ಮಧ್ಯಪ್ರಾಚ್ಯ ಸಂಘರ್ಷದಿಂದ ಈಗಾಗಲೇ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಪರಿಣಾಮವಾಗಿ ತೈಲಕ್ಕಾಗಿ ಕೊಲ್ಲಿ ರಾಷ್ಟ್ರಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದ ಭಾರತದಂತಹ ರಾಷ್ಟ್ರಗಳಿಗೆ ಇದರ ಬಿಸಿ ತಟ್ಟಿದೆ. ಈ ಹೊತ್ತಿನಲ್ಲೇ ಜಗತ್ತಿಗೆ ಯುಎಇ (UAE) ಮತ್ತೊಂದು ಶಾಕ್ ಕೊಟ್ಟಿದೆ. ಒಪೆಕ್‌ನಿಂದ (OPEC) ಹೊರಬರುವುದಾಗಿ ಯುಎಇ ಘೋಷಿಸಿದೆ. ಯುನೈಟೆಡ್ ಅರಬ್ ಎಮಿರೆಟ್ಸ್‌ನ ಈ ತೀರ್ಮಾನ, ಜಾಗತಿಕ ತೈಲ ಆಮದಿನ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಬಹುದೆಂಬ ಆತಂಕ ಮನೆಮಾಡಿದೆ. ಏನಿದು ಒಪೆಕ್? ಇದರಿಂದ ಯುಎಇ ಹೊರಬಂದಿದ್ದೇಕೆ? ತೈಲ ಮಾರುಕಟ್ಟೆ ಮೇಲೆ ಇದರ ಎಫೆಕ್ಟ್ ಏನು? ಭಾರತಕ್ಕಿದು ಲಾಭವೇ ಅಥವಾ ನಷ್ಟವೇ ಎಂಬ ಅನೇಕ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಏನಿದು ಒಪೆಕ್?
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟವೇ ‘ಒಪೆಕ್’. ಈ ಗುಂಪಿನಲ್ಲಿ ಯುಎಇ, ಇರಾಕ್, ಇರಾನ್, ಸೌದಿ ಅರೇಬಿಯಾ, ಕುವೈತ್, ಲಿಬಿಯಾ, ವೆನೆಜುವೆಲಾ ಸೇರಿದಂತೆ 13 ತೈಲ ಉತ್ಪಾದಕ ರಾಷ್ಟçಗಳಿವೆ. ವಿಶ್ವದ ಒಟ್ಟು ತೈಲ ಉತ್ಪಾದನೆಯಲ್ಲಿ ಸುಮಾರು 38% ರಷ್ಟನ್ನು ಈ ದೇಶಗಳೇ ನಿಯಂತ್ರಿಸುತ್ತವೆ. ಅಂದರೆ, ದಿನಕ್ಕೆ ಸುಮಾರು 3.5 ಕೋಟಿ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ಈ ದೇಶಗಳಿಂದಲೇ ರಫ್ತಾಗುತ್ತದೆ. ಇದನ್ನೂ ಓದಿ: ಒಪೆಕ್ ಒಕ್ಕೂಟಕ್ಕೆ ಗುಡ್ ಬೈ – ತೈಲ ಮಾರುಕಟ್ಟೆಯಲ್ಲಿ ‘ದುಬೈ’ ಸ್ವತಂತ್ರ ಆಟ ಶುರು| ಸೌದಿ ಜೊತೆ ಯುಎಇ ಕಿತ್ತಾಟ ಯಾಕೆ?

ಯುಎಇ ಒಪೆಕ್ ಸೇರಿದ್ಯಾವಾಗ?
