– ತೈಲ ಸಾಮ್ರಾಜ್ಯದಲ್ಲಿ ಭಾರೀ ಬಿರುಕು
– ಸೌದಿ ಜೊತೆ ಸಂಘರ್ಷ, ಒಪೆಕ್ ತೊರೆದ ಯುಎಇ
ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಒಪೆಕ್ (OPEC) ಮತ್ತು ಒಪೆಕ್ ಪ್ಲಸ್ (OPEC+) ಒಕ್ಕೂಟದಿಂದ ಹೊರಬರುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಈ ನಿರ್ಧಾರವು ಮೇ 1 ರಿಂದ ಜಾರಿಗೆ ಬರಲಿದ್ದು, ಸುಮಾರು 60 ವರ್ಷಗಳ ಒಪೆಕ್ ಸದಸ್ಯತ್ವವನ್ನು ಯುಎಇ ಕೊನೆಗೊಳಿಸಲಿದೆ. ಇದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿದೆ.
ಸೌದಿ ಅರೇಬಿಯಾ(Saudi Arabia) ಜೊತೆಗಿನ ವೈಯಕ್ತಿಕ ಹಿತಾಸಕ್ತಿಗಳ ಸಂಘರ್ಷವೇ ಒಪೆಕ್‌ನಿಂದ ಯುಎಇ ಹೊರಬರಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸೌದಿ ಅರೇಬಿಯಾದ ‘ಬೆಲೆ ನಿಯಂತ್ರಣ’ ನೀತಿಯ ವಿರುದ್ಧ ಯುಎಇ ತನ್ನ ‘ಉತ್ಪಾದನಾ ವಿಸ್ತರಣೆ’ ಮತ್ತು ‘ಸ್ವತಂತ್ರ ಆರ್ಥಿಕ ಹಾದಿ’ಯನ್ನು ಈಗ ಆರಿಸಿಕೊಂಡಿದೆ.
ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಆರ್ಥಿಕತೆಯನ್ನು ವೈವಿಧ್ಯಮಯಗೊಳಿಸಲು ಯುಎಇ ಬಯಸುತ್ತಿದೆ. ಒಪೆಕ್ ನಿರ್ಬಂಧಗಳಿಂದ ಮುಕ್ತವಾಗುವುದರಿಂದ ವಿಶ್ವದ ಇಂಧನ ಬೇಡಿಕೆಗೆ ತಕ್ಕಂತೆ ಸ್ಪಂದಿಸಲು ತನಗೆ ಹೆಚ್ಚಿನ ಅಧಿಕಾರ ಸಿಗುತ್ತದೆ ಎಂದು ಯುಎಇ ಇಂಧನ ಸಚಿವ ಸುಹೈಲ್ ಅಲ್ ಮಜ್ರೌಯಿ ತಿಳಿಸಿದ್ದಾರೆ.
ಹೊರ ಬಂದಿದ್ದು ಯಾಕೆ?
ಒಪೆಕ್ ಸದಸ್ಯ ರಾಷ್ಟ್ರಗಳು ತೈಲ ಬೆಲೆಯನ್ನು ನಿಯಂತ್ರಿಸಲು ಉತ್ಪಾದನೆಯ ಮೇಲೆ ಮಿತಿ ಹೇರುತ್ತವೆ. ಆದರೆ ಯುಎಇ ತನ್ನ ತೈಲ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ ಸುಮಾರು 5 ಮಿಲಿಯನ್ ಬ್ಯಾರೆಲ್‌ಗಳಿಗೆ ಹೆಚ್ಚಿಸಲು ಸುಮಾರು 150 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಒಪೆಕ್ ವಿಧಿಸಿರುವ ಉತ್ಪಾದನಾ ಮಿತಿಗಳು (Quotas) ಈ ಗುರಿಯನ್ನು ತಲುಪಲು ಅಡ್ಡಿಯಾಗಿದ್ದವು. ಆದ್ದರಿಂದ, ಸ್ವತಂತ್ರವಾಗಿ ತೈಲ ಉತ್ಪಾದಿಸಲು ಯುಎಇ ಈ ನಿರ್ಧಾರ ಕೈಗೊಂಡಿದೆ.

