆಂಡ್‌ಗೆ ಕರೆ ಮಾಡಿ ರೈಲಿಗೆ ತಲೆಕೊಟ್ಟಿದ್ದ ಯುವಕ!
ಮಾಜಿ ರಾಷ್ಟ್ರಪತಿ ರಮನಾಥ್ ಕೋವಿಂದ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳಿಗೆ 2024ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಕೋವಿಂದ್ ಸಮಿತಿಯು ಲೋಕಸಭೆ ಚುನಾವಣೆಯ ಘೋಷಣೆಗೆ ಮುನ್ನವೇ 2024ರ ಮಾರ್ಚ್ನಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದನ್ನೂ ಓದಿ: ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು – ಜೆಡಿಎಸ್ ಆಗ್ರಹ
ಸ್ವಾತಂತ್ರ‍್ಯಾನಂತರ 1951ರಿಂದ 1967ರವರೆಗೆ ದೇಶದಲ್ಲಿ ಲೋಕಸಭೆ ಹಾಗೂ ಬಹುತೇಕ ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದವು. ನಂತರ ವಿವಿಧ ಕಾರಣಗಳಿಂದ ಈ ಪದ್ಧತಿ ಸ್ಥಗಿತಗೊಂಡಿತ್ತು. ಇದೀಗ ಮತ್ತೊಮ್ಮೆ ಅದೇ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ಜೆಪಿಸಿಯ ವರದಿ ಈ ಪ್ರಕ್ರಿಯೆಯಲ್ಲಿ ನಿರ್ಣಾಯಕವಾಗಲಿದೆ. ಇದನ್ನೂ ಓದಿ: ಸಿವಿಲ್ ಪೊಲೀಸ್ ನೇಮಕಾತಿ – ಕ.ಕಲ್ಯಾಣ ಅಭ್ಯರ್ಥಿಗಳ ಪರೀಕ್ಷಾ ಸಮಯದಲ್ಲಿ ಬದಲು: ಕೆಇಎ
