Thursday, 21st November 2019

ಆರ್‌ಬಿಐ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ರಾಜೀನಾಮೆ

ನವದೆಹಲಿ: ಕೇಂದ್ರದಲ್ಲಿರುವ ಮೋದಿ ಸರ್ಕಾರಕ್ಕೆ ಶಾಕ್ ಎನ್ನುವಂತೆ ದಿಢೀರ್ ಬೆಳವಣಿಗೆಯೊಂದರಲ್ಲಿ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ನನ್ನ ವೈಯಕ್ತಿಕ ಕಾರಣಗಳಿಂದಾಗಿ ಈ ಹುದ್ದೆಯಿಂದ ಈ ಕೂಡಲೇ ಕೆಳಗೆ ಇಳಿಯುತ್ತಿದ್ದೇನೆ. ಆರ್‌ಬಿಐ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನನ್ನ ಜೊತೆ ಸಹಕರಿಸಿದ ಎಲ್ಲ ಉದ್ಯೋಗಿಗಳಿಗೆ ಕೃತಜ್ಞತೆಗಳು. ಎಲ್ಲರಿಗೂ ಒಳ್ಳೆದಾಗಲಿ ಎಂದು ಉರ್ಜಿತ್ ಪಟೇಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ಆರೋಗ್ಯದ ಸಮಸ್ಯೆಯಿಂದ ಈ ವರ್ಷದ ನವೆಂಬರ್ ಮಧ್ಯ ಭಾಗದಲ್ಲಿ ಉರ್ಜಿತ್ ಪಟೇಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಆದರೆ ನಂತರ ನಡೆದ ಸಭೆಯಿಂದಾಗಿ ಉರ್ಜಿತ್ ಪಟೇಲ್ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿತ್ತು. ಆದರೆ ಸೋಮವಾರ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಾರೆ.

ಹಿಂದಿನ ಗವರ್ನರ್ ರಘುರಾಂ ರಾಜನ್ ಅವರ ಅಧಿಕಾರಾವಧಿ 2016ರ ಸೆಪ್ಟೆಂಬರ್ 4ರಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಂದೇ ಉರ್ಜಿತ್ ಪಟೇಲ್ ಅವರು ನೂತನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. 24ನೇ ಗವರ್ನರ್ ಆಗಿದ್ದ ಪಟೇಲ್ ಅವರು ಅಮೆರಿಕದ ಯಾಲೆ ವಿವಿಯಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ ಬಿಎ ಪದವಿ ಓದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *