ಈ ಹಿಂದೆ ದಾರಿ ಯಾವುದಯ್ಯ ವೈಕುಂಠಕೆ ಚಿತ್ರದ ಮೂಲಕ ನಿರ್ದೇಶಕರಾಗಿ ಮನ್ನಣೆ ಗಳಿಸಿಕೊಂಡಿದ್ದವರು (Siddu Poornachandra) ಸಿದ್ದು ಪೂರ್ಣಚಂದ್ರ. ಈ ಮೂಲಕ ನಿರ್ದೇಶಕನಾಗಿ ತನ್ನದು ಭಿನ್ನ ಪಥ ಎಂಬ ಸಂದೇಶ ರವಾನಿಸಿದ್ದ ಅವರು, ಮತ್ತೊಂದು ಸೂಕ್ಷ್ಮ ಕಥನಕ್ಕೆ ದೃಶ್ಯರೂಪ ನೀಡಿದ್ದಾರೆ. ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ಒಳತೋಟಿಗೆ ಕಣ್ಣಾದ ಆ ಕಥನವೀಗ ಬ್ರಹ್ಮಕಮಲ (Brahma Kamala) ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಗೆ ಅಣಿಗೊಂಡಿದೆ. ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡು, ಪ್ರೇಕ್ಷಕರ ವಲಯದಲ್ಲಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ.

ಸಾಮಾನ್ಯವಾಗಿ ಜನಪ್ರಿಯ ಅಲೆಗಳ ಸುತ್ತಲೇ ಸಿನಿಮಾ ನಿರ್ಮಾತೃಗಳ, ಪ್ರೇಕ್ಷಕರ ಚಿತ್ತ ನೆಟ್ಟಿರುತ್ತದೆ. ಆದರೆ, ಅದರ ಜೊತೆಜೊತೆಗೇ ಹೊಸಾ ಅಲೋಚನೆಯ, ಭಿನ್ನ ಕಥನಗಳು ಹುರಿಗೊಳ್ಳದಿದ್ದರೆ ಸಿನಿಮಾ ರಂಗ ನಿಂತ ನೀರಾಗುವ ಅಪಾಯವಿದೆ. ಅಂಥಾ ಅಪಾಯವೊಂದನ್ನು ದಾಟಿಕೊಳ್ಳುವ ವಾಹಕವಾಗಿ ಬ್ರಹ್ಮಕಮಲ ಚಿತ್ರದ ಟ್ರೈಲರ್ ಇದೀಗ ಚರ್ಚೆ ಹುಟ್ಟು ಹಾಕಿದೆ. ಹೆಣ್ಣು ಸಂಸಾರದ ಕಣ್ಣು ಎಂಬುದು ಪ್ರಸಿದ್ಧ ನಾಣ್ಣುಡಿ. ಆದರೆ, ಆ ಕಣ್ಣಲ್ಲಿ ಜಿನುಗುವ ಸುಪ್ತ ನೋವುಗಳನ್ನು ಗ್ರಹಿಸುವ ವ್ಯವಧಾನ ಈ ಸಮಾಜಕ್ಕಿದ್ದಂತಿಲ್ಲ. ಅಂಥಾದ್ದೊಂದು ಸೂಕ್ಷ್ಮ ಕಥನದೊಂದಿಗೆ ಈ ಸಿನಿಮಾವನ್ನು ಸಿದ್ದು ಪೂರ್ಣಚಂದ್ರ ರೂಪಿಸಿದ್ದಾರಂತೆ. ಅದರ ಸೂಕ್ಷ್ಮ ಅಂಶಗಳು ಸದರಿ ಟ್ರೈಲರ್ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿವೆ.ನಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಘಟಿಸುವ ಒಂದು ರಾತ್ರಿಯ ಕಥೆ ಬ್ರಹ್ಮಕಮಲವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬ್ರಹ್ಮ ಕಮಲಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಮೂರು ಮೂರು ಪ್ರದರ್ಶನಗಳನ್ನು ಕಂಡಿದೆ. ಇಂಥಾ ಚಿತ್ರವೀಗ ಟ್ರೈಲರ್ ಮೂಲಕ ಸದ್ದು ಮಾಡಲಾರಂಭಿಸಿದೆ. ಇದನ್ನೂ ಓದಿ: ಹೀರೋ ಆದ ಮ್ಯೂಸಿಕ್ ಮಾಂತ್ರಿಕ ಡಿಎಸ್‌ಪಿ- ಯಲ್ಲಮ್ಮ ಸಿನಿಮಾ ಫಸ್ಟ್ ಲುಕ್ ರಿಲೀಸ್
ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿರುವ ಈ ಸಿನಿಮಾ ಪೂರ್ಣ ಚಂದ್ರ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಅದ್ವಿತಿ ಶೆಟ್ಟಿ, ಋತು ಚೈತ್ರ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾಹುತ್, ಪ್ರಮೀಳಾ ಸುಬ್ರಮಣ್ಯ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಲೋಕೇಂದ್ರ ಸೂರ್ಯ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪು ಸಂಕಲನ, ನಾಗರತ್ನ ಕೆ.ಹೆಚ್ ನಿರ್ಮಾಣ ನಿರ್ವಹಣೆಯಲ್ಲಿ ಬ್ರಹ್ಮಕಮಲ ರೂಪುಗೊಂಡಿದೆ. ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಈ ಚಿತ್ರದ ಬಿಡುಗಡೆ ದಿನಾಂಕ ಶೀಘ್ರದಲ್ಲಿಯೇ ಜಾಹೀರಾಗಲಿದೆ. ಇದನ್ನೂ ಓದಿ: ʼWait is Overʼ – ಬಿಗ್‌ಬಾಸ್ ಪ್ರೋಮೋ ಔಟ್.. ಬ್ಲ್ಯಾಕ್ ಸೂಟ್‌ನಲ್ಲಿ ಹೊಸ ಸೀಸನ್‌ಗೆ ರೆಡಿ ಎಂದ ಕಿಚ್ಚ