ಸೌದಿ ಅರೇಬಿಯಾ ಒಪೆಕ್‌ನಲ್ಲಿ ಅತಿ ಹೆಚ್ಚು ಪ್ರಭಾವ ಹೊಂದಿದ್ದು, ತೈಲ ಬೆಲೆ ಹೆಚ್ಚಿಸಲು ಉತ್ಪಾದನೆಯನ್ನು ಕಡಿತಗೊಳಿಸುವಂತೆ ಒತ್ತಾಯಿಸುತ್ತಿತ್ತು. ಆದರೆ ಯುಎಇ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಬಿಲಿಯನ್ ಗಟ್ಟಲೆ ಡಾಲರ್ ಹೂಡಿಕೆ ಮಾಡಿದೆ. ಸೌದಿಯ ನೇತೃತ್ವದ ಈ ‘ಉತ್ಪಾದನಾ ಕಡಿತ’ ನೀತಿಯಿಂದಾಗಿ ತನ್ನ ಹೂಡಿಕೆಗೆ ತಕ್ಕ ಲಾಭ ಸಿಗುತ್ತಿಲ್ಲ ಎಂಬುದು ಯುಎಇ ಅಸಮಾಧಾನಕ್ಕೆ ಕಾರಣವಾಗಿತ್ತು.
ಅಮೆರಿಕ-ಇಸ್ರೇಲ್ (USA-Isreal) ಮತ್ತು ಇರಾನ್ (Iran War) ನಡುವಿನ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿ ಮುಚ್ಚಿರುವುದು ಯುಎಇ ತೈಲ ರಫ್ತಿನ ಮೇಲೆ ತೀವ್ರ ಪರಿಣಾಮ ಬೀರಿದೆ. ತನ್ನ ಮೇಲೆ ನಡೆದ ದಾಳಿಗಳ ಸಂದರ್ಭದಲ್ಲಿ ಒಪೆಕ್ ಸದಸ್ಯ ರಾಷ್ಟ್ರಗಳು ವಿಶೇಷವಾಗಿ ಸೌದಿ ಅರೇಬಿಯಾ ತನಗೆ ಬೇಕಾದ ರಕ್ಷಣೆ ಅಥವಾ ಬೆಂಬಲ ನೀಡದ್ದಕ್ಕೆ ಯುಎಇ ಅಸಮಾಧಾನಗೊಂಡಿತ್ತು.
ಇತ್ತೀಚಿನ ವರ್ಷಗಳಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ನಡುವೆ ಪ್ರಾದೇಶಿಕ ಆರ್ಥಿಕ ಕೇಂದ್ರವಾಗಲು ತೀವ್ರ ಪೈಪೋಟಿ ಏರ್ಪಟ್ಟಿದೆ. ಸೌದಿಯ ‘ವಿಷನ್ 2030’ ಯೋಜನೆಯು ಯುಎಇ ಹೊಂದಿರುವ ವ್ಯಾಪಾರ ಮತ್ತು ಪ್ರವಾಸೋದ್ಯಮದ ಪ್ರಾಬಲ್ಯಕ್ಕೆ ಸವಾಲು ಹಾಕುತ್ತಿದೆ. ಈ ಸ್ಪರ್ಧೆಯು ತೈಲ ನೀತಿಯ ಮೇಲೂ ಪ್ರಭಾವ ಬೀರಿದೆ.
ಒಪೆಕ್ ನಿರ್ಧಾರಗಳು ಹೆಚ್ಚಾಗಿ ಸೌದಿ ಅರೇಬಿಯಾದ ಇಚ್ಛೆಯಂತೆ ನಡೆಯುತ್ತಿವೆ ಎಂಬ ಭಾವನೆ ಯುಎಇಗೆ ಇತ್ತು. ತನ್ನ ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಗಳಿಗಿಂತ ಸೌದಿಯ ಕಾರ್ಯತಂತ್ರಗಳಿಗೆ ಒಗ್ಗಿಕೊಳ್ಳುವುದು ಯುಎಇಗೆ ಹೊರೆಯಾಗಿ ಪರಿಣಮಿಸಿತ್ತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕರೆಯ ಮೇರೆಗೆ ತೈಲ ಬೆಲೆ ಕಡಿಮೆ ಮಾಡಲು ಮತ್ತು ಇರಾನ್ ವಿರುದ್ಧದ ಆರ್ಥಿಕ ಒತ್ತಡಕ್ಕೆ ಬೆಂಬಲ ನೀಡಲು ಯುಎಇ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಇದು ಸೌದಿಯ ಪ್ರಸ್ತುತ ನಿಲುವಿಗಿಂತ ಭಿನ್ನವಾಗಿದೆ.

