– 1 ಮಗು ಇದ್ದರೂ ವಿಷಯ ಮುಚ್ಚಿಟ್ಟಿದ್ದ ಪ್ರಿಯಕರ
– ಲಿವ್ ಇನ್‌ನಲ್ಲಿದ್ದ ಜೋಡಿ ಮಧ್ಯೆ ನಡೆದ್ದೇನು?
ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿನಗರದಲ್ಲಿ ಪ್ರಿಯತಮೆ (Lover) ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಒಂದು ವರ್ಷ ಹಿಂದೆಯೇ ಇವರಿಬ್ಬರು ಗುಟ್ಟಾಗಿ ಮದ್ವೆಯಾಗಿದ್ದರು ಅಂತ ಪೊಲೀಸ್ (Byadarahalli Police) ಮೂಲಗಳು ತಿಳಿಸಿವೆ.
ಭವಾನಿ ಲವ್ಸ್ ಚಂದನ್ ಪ್ರೇಮ್ ಕಹಾನಿ ಹುಟ್ಟಿದ್ದೆಲ್ಲಿ?
ಮಾಗಡಿ ತಮೀಪದ ಗೆಜ್ಜರಗುಪ್ಪೆ ಗ್ರಾಮದ ನಿವಾಸಿ ಭವಾನಿ, ಕೊಲೆಯಾಗಿರೋ ಯುವತಿ. ವಿಧ್ಯಾಭ್ಯಾಸ ಮುಗಿಸಿ ತಂದೆತಾಯಿಗೆ ಸಹಾಯ ಮಾಡ್ಬೇಕು ಅಂತ ದುಡಿಯೋದಕ್ಕೆ ಬೆಂಗಳೂರಿಗೆ (Bengaluru) ಬಂದಿದ್ದಳು, ಮೊಬೈಲ್ ಶೋ ರೂಂ ಒಂದರಲ್ಲಿ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದಳು. ಬರ್ತಿದ್ದ ಸಂಬಳದಲ್ಲಿ ಒಂದಿಷ್ಟು ಹಣವನ್ನ ಊರಿಗೆ ಕಳಿಸ್ತಿದ್ಲು. ಇದರ ಮಧ್ಯೆ ಚಂದ್ರಶೇಖರ್ ಅಲಿಯಾಸ್ ಚಂದನ್ ಅನ್ನೋನ ಪರಿಚಯವಾಗಿ, ಅದು ಪ್ರೀತಿಗೆ ತೀರುಗಿದೆ.

ಕಳೆದ 1 ವರ್ಷದ ಹಿಂದೆ ಇಬ್ಬರು ಯಾರಿಗೂ ಗೊತ್ತಾಗದ ಹಾಗೇ ವಿವಾಹವೂ ಆಗಿ ಸಹ ಜೀವನ ಸಾಗಿಸ್ತಿದ್ರು. ಇದರ ನಡುವೆ ತಾನು ಕೈಡಿದಿರೋ ಗಂಡನಿಗೆ ಈ ಮೊದಲೇ ಮದುವೆಯಾಗಿ 6 ವರ್ಷದ 1 ಮಗು ಸಹ ಇದೆ ಅನ್ನೋ ಆಘಾತಕಾರಿ ಸಂಗತಿ ಭವಾನಿ ಕಿವಿಗೆ ಬಿದ್ದಿತ್ತು. ಯಾವಾಗ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಕೈಹಿಡಿದವನಿಗೆ ಮತ್ತೊಂದು ಮದ್ವೆಯಾಗಿದೆ ಅನ್ನೋದು ಗೊತ್ತಾಯ್ತೋ ನಾನು ಎಲ್ಲರಿಗೂ ಗೊತ್ತಾಗೋ ರೀತಿಯಲ್ಲಿ ಮತ್ತೊಬ್ಬನ ಮದ್ವೆಯಾಗ್ತೇನೆ ಅನ್ನೋ ನಿರ್ಧಾರಕ್ಕೆ ಭವಾನಿ ಬಂದಿದ್ದಳು.
