ಉಡುಪಿ: ಆಹಾರ ಅರಸುತ್ತಾ ಮನೆಯ ಟೆರೇಸ್ ಹತ್ತಿದ್ದ ಕೆರೆ ಹಾವೊಂದು ಗೇಟಿನ ಮೇಲೆ ಬಿದ್ದು ಹೊಟ್ಟೆ ಸೀಳಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ನಗರದ ಮಣಿಪಾಲದ ರಾಘವೇಂದ್ರ ನಾಯ್ಕ್ ಅವರ ಮನೆಗೆ ಇಲಿಯ ಬೆನ್ನತ್ತಿದ ಕೆರೆ ಹಾವು ಬಂದಿತ್ತು. ಇಲಿಯು ಮನೆಯ ಟೆರೇಸ್ ಏರಿ ಹಾರಿ ಹೋಗಿದೆ. ಇಲಿ ಬೆನ್ನಟ್ಟಿದ್ದ ಹಾವು ರಪ್ಪಂತ ಕೆಳಗೆ ಬಿದ್ದಿದೆ. ಗೇಟ್ ಮೇಲೆ ಬಿದ್ದ ಪರಿಣಾಮ ಹಾವಿನ ಹೊಟ್ಟೆ ಎರಡು ಕಡೆ ಸೀಳಿದೆ. ಚೂಪಾದ ರಾಡ್ ಹಾವಿನ ಹೊಟ್ಟೆಗೆ ಹೊಕ್ಕಿದೆ. ಹಾವು ಮೇಲೆ ಎದ್ದು ಬರದಂತಾಗಿದೆ.
Advertisement
Advertisement
ಗಂಭೀರವಾಗಿ ಗಾಯಗೊಂಡಿದ್ದ ಹಸಿದ ಗಂಡು ಕೆರೆ ಹಾವು ವಿಲ ವಿಲ ಒದ್ದಾಡಿತು. ಹಾವಿನ ನೋವು ಕಂಡ ಮನೆಯವರ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆ ಮಾಡಿದ್ದಾರೆ. ಗುರುರಾಜ್ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಸ್ಟಿಕ್ ಹಿಡಿದು ಹಾವನ್ನು ರಕ್ಷಿಸುವ ಪ್ರಯತ್ನ ಶುರು ಮಾಡಿದರು. ನೋವಿನಿಂದ ಅರೆ ಜೀವವಾಗಿದ್ದ ಹಾವು ಗುರುರಾಜ್ ಅವರಿಗೆ ನಾಲ್ಕೈದು ಬಾರಿ ಕಚ್ಚಿದೆ. ಕೆರೆ ಹಾವಿನಲ್ಲಿ ವಿಷ ಇಲ್ಲದೆ ಇರುವುದರಿಂದ ಗುರುರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವನ್ನು ಮನೆಗೆ ತಂದಿರುವ ಗುರುರಾಜ್ ಮದ್ದು ಹಚ್ಚಿ ಆರೈಕೆ ಮಾಡುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್, ಬೇರೆ ವಿಷಪೂರಿತ ಹಾವಾಗಿದ್ದರೆ ರಕ್ಷಣೆಗೆ ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯವಿತ್ತು. ಕೆರೆ ಹಾವಾಗಿದ್ದರಿಂದ ನೇರವಾಗಿ ಕೈಯಿಂದ ಹಿಡಿದೆ. ಚಿಕಿತ್ಸೆ ನಂತರ ಬಿಟ್ಟು ಬಿಡುತ್ತೇನೆ ಎಂದು ಹೇಳಿದರು.
Advertisement
ಕೆರೆ ಹಾವೆಂಬ ತಾತ್ಸಾರ ತೋರದೆ, ಅದರ ರಕ್ಷಣೆಗೆ ಕಾಳಜಿ ತೋರಿದ ರಾಘವೇಂದ್ರ ನಾಯ್ಕ್ ಅವರ ಮನೆಮಂದಿಯ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.