– ಸೆಕ್ಸ್ ಉದ್ಯಮದಿಂದ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ಇದೆ: ಅಮರಾಂತಾ
– ಲೈಂಗಿಕ ಕಾರ್ಯಕರ್ತರ ಹಕ್ಕುಗಳಿಗಾಗಿ ಹೋರಾಡುತ್ತೇನೆಂದು ಭರವಸೆ
ಬೊಗೋಟಾ: ಮಾಜಿ ನೀಲಿ ತಾರೆ ಡೇಸಿ ಅಲೆಹಾಂದ್ರಾ ಓಮಾನಾ ಓರ್ಟಿಸ್ (ಅಮರಾಂತಾ ಹ್ಯಾಂಕ್ – Amaranta Hank) ಅವರು 2026–2030ರ ಅವಧಿಗೆ ಕೊಲಂಬಿಯಾದ ಸೆನೆಟ್ (ಸಂಸತ್ತಿನ ಮೇಲ್ಮನೆ) ಸದಸ್ಯೆಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
ಲೈಂಗಿಕ ಕಾರ್ಯಕರ್ತರ (Sex Workers) ಸಾಮಾಜಿಕ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಜೊತೆಗೆ ಮಾನಸಿಕ ಆರೋಗ್ಯ ಹಾಗೂ ಲೈಂಗಿಕ ದೌರ್ಜನ್ಯ ತಡೆಗೆ ಸಂಬಂಧಿಸಿದ ವಿಷಯಗಳ ಮೇಲೂ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ಯಾರು ಅಮರಾಂತಾ ಹ್ಯಾಂಕ್?
ಕೊಲಂಬಿಯಾದ (Colombia) ಕುಕುಟಾ ನಗರದಲ್ಲಿ ಜನಿಸಿದ ಅಮರಾಂತಾ ಹ್ಯಾಂಕ್, ಎಡಪಂಥೀಯ ಹಿಸ್ಟೋರಿಕ್ ಪ್ಯಾಕ್ಟ್ (Historic Pact for Colombia) ಮೈತ್ರಿಕೂಟದ ಪರವಾಗಿ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೊಲಂಬಿಯಾ ರಾಜಕೀಯದಲ್ಲಿ ಅತ್ಯಂತ ಚರ್ಚೆಗೆ ಕಾರಣವಾದ ನಾಯಕರಲ್ಲಿ ಒಬ್ಬರಾಗಿ ಅಮರಾಂತಾ ಗುರುತಿಸಿಕೊಂಡಿದ್ದಾರೆ.
ಕೊಲಂಬಿಯಾದ ರಾಷ್ಟ್ರೀಯ ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಹಿಸ್ಟೋರಿಕ್ ಪ್ಯಾಕ್ಟ್ ಪಕ್ಷವು ದೇಶದ ಅತ್ಯಂತ ದೊಡ್ಡ ರಾಜಕೀಯ ಶಕ್ತಿಯಾಗಿದೆ. ಕಳೆದ ಮಾರ್ಚ್ 8ರಂದು ನಡೆದ ಚುನಾವಣೆಯಲ್ಲಿ ಈ ಮೈತ್ರಿಕೂಟವು ಸುಮಾರು 22.72 ಶೇಕಡವಾರು ಮತಗಳನ್ನು ಪಡೆದು 25 ಸೆನೆಟ್ ಸ್ಥಾನಗಳನ್ನ ಗೆದ್ದುಕೊಂಡಿದೆ. ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಓಮಾನಾ 23ನೇ ಸ್ಥಾನದಲ್ಲಿದ್ದರು.
ಓಮಾನಾ ರಾಜಕೀಯ ಪ್ರವೇಶವು ಕೊಲಂಬಿಯಾದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ರಾಜಕೀಯದಲ್ಲಿ ಹೊಸ ಬದಲಾವಣೆಯ ಸಂಕೇತವೆಂದು ಸ್ವಾಗತಿಸಿದ್ರೆ, ಕೆಲವರು ಆಕೆಯ ಸೆಕ್ಸ್ ಉದ್ಯಮದ ಹಿನ್ನೆಲೆ ರಾಜಕೀಯಕ್ಕೆ ಸೂಕ್ತವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸೆಕ್ಸ್ ಉದ್ಯಮದಿಂದ ಅನೇಕ ಪಾಠ ಕಲಿತಿದ್ದೇನೆ
ಆದ್ರೆ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಅಮರಾಂತಾ ಹ್ಯಾಂಕ್, ನನ್ನ ಹಿಂದಿನ ವೃತ್ತಿ ರಾಜಕೀಯ ಸೇವೆಗೆ ಅಡ್ಡ ಬರಲ್ಲ. ಸೆಕ್ಸ್ ಉದ್ಯಮದಲ್ಲಿ ಕೆಲಸ ಮಾಡಿದ್ದರಿಂದ ಅಸಮಾನತೆ, ಸಾಮಾಜಿಕ ವಾಸ್ತವ್ಯ ಮತ್ತು ಬದುಕಿನ ಹೋರಾಟಗಳ ಬಗ್ಗೆ ಅಮೂಲ್ಯ ಪಾಠಗಳನ್ನ ಕಲಿತ್ತಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಹಿಂದೆ ಮಾಡಿದ್ದ ತಪ್ಪನ್ನ ಕ್ಷಮಿಸಬೇಕು, ಈಗ ನನ್ನನ್ನ ಉತ್ತಮ ವ್ಯಕ್ತಿಯೆಂದು ಭಾವಿಸಬೇಕು ಎಂದರ್ಥವಲ್ಲ. ನನ್ನನ್ನೂ ಇತರ ಸಹದ್ಯೋಗಿಗಳಲ್ಲಿ ಒಬ್ಬರೆಂದು ಭಾವಿಸಿದ್ರೆ ಸಾಕು ಎಂದು ಕೇಳಿಕೊಂಡಿದ್ದಾರೆ.
ಇದೇ ವೇಳೆ ಲೈಂಗಿಕ ಉದ್ಯಮ ದೇಶದ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆಯನ್ನೂ ಅವರು ಪ್ರಸ್ತಾಪಿಸಿದ್ದಾರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರು ದೇಶದ ಆರ್ಥಿಕತೆ ಮತ್ತು ಜಿಡಿಪಿಗೆ ಮಹತ್ವದ ಕೊಡುಗೆ ನೀಡುವುದರ ಜೊತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಿ ಉದ್ಯೋಗ ಸೃಷ್ಟಿಸುತ್ತಾರೆ ಅವರು ಅಭಿಪ್ರಾಯಪಟ್ಟಿದ್ದಾರೆ.
ನನ್ನ ಮುಂದಿನ ಪ್ರಮುಖ ಯೋಜನೆಗಳಲ್ಲಿ ಲೈಂಗಿಕ ಉದ್ಯಮಕ್ಕೆ ಸಮಗ್ರ ಕಾನೂನು ನಿಯಂತ್ರಣ ವ್ಯವಸ್ಥೆ ರೂಪಿಸುವುದು ಒಂದಾಗಿದೆ. OnlyFans ಸೇರಿದಂತೆ ಡಿಜಿಟಲ್ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುವವರಿಗೂ ಕಾನೂನುಬದ್ಧ ರಕ್ಷಣೆ ಒದಗಿಸುವ ಉದ್ದೇಶವೂ ಇದೆ ಎಂದಿದ್ದಾರೆ.
