ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದ್ದು, ಬೆಂಗಳೂರು ಅಭಿವೃದ್ಧಿ (Bengaluru Urban Development) ಖಾತೆ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಅಸಮಾಧಾನ ಈಗ ದೆಹಲಿ ಅಂಗಳ ತಲುಪಿದೆ. ತಮಗೆ ನೀಡಿರುವ ಬೆಂಗಳೂರು ಅಭಿವೃದ್ಧಿ ಇಲಾಖೆಯಲ್ಲಿ ಪ್ರಮುಖ ವಿಭಾಗಗಳೇ ಇಲ್ಲದಿರುವುದಕ್ಕೆ ಅಸಮಾಧಾನಗೊಂಡಿರುವ ಸಚಿವ ಕೃಷ್ಣ ಬೈರೇಗೌಡ(Krishna Byre Gowda) ಅವರು, ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ತುರ್ತಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ನೇರವಾಗಿ ಭೇಟಿಯಾಗಿ ಸಚಿವ ಸ್ಥಾನದ ವ್ಯಾಪ್ತಿಯ ಹಕ್ಕು ಮಂಡಿಸಲು ಅವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಸಮಾಧಾನಕ್ಕೆ ಕಾರಣವೇನು?
ಹೈಕಮಾಂಡ್ ಸೂಚನೆಯಂತೆ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ಅಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಇಲಾಖೆಯ ಪ್ರಮುಖ ಅಂಗಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ಸೇರಿದಂತೆ ಪ್ರಮುಖ ವಿಭಾಗಗಳನ್ನು ಬೆಂಗಳೂರು ಅಭಿವೃದ್ಧಿ ಸಚಿವರಿಗೆ ವಹಿಸಿಕೊಟ್ಟಿಲ್ಲ. ಪ್ರಮುಖ ಇಲಾಖೆಗಳೇ ಕೈ ತಪ್ಪಿರುವುದರಿಂದ ಬೇಸತ್ತಿರುವ ಕೃಷ್ಣ ಬೈರೇಗೌಡ ಅವರು ಈವರೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನದ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಸಂಪುಟ ಸಹೋದ್ಯೋಗಿಗಳಿಂದಲೇ ಮೂಡಿಬರುತ್ತಿರುವ ಈ ಅಸಮಾಧಾನವು, ಸರ್ಕಾರದ ಪಾಲಿಗೆ ಮೂರನೇ ಬಂಡಾಯದ ಬಾವುಟವೇ? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ತಮಗೆ ನೀಡಲಾಗಿರುವ ಇಲಾಖೆಯಲ್ಲಿ ಪ್ರಮುಖ ಇಲಾಖೆಗಳೇ ಇಲ್ಲದಿರುವುದನ್ನು ಮತ್ತು ಖಾತೆಯ ವ್ಯಾಪ್ತಿಯನ್ನು ಕಡಿತಗೊಳಿಸಿರುವುದನ್ನು ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಅವರ ಗಮನಕ್ಕೆ ತರುವುದು. ಜೊತೆಗೆ ಇಲಾಖೆಯ ಪೂರ್ಣ ಜವಾಬ್ದಾರಿಯ ಹಕ್ಕನ್ನು ತಮಗೆ ನೀಡುವಂತೆ ಒತ್ತಾಯಿಸುವುದು ಕೃಷ್ಣ ಬೈರೇಗೌಡ ಅವರ ಮುಖ್ಯ ಉದ್ದೇಶವಾಗಿದೆ.
ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ದೆಹಲಿಗೆ ತೆರಳಿದ ಕೃಷ್ಣ ಬೈರೇಗೌಡ ಅವರ ಮುಂದಿನ ನಡೆ ಹಾಗೂ ಹೈಕಮಾಂಡ್ ನೀಡಲಿರುವ ಭರವಸೆಯ ಮೇಲೆ ಇಡೀ ರಾಜ್ಯ ರಾಜಕಾರಣದ ಕಣ್ಣು ನೆಟ್ಟಿದೆ.
