ಲಂಡನ್: ಭಾರತೀಯ ಮೂಲದ 26 ವರ್ಷದ ಯುವಕನೊಬ್ಬನನ್ನು ಲಂಡನ್(London)ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪಶ್ಚಿಮ ಲಂಡನ್‌ನ ಸೌತ್ಹಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ಗುರುಭೇಜ್ ಸಿಂಗ್ ಎಂದು ಗುರುತಿಸಲಾಗಿದೆ.
ಗುರುಭೇಜ್ ಸಿಂಗ್ ಅವರನ್ನು ನಾರ್ತ್ ರೋಡ್ ಮತ್ತು ಡಾರ್ಮರ್ಸ್ ವೆಲ್ಸ್ ಲೇನ್ ಜಂಕ್ಷನ್ ಸಮೀಪದ ಅಂಗಡಿಯೊಂದರ ಹೊರಭಾಗದಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಘಟನೆ ವೇಳೆ ಮತ್ತೋರ್ವ ವ್ಯಕ್ತಿಯೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬುಧವಾರ ರಾತ್ರಿ ಸುಮಾರು 12:30ರ ವೇಳೆಗೆ ದಾಳಿ ನಡೆದಿರುವ ಬಗ್ಗೆ ಲಂಡನ್ ಆಂಬ್ಯುಲೆನ್ಸ್ ಸೇವೆಯಿಂದ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ಇಬ್ಬರು ಗಾಯಾಳುಗಳನ್ನು ಪತ್ತೆಹಚ್ಚಿದ್ದರು. ಆದರೆ ಗುರುಭೇಜ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇದನ್ನೂ ಓದಿ: ಅಖಿಲೇಶ್ ಯಾದವ್ ಪುತ್ರಿಯ ವಿರುದ್ಧ ಆಶ್ಲೀಲ ಕಾಮೆಂಟ್ – ಎಫ್‌ಐಆರ್ ದಾಖಲಿಸಲು ಯೋಗಿ ಸೂಚನೆ
ಪ್ರಕರಣ ಸಂಬಂಧ ಪೊಲೀಸರು ಆರಂಭದಲ್ಲಿ 20ರಿಂದ 30 ವರ್ಷ ವಯಸ್ಸಿನ ಏಳು ಮಂದಿಯನ್ನು ಕೊಲೆ ಶಂಕೆಯಲ್ಲಿ ಬಂಧಿಸಿದ್ದರು. ಬಳಿಕ ತನಿಖೆ ವೇಳೆ ಆರು ಮಂದಿಯನ್ನು ಯಾವುದೇ ಕ್ರಮವಿಲ್ಲದೆ ಬಿಡುಗಡೆ ಮಾಡಲಾಗಿದೆ. ಮತ್ತೋರ್ವ ಆರೋಪಿಗೆ ಜಾಮೀನು ನೀಡಲಾಗಿದ್ದು, ತನಿಖೆ ಮುಂದುವರಿದಿದೆ. ಘಟನೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಇದನ್ನೂ ಓದಿ: ವಾಹನಗಳಲ್ಲಿ 100% ಎಥೆನಾಲ್ ಬಳಕೆ ಗಡ್ಕರಿ ಸಹಿ – ಶೀಘ್ರವೇ ಟೊಯೋಟಾ, ಹ್ಯುಂಡೈ, ಎಂಜಿ ಕಾರುಗಳು ಬಿಡುಗಡೆ