ಏನಿದು ಒಪೆಕ್?
ಒಪೆಕ್ (OPEC – Organization of the Petroleum Exporting Countries) ಎಂಬುದು ವಿಶ್ವದ ಪ್ರಮುಖ ತೈಲ ರಫ್ತು ಮಾಡುವ ದೇಶಗಳ ಒಂದು ಅಂತರರಾಷ್ಟ್ರೀಯ ಒಕ್ಕೂಟವಾಗಿದೆ. 1960ರಲ್ಲಿ ಇರಾಕ್‌ನ ಬಾಗ್ದಾದ್‌ನಲ್ಲಿ ಸ್ಥಾಪನೆಯಾಗಿದ್ದು ಆಸ್ಟ್ರಿಯಾದ ವಿಯೆನ್ನಾ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.
ಪ್ರಸ್ತುತ ಒಪೆಕ್‌ನಲ್ಲಿ 12 ಸದಸ್ಯ ದೇಶಗಳಿವೆ. ಸೌದಿ ಅರೇಬಿಯಾ, ಇರಾನ್, ಇರಾಕ್, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಅಲ್ಜೀರಿಯಾ, ಲಿಬಿಯಾ, ನೈಜೀರಿಯಾ, ಗ್ಯಾಬೊನ್, ಈಕ್ವಟೋರಿಯಲ್ ಗಿನಿಯಾ, ಕಾಂಗೋ ಗಣರಾಜ್ಯ, ವೆನೆಜುವೆಲಾ ಸದಸ್ಯತ್ವವನ್ನು ಪಡೆದುಕೊಂಡಿವೆ.
ವಿಶ್ವದ ಒಟ್ಟು ತೈಲ ನಿಧಿಯ ಸುಮಾರು 80% ರಷ್ಟು ಈ ದೇಶಗಳ ಬಳಿಯೇ ಇರುವುದರಿಂದ, ಇವರು ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದರೆ ಬೆಲೆ ಏರುತ್ತದೆ ಮತ್ತು ಉತ್ಪಾದನೆ ಹೆಚ್ಚಿಸಿದರೆ ಬೆಲೆ ಕಡಿಮೆಯಾಗುತ್ತದೆ. ಹೀಗೆ ಇಡೀ ವಿಶ್ವದ ತೈಲ ಮಾರುಕಟ್ಟೆಯನ್ನು ಈ ಒಕ್ಕೂಟ ನಿಯಂತ್ರಿಸುತ್ತದೆ.
ಏನಿದು ಒಪೆಕ್ ಪ್ಲಸ್?
12 ಒಪೆಕ್ ದೇಶಗಳು ಮತ್ತು 10 ಸದಸ್ಯರಲ್ಲದ ದೇಶಗಳ ಮೈತ್ರಿ. ರಷ್ಯಾ ಪ್ರಮುಖ ಪಾಲುದಾರ ದೇಶವಾಗಿದ್ದು ಇದರ ಜೊತೆ ಅಜೆರ್ಬೈಜಾನ್, ಕಝಾಕಿಸ್ತಾನ್, ಬಹ್ರೇನ್, ಬ್ರುನೈ, ಮಲೇಷಿಯಾ, ಒಮಾನ್, ಸುಡಾನ್, ದಕ್ಷಿಣ ಸುಡಾನ್, ಮೆಕ್ಸಿಕೋ, ಬ್ರೆಜಿಲ್ ಈ ಒಕ್ಕೂಟದಲ್ಲಿದೆ.
ಯಾವ ದೇಶಗಳು ಹೊರಬಂದಿವೆ?
ಯುಎಇ ಮಾತ್ರವಲ್ಲ ಈ ಹಿಂದೆ ಕತಾರ್ (2019), ಈಕ್ವೆಡಾರ್ (2020) ಮತ್ತು ಇಂಡೋನೇಷ್ಯಾ (2016) ಈ ಹಿಂದೆಯೇ ಒಕ್ಕೂಟದಿಂದ ಹೊರಬಂದಿವೆ. ಜನವರಿ 2024 ರಲ್ಲಿ ಅಂಗೋಲಾ ಒಪೆಕ್‌ನಿಂದ ಹೊರಬಂದಿತ್ತು.

