ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್(Manmohan Singh) ನಿಧನವಾಗಿ ಎರಡು ವರ್ಷಗಳ ನಂತರ ಕಲ್ಲಿದ್ದಲು ಗಣಿ ಹಂಚಿಕೆ ಹಗರಣ(Coal Block Allocation Case) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ.
ಸುಪ್ರೀಂ ಕೋರ್ಟ್‌ನ (Supreme Court) ವಿಶೇಷ ಪೀಠವು ಅವರಿಗೆ ನೀಡಲಾಗಿದ್ದ ಸಮನ್ಸ್ ಆದೇಶವನ್ನು ರದ್ದುಗೊಳಿಸಿದೆ ಮತ್ತು ಸಿಬಿಐ (CBI) ಸಲ್ಲಿಸಿದ್ದ ಬಿ-ರಿಪೋರ್ಟ್ (ಕ್ಲೋಸರ್ ರಿಪೋರ್ಟ್) ಅನ್ನು ಅಂಗೀಕರಿಸಿದೆ.
ಡಿಸೆಂಬರ್ 2024 ರಲ್ಲಿ ಸಿಂಗ್ ಅವರ ನಿಧನದ ನಂತರ ಅವರ ಮೇಲ್ಮನವಿಯು ನಿರರ್ಥಕವಾಗಿತ್ತು. ಸಿಬಿಐ ಸಲ್ಲಿಸಿದ ಬಿ ವರದಿಗಳನ್ನು ನ್ಯಾಯಪೀಠವು ಪರಿಶೀಲಿಸಿ ವಿಚಾರಣಾ ನ್ಯಾಯಾಲಯವು ಅವುಗಳನ್ನು ತಿರಸ್ಕರಿಸಲು ಮತ್ತು ಪರಿಗಣನೆಗೆ ತೆಗೆದುಕೊಳ್ಳಲು ಯಾವುದೇ ಕಾರಣವಿಲ್ಲ ಎಂದು ಕಂಡುಕೊಂಡಿದೆ.
ಭ್ರಷ್ಟಾಚಾರದ ಪ್ರಕರಣ ದಾಖಲಿಸಲು ಯಾವುದೇ ಸಮಂಜಸ ಕಾರಣ ಅಥವಾ ಸಾಕ್ಷ್ಯಾಧಾರಗಳು ಇಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯವು ಸಿಂಗ್ ಮೇಲಿದ್ದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸಿ ಅವರಿಗೆ ಸಂಪೂರ್ಣ ಕ್ಲೀನ್ ಚಿಟ್ ನೀಡಿದೆ.
ಮಾರ್ಚ್ 2015 ರಲ್ಲಿ, ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು ಸಿಬಿಐನ ಕ್ಲೋಸರ್ ವರದಿಯನ್ನು ತಿರಸ್ಕರಿಸಿದ್ದರು. ಮನಮೋಹನ್ ಸಿಂಗ್, ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪರಾಖ್, ಹಿಂಡಾಲ್ಕೊ ಇಂಡಸ್ಟ್ರೀಸ್ ಹಾಗೂ ಕಂಪನಿಯ ಅಧಿಕಾರಿಗಳಾದ ಶುಭೇಂದು ಅಮಿತಾಭ್ ಮತ್ತು ಡಿ. ಭಟ್ಟಾಚಾರ್ಯ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ವಿಶ್ವಾಸದ್ರೋಹ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ಅಪರಾಧಗಳ ಆರೋಪದ ಮೇಲೆ ಅವರಿಗೆ ಸಮನ್ಸ್ ನೀಡಲಾಗಿತ್ತು. ಇದನ್ನೂ ಓದಿ: BS-III ವಾಹನಗಳಿಗೆ E20 ಎಫೆಕ್ಟ್- ರಬ್ಬರ್ ಭಾಗ, ಗ್ಯಾಸ್ಕೆಟ್ ಬದಲಾಯಿಸಬೇಕು: ಗಡ್ಕರಿ

ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಬಿರ್ಲಾ, ಪರಾಖ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಇತರರನ್ನು ಹೆಸರಿಸಿತ್ತಾದರೂ ವಿಚಾರಣೆಗೆ ಅರ್ಹವಾದ ಪ್ರಕರಣವಿಲ್ಲ ಎಂದು ಹೇಳಿ ನಂತರ ಕ್ಲೋಸರ್ ವರದಿಗಳನ್ನು ಸಲ್ಲಿಸಿತ್ತು. ಆದರೆ ವಿಚಾರಣಾ ನ್ಯಾಯಾಲಯವು ಈ ವರದಿಗಳನ್ನು ಸ್ವೀಕರಿಸಲು ನಿರಾಕರಿಸಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡುವ ಮೊದಲು ಸಿಂಗ್ ಮತ್ತು ಪಿಎಂಒ ಹಿರಿಯ ಅಧಿಕಾರಿಗಳಾದ ಅಂದಿನ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ. ನಾಯರ್ ಹಾಗೂ ಖಾಸಗಿ ಕಾರ್ಯದರ್ಶಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸುವಂತೆ ತನಿಖಾಸಂಸ್ಥೆಗೆ ಸೂಚಿಸಿತ್ತು.