1960 ರ ಸೆಪ್ಟೆಂಬರ್‌ನಲ್ಲಿ ಇರಾಕ್‌ನಲ್ಲಿ ನಡೆದ ಬಾಗ್ದಾದ್ ಸಮ್ಮೇಳನದಲ್ಲಿ OPEC ಅನ್ನು ಸ್ಥಾಪಿಸಲಾಯಿತು. ಇರಾನ್, ಕುವೈತ್, ಇರಾಕ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ ಇದರ ಐದು ಸ್ಥಾಪಕ ಸದಸ್ಯ ರಾಷ್ಟ್ರಗಳು. ಒಪೆಕ್ ರಚನೆಗೂ ಮೊದಲು, ಪಾಶ್ಚಿಮಾತ್ಯ ಬಹುರಾಷ್ಟ್ರೀಯ ತೈಲ ಕಂಪನಿಗಳು (ಸೆವೆನ್ ಸಿಸ್ಟರ್ಸ್) ತೈಲ ಉತ್ಪಾದಿಸುವ ರಾಷ್ಟ್ರಗಳಿಗೆ ಪಾವತಿ ಬೆಲೆಗಳನ್ನು ನಿರ್ದೇಶಿಸುತ್ತಿದ್ದವು. ಈ ಪ್ರಾಬಲ್ಯದಿಂದ ಹೊರಬರಲು OPEC ರಚಿಸಲಾಯಿತು. ಸದಸ್ಯ ರಾಷ್ಟ್ರಗಳ ಪೆಟ್ರೋಲಿಯಂ ನೀತಿಗಳನ್ನು ಸಂಘಟಿಸುವುದು ಇದರ ಮುಖ್ಯ ಉದ್ದೇಶವಾಯಿತು. 1967 ರಲ್ಲಿ UAE ಔಪಚಾರಿಕವಾಗಿ ಈ ಮೈತ್ರಿಕೂಟಕ್ಕೆ ಸೇರಿತು.
ಒಪೆಕ್+ ರಚನೆ
2016 ರಲ್ಲಿ OPEC+ ಎಂಬ ವಿಶಾಲ ಮೈತ್ರಿಕೂಟವನ್ನು ರಚಿಸಲಾಯಿತು. ಇದರಲ್ಲಿ 10 ಪ್ರಮುಖ OPEC ಅಲ್ಲದ ಉತ್ಪಾದಕ ರಾಷ್ಟ್ರಗಳು (ರಷ್ಯಾ ನೇತೃತ್ವದಲ್ಲಿ) ಇವೆ. US ನ ಉತ್ಕರ್ಷದ ಶೇಲ್ ತೈಲ ಉತ್ಪಾದನೆಗೆ ಕೌಂಟರ್ ಆಗಿ OPEC+ ವಿಶ್ವದ ಕಚ್ಚಾ ತೈಲದ ಸರಿಸುಮಾರು 40% ಅನ್ನು ಉತ್ಪಾದಿಸುತ್ತದೆ. ಅಂತರರಾಷ್ಟ್ರೀಯವಾಗಿ ವ್ಯಾಪಾರ ಮಾಡುವ ಪೆಟ್ರೋಲಿಯಂನ 60% ಅನ್ನು ಹೊಂದಿದೆ ಎಂದು US ಇಂಧನ ಮಾಹಿತಿ ಆಡಳಿತ (EIA) ತಿಳಿಸಿದೆ. ಇದನ್ನೂ ಓದಿ: Iran War| ನಾಳೆಗೆ 60 ದಿನಗಳ ಡೆಡ್‌ಲೈನ್ ಅಂತ್ಯ – ಸಂಕಷ್ಟದಲ್ಲಿ ಟ್ರಂಪ್!
ಜಾಗತಿಕ ಮಾರುಕಟ್ಟೆಯಲ್ಲಿ ಒಪೆಕ್‌ನ ಪಾತ್ರ ಏನು?
ಕೇಂದ್ರ ಬ್ಯಾಂಕ್‌ನಂತೆಯೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಒಪೆಕ್ ಪ್ರಮುಖ ಪಾತ್ರ ವಹಿಸುತ್ತದೆ. OPEC ತೈಲ ಪೂರೈಕೆ ನಿರ್ವಹಣೆಯ ಮೇಲಿನ ಅಧಿಕಾರ ಹೊಂದಿದೆ. OPEC ಉತ್ಪಾದನಾ ಮಿತಿಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಅದರ ಪ್ರತಿಯೊಂದು ಸದಸ್ಯ ರಾಷ್ಟ್ರಗಳಿಗೆ ಕಟ್ಟುನಿಟ್ಟಾದ ಕೋಟಾಗಳನ್ನು ನಿಗದಿಪಡಿಸಿ ತೈಲ ಬೆಲೆಗಳನ್ನು ನಿರ್ವಹಿಸುತ್ತದೆ. OPEC ನಿಗದಿಪಡಿಸಿದ ಮಿತಿಗಳನ್ನು ಅವಲಂಬಿಸಿ ಸದಸ್ಯ ರಾಷ್ಟ್ರವು ತೈಲ ಉತ್ಪಾದನೆ ಮಾಡಬೇಕು. ಅದಕ್ಕಾಗಿ ಕೋಟಾ ನಿಯಮವನ್ನು ಜಾರಿಗೊಳಿಸಲಾಗಿದೆ.