ಅದರಂತೆ ಆಕೆಯ ಫ್ಯಾಮಿಲಿಯವ್ರಿಗೂ ವಿಷಯ ಹೇಳಿದ್ದು, ವರನೊಬ್ಬನ ನೋಡಿದ್ದ ಭವಾನಿ ಪೋಷಕರು ಮುಂದಿನವಾರ ಎಂಗೇಜ್ಮೆಂಟ್ ಮಾಡೋದಕ್ಕೆ ಸಿದ್ದತೆ ನಡೆಸ್ತಿದ್ರು. ಈ ವಿಚಾರ ತಿಳಿದ ಚಂದ್ರಶೇಖರ್ ತಾನೇ ಮನೆ ಮಾಡಿಕೊಟ್ಟು ಭವಾನಿಯನ್ನ ಇರಿಸಿದ್ದ ಬ್ಯಾಡರಹಳ್ಳಿಯ ತಿಗಳರಪಾಳ್ಯ ತುಳಿಸಿನಗರದಲ್ಲಿರೋ ಮನೆಗೆ ಬಂದು ಭವಾನಿ ಜೊತೆ ಜಗಳ ಮಾಡಿದ್ದಾನೆ. ಬಳಿಕ ನೀನಿಲ್ಲದೇ ನಾನ್ ಬದುಕೋದಿಲ್ಲ. ಬದುಕಿದ್ರೆ ನಾವಿಬ್ಬರು ಒಟ್ಟಿಗೆ ಬದುಕೆೋಣ ಇಲ್ಲ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದಿದ್ದಾನೆ. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಭವಾನಿ ನಿರಾಕರಿಸಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ವೇಳೆ ಚಂದ್ರಶೇಖರ್ ಭವಾನಿಯನ್ನ ಮದುವೆಯಾಗಿರೋ ಫೋಟೋವನ್ನ ಇನ್‌ಸ್ಟಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಫೋಟೋ ಭವಾನಿ ಕುಟುಂಬಸ್ಥರು ನೋಡಿ ಫೋನ್ ಮಾಡಿದ್ದಾರೆ. ವಿಚಾರ ಎಲ್ಲರಿಗೂ ಗೊತ್ತಾಯ್ತು ಅಂತಾ ಭವಾನಿ, ಚಂದ್ರಶೇಖರ ಜೊತೆಗೆ ಗಲಾಟೆ ಮಾಡಿದ್ದಾಳೆ. ಈ ಜಗಳದಲ್ಲಿ ಚಂದ್ರಶೇಖರ್, ಭವಾನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದು ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇತ್ತ ಭವಾನಿ ಇನ್‌ಸ್ಟಾ ಖಾತೆಯಲ್ಲಿ ಮದುವೆ ಫೋಟೋ ಅಪ್ಲೋಡ್ ಆಗ್ತಿದ್ದಂತೆ ಭವಾನಿ ಫೋಷಕರು ಆಕೆಗೆ ಪದೇ ಪದೇ ಪೋನ್ ಮಾಡಿದ್ರು ರಿಸೀವ್ ಮಾಡದ ಹಿನ್ನೆಲೆ ಮನೆ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಇತ್ತ ಮನೆ ಬಳಿ ಬಂದ ಮಾಲೀಕರು ಬಂದು ನೋಡಿದಾಗ ಚಂದ್ರಶೇಖರ್ ನರಳಾಡ್ತಿರೋ ಸದ್ದು ಕೇಳಿಸಿದೆ. ಕೂಡ್ಲೇ ಪೊಲೀಸರಿಗೆ ಮಾಹಿತಿ ತಿಳಿಸಿ, ಬಾಗಿಲು ಒಡೆದು ಒಳಹೋಗಿ ನೋಡಿದಾಗ ಭವಾನಿ ಕೊಲೆಯಾಗಿರೋದು ಬೆಳಕಿಗೆ ಬಂದಿದೆ. ವಿಷ ಸೇವಿಸಿ ನರಳಾಡುತ್ತಿದ್ದ ಚಂದ್ರಶೇಖರ್ ನನ್ನ ಆಸ್ಪತ್ರೆಗೆ ದಾಖಲಿಸಿರೋ ಬ್ಯಾಡರಹಳ್ಳಿ ಪೊಲೀಸರು, ಮೃತ ಭವಾನಿ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