ಕಲ್ಲಿದ್ದಲು ಬ್ಲಾಕ್‌ಗಳನ್ನು ಖಾಸಗಿ ಸಂಸ್ಥೆಗೆ ಹಂಚಿಕೆ ಮಾಡಿದ್ದು ಸಂಪೂರ್ಣವಾಗಿ ಒಂದು ಕಾನೂನುಬದ್ಧ ಆಡಳಿತಾತ್ಮಕ ನಿರ್ಧಾರವಾಗಿತ್ತು. ಇದರಲ್ಲಿ ಯಾವುದೇ ಕ್ರಿಮಿನಲ್ ಅಕ್ರಮ ಅಥವಾ ವೈಯಕ್ತಿಕ ದುರುದ್ದೇಶವಿರಲಿಲ್ಲ. ಆದರೆ ಸಿಬಿಐ ನ್ಯಾಯಾಲಯವು ಅದನ್ನು ಪರಿಗಣಿಸಿ ತಪ್ಪು ಮಾಡಿದೆ ಎಂದು ಸಿಂಗ್ ಅವರು ಈ ಸಮನ್ಸ್ ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಏಪ್ರಿಲ್ 2015 ರಲ್ಲಿ ಈ ಸಮನ್ಸ್‌ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಅವರು ವಿಚಾರಣೆ ಎದುರಿಸದಂತೆ ತಡೆದಿತ್ತು. ಈ ಮೇಲ್ಮನವಿಯು ಒಂದು ದಶಕಕ್ಕೂ ಹೆಚ್ಚು ಕಾಲ ವಿಚಾರಣೆಗೆ ಬಾಕಿಯಿತ್ತು. ಮನಮೋಹನ್ ಸಿಂಗ್ ಅವರು ಡಿಸೆಂಬರ್ 26, 2024 ರಂದು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ| ಅಂತಿಮ ಹಂತದಲ್ಲಿ ತನಿಖೆ- ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನಲ್ಲಿ ಯಾವುದೇ ಲೋಪವಿಲ್ಲ: ಸರ್ಕಾರ
2004 ರಿಂದ 2009 ರ ಅವಧಿಯಲ್ಲಿ ಡಾ. ಸಿಂಗ್ ಅವರು ಯುಪಿಎ ಸರ್ಕಾರದಲ್ಲಿ ಪ್ರಧಾನಿ ಹುದ್ದೆಯ ಜೊತೆಗೆ ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನೂ ಹೊಂದಿದ್ದರು. ಈ ವೇಳೆ ನಿಯಮಗಳನ್ನು ಮೀರಿ ಖಾಸಗಿ ಸಂಸ್ಥೆಗಳಿಗೆ ಕಾನೂನುಬಾಹಿರವಾಗಿ ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು.
ಅದರಲ್ಲೂ ಮುಖ್ಯವಾಗಿ 2005ರಲ್ಲಿ ಒಡಿಶಾದ ತಲಬಿರಾ-II (Talabira-II) ಕಲ್ಲಿದ್ದಲು ಗಣಿಯನ್ನು ಸ್ಕ್ರೀನಿಂಗ್ ಕಮಿಟಿಯ ಶಿಫಾರಸುಗಳನ್ನು ಬದಿಗಿಟ್ಟು, ಆದ್ಯತೆಯ ಮೇರೆಗೆ ಕುಮಾರ್ ಮಂಗಲಂ ಬಿರ್ಲಾ ಒಡೆತನದ ಹಿಂಡಾಲ್ಕೊ (Hindalco) ಕಂಪನಿಗೆ ಹಂಚಿಕೆ ಮಾಡಲು ಅನುಮೋದನೆ ನೀಡಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು.
ಹರಾಜು ಪ್ರಕ್ರಿಯೆ ನಡೆಸದೇ ಯಾವುದೇ ಪಾರದರ್ಶಕತೆ ಇಲ್ಲದೆ ಗಣಿಗಳನ್ನು ಖಾಸಗಿಯವರಿಗೆ ಹಂಚಿಕೆ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ ಎಂದು ಮಹಾಲೇಖಪಾಲರ (CAG) ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
