ಬೆಂಗಳೂರು: ನೂತನ ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು ಮಾಜಿ ಸಿಎಂ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಹಾಗೂ ವಿರಪ್ಪ ಮೊಯ್ಲಿಯವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾಜಿ ಸಿಎಂಗಳ ಜೊತೆ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಿಎಂ ಡಿಕೆಶಿ ಭೇಟಿಯ ಬಳಿಕ ಮಾಜಿ ಸಿಎಂ ಸದಾನಂದ ಗೌಡ ಅವರು ಮಾತನಾಡಿ, ನಾನು ನೇರವಾಗಿ ಮಾತನಾಡುವ ವ್ಯಕ್ತಿ. ಒಬ್ಬ ಸಿಎಂ ಆಗಿದ್ದವರು ಹಿಂದಿನ ಸಿಎಂ ಭೇಟಿ ಮಾಡೋದು ಹೊಸ ಸಂಪ್ರದಾಯ. ಇದು ಒಳ್ಳೆಯ ಸಂಪ್ರದಾಯ, ಇದರಿಂದ ದ್ವೇಷ ರಾಜಕೀಯ ಕಮ್ಮಿ ಆಗುತ್ತದೆ. ಹೀಗಂತ ನಾನು ಡಿ.ಕೆ ಶಿವಕುಮಾರ್‌ಗೆ ಪರೋಕ್ಷ ಬೆಂಬಲ ಕೊಟ್ಟಿದ್ದೇನೆ ಅಂತಲ್ಲ ಎಂದರು.\

ಮನೆಗೆ ಬಂದವರಿಗೆ ಗೌರವದಿಂದ ಬರ ಮಾಡಿಕೊಂಡಿದ್ದೇನೆ. ಅವರ ಜೊತೆ ಸುಮಾರು 30 ನಿಮಿಷ ಮಾತನಾಡಿ, ಅವರಿಗೆ ಕೆಲವು ಸಲಹೆಯನ್ನು ನೀಡಿದ್ದೇನೆ. ಜನರ ಮನೆಗೆ ಸರ್ಕಾರಿ ಸೇವೆ ತಲುಪಿಸಲು ತೊಂದರೆ ಆಗಬಾರದು. ಗುಂಡಿ ಮುಚ್ಚುವ ಕೆಲಸ ಶೀಘ್ರ ಮಾಡಬೇಕು. ಮಳೆಗಾಲ ಬರ್ತಿದೆ ಕಾಮಗಾರಿ ಬೇಗ ಮುಗಿಸಿ ಎಂದು ತಿಳಿಸಿದ್ದೇನೆ.

ಕಂದಾಯ ಇಲಾಖೆ ಟೆಕ್ನಿಕಲ್ ತೊಂದರೆ ಆಗ್ತಿದೆ. ಇದರ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದ್ದೇನೆ. ಅವರು ಜನರ ಪರವಾಗಿ ಕೆಲಸ ಮಾಡುವಂತಾಗಲಿ ಎಂದು ಹಾರೈಸುತ್ತೇನೆ. ನನ್ನ ಕಾಲದಲ್ಲಿ ಜಾರಿಯಾಗಿದ್ದ ಸಕಾಲ ಮುಂದುವರೆಸಿದರೆ ಜನರಿಗೆ ಸಮಯಕ್ಕೆ ಸರಿಯಾಗಿ ಕೆಲಸಗಳು ಆಗುತ್ತವೆ ಅದನ್ನ ಮುಂದುವರೆಸಿ ಎಂದು ಹೇಳಿದ್ದೆನೆ ಎಂದು ಮಾಹಿತಿ ನೀಡಿದರು.
ಮಾಜಿ ಮುಖ್ಯಮಂತ್ರಿಗಳಾದ ವಿರಪ್ಪ ಮೊಯ್ಲಿ ಹಾಗೂ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ಕರ್ನಾಟಕದ ಅಭಿವೃದ್ಧಿ ಬಗ್ಗೆ ಸಮಾಲೋಚಿಸಿದರು. ಇನ್ನೂ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಾಜಿ ಪಿಎಂ ದೇವೇಗೌಡ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಹ ಡಿಕೆಶಿ ಭೇಟಿಯಾಗಿದ್ದರು.
