ಉಡುಪಿ: ರಾಜ್ಯಾದ್ಯಂತ ಖಾಸಗಿ ಬಸ್ ಪ್ರಯಾಣಿಕರಿಗೆ ಮಂಗಳವಾದಿಂದ (ಜೂ.9) ಟಿಕೆಟ್ ದರ ಏರಿಕೆಯ ಬಿಸಿ ತಟ್ಟಲಿದೆ. ಖಾಸಗಿ ಮಜಲು ವಾಹನ ಬಸ್‌ಗಳ ಪ್ರಯಾಣ ದರವನ್ನು ಶೇ. 5ರಿಂದ 8ರಷ್ಟು ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರ ಜಾರಿಗೆ ಬರಲಿದೆ. ಡೀಸೆಲ್ ದರ ಏರಿಕೆ, ವಾಹನ ನಿರ್ವಹಣಾ ವೆಚ್ಚ ಹೆಚ್ಚಳ ಹಾಗೂ ನೌಕರರ ವೇತನದ ಒತ್ತಡದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಉಡುಪಿಯಲ್ಲಿ (Udupi) ರಾಜ್ಯ ಖಾಸಗಿ ಮಜಲು ವಾಹನ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ, ಕಳೆದ ಕೆಲ ವರ್ಷಗಳಿಂದ ಡೀಸೆಲ್ ದರದಲ್ಲಿ ನಿರಂತರ ಏರಿಕೆ ಕಂಡುಬಂದಿದ್ದು, ಟೈರ್, ಬಿಡಿಭಾಗ, ದುರಸ್ತಿ ಹಾಗೂ ದೈನಂದಿನ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ಇದರಿಂದ ಬಸ್ ಉದ್ಯಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರದ 2020ರ ಅಧಿಸೂಚನೆ ಅನ್ವಯ ದರ ಹೆಚ್ಚಳಕ್ಕೆ ಅನುಮೋದನೆ ದೊರೆತಿದ್ದು, ಜೂನ್ 9ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು.
ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರಯಾಣ ದರ ರಿಯಾಯಿತಿ ಎಂದಿನಂತೆ ಮುಂದುವರಿಯಲಿದ್ದು, ವಿದ್ಯಾರ್ಥಿಗಳ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಒಟ್ಟಾರೆ ಖಾಸಗಿ ಬಸ್ ಪ್ರಯಾಣ ದರ ಏರಿಕೆಯಿಂದ ಸಾರ್ವಜನಿಕರ ಖರ್ಚು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
