ನವದೆಹಲಿ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಶಿವಸೇನೆ (UBT) ವಿಭಜನೆಯ ಚರ್ಚೆ ಜೋರಾಗಿದೆ. ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರಿಗೆ ದೊಡ್ಡ ಹಿನ್ನಡೆಯಾಗುವ ಬೆಳವಣಿಗೆಯೊಂದು ನಡೆದಿದ್ದು, ಪಕ್ಷದ ಆರು ಲೋಕಸಭಾ ಸಂಸದರು ಸಂಸದೀಯ ಸಭೆಗೆ ಗೈರಾಗಿದ್ದಾರೆ.
ಶಿವಸೇನೆ (UBT) ಪಕ್ಷದ ಒಟ್ಟು ಒಂಬತ್ತು ಲೋಕಸಭಾ ಸದಸ್ಯರ ಪೈಕಿ ಕೇವಲ ಮೂವರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು. ಅನಿಲ್ ದೇಸಾಯಿ, ಅರವಿಂದ ಸಾವಂತ್ ಮತ್ತು ರಾಜಾಭಾವು ಪರಾಗ್ ಪ್ರಕಾಶ್ ವಾಜೆ ಸಭೆಗೆ ಹಾಜರಾಗಿದ್ದರು. ಆದರೆ ಸಂಜಯ್ ಜಾಧವ್, ಭೌಸಾಹೇಬ್ ವಾಕ್ಚೌರೆ, ಓಂರಾಜೆ ನಿಂಬಾಳ್ಕರ್, ಸಂಜಯ್ ದಿನ ಪಾಟೀಲ್, ಸಂಜಯ್ ದೇಶಮುಖ್ ಹಾಗೂ ನಾಗೇಶ್ ಪಾಟೀಲ್ ಅಷ್ಟಿಕರ್ ಸಭೆಗೆ ಗೈರಾಗಿದ್ದರು.ಇದನ್ನೂ ಓದಿ: ʻದೀದಿʼಗೆ ಹಿನ್ನಡೆ – ವಿಪಕ್ಷ ನಾಯಕನಾಗಿ ಬಂಡಾಯ ನಾಯಕ ಋತಬ್ರತ ಬ್ಯಾನರ್ಜಿ ಆಯ್ಕೆ
ಗೈರಾದ ಆರು ಸಂಸದರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರ ನಡುವೆ ಸಭೆಗೆ ಗೈರಾದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಉದ್ಧವ್ ಸೇನಾ ನಾಯಕತ್ವ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.
ಸಭೆಗೂ ಮುನ್ನ ಮಾತನಾಡಿದ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ರಾವತ್, ಯಾರು ಬರುತ್ತಾರೋ ಅವರು ನಮ್ಮವರು, ಯಾರು ಬರುವುದಿಲ್ಲವೋ ಅವರು ದ್ರೋಹಿಗಳು ಎಂದು ಕಿಡಿಕಾರಿದರು. ಈ ಬೆಳವಣಿಗೆ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ರಾಜಕೀಯ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಒಮ್ಮೆ ವಿಭಜನೆಯಾಗಿತ್ತು. ಇದೀಗ ಮತ್ತೆ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗುತ್ತಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಕೇಸ್ – ಎಸ್‌ಐಟಿಯಿಂದ 42 ಜನರ ವಿಚಾರಣೆ