ಒಪೆಕ್‌ನಿಂದ ಯುಎಇ ಔಟ್!
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟದಿಂದ (ಒಪೆಕ್) ಹೊರಬರುವುದಾಗಿ ಯುಎಇ ಘೋಷಿಸಿದೆ. ಈ ನಿರ್ಧಾರವು ಮೇ 1 ರಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಜಾಗತಿಕ ತೈಲ ಮಾರುಕಟ್ಟೆ ಯುದ್ಧದಿಂದ ತತ್ತರಿಸಿರುವ ಹೊತ್ತಲ್ಲೇ ಈ ಘೋಷಣೆ ಮಾಡಿರುವುದು ಮತ್ತಷ್ಟು ಆಘಾತ ಉಂಟುಮಾಡಿದೆ. ಕಚ್ಚಾ ತೈಲ ಉತ್ಪಾದನೆಗೆ ಕೋಟಾ ನಿಗದಿಪಡಿಸಿದ ಒಪೆಕ್ ಕ್ರಮದ ಬಗ್ಗೆ ಈ ಹಿಂದೆಯೇ ಯುಎಇ ಅಸಮಾಧಾನ ಹೊರಹಾಕಿತ್ತು. ರಾಷ್ಟ್ರ ಹಿತಾಸಕ್ತಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುಎಇ ತಿಳಿಸಿದೆ.
ಎಫೆಕ್ಟ್ ಏನು?
ಒಪೆಕ್ ಒಕ್ಕೂಟದಿಂದ ಯುಎಇ ಹೊರಬಂದಿರುವುದು ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ. ಇದು ಒಪೆಕ್ ಒಕ್ಕೂಟದ ಶಕ್ತಿಯನ್ನು ಕುಗ್ಗಿಸುತ್ತದೆ. ಒಪೆಕ್ ಒಕ್ಕೂಟ ರಾಷ್ಟ್ರಗಳ ಒಟ್ಟು ಉತ್ಪಾದನೆಯಲ್ಲಿ ಶೇ.15 ಪಾಲನ್ನು ಯುಎಇ ಹೊಂದಿತ್ತು. ಈಗ ಹೊರಬಂದಿರುವುದರಿಂದ ಒಕ್ಕೂಟ ವ್ಯವಸ್ಥೆಯನ್ನೇ ದುರ್ಬಲಗೊಳಿಸಿದಂತಾಗಲಿದೆ. ಇನ್ಮುಂದೆ ಯುಎಇ ಸ್ವತಂತ್ರವಾಗಿ ತೈಲ ಪೂರೈಕೆ ಆರಂಭಿಸಬಹುದು. ಇದರಿಂದ ಬೆಲೆಯಲ್ಲಿ ಕುಸಿತವಾಗಬಹುದು.
ಯುಎಇ ನಿರ್ಧಾರಕ್ಕೂ ಇರಾನ್ ಯುದ್ಧಕ್ಕೂ ನಂಟಿದೆಯಾ?
ಯುದ್ಧಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯುಎಇ ಒಪೆಕ್ ಮತ್ತು ಒಪೆಕ್+ ಸದಸ್ಯರ ನಡುವೆ, ವಿಶೇಷವಾಗಿ ಸೌದಿ ಅರೇಬಿಯಾ ಜೊತೆ ಹಲವಾರು ವರ್ಷಗಳಿಂದ ಭಿನ್ನಾಭಿಪ್ರಾಯ ಹೊಂದಿದೆ. 2025 ರಲ್ಲಿ UAE OPEC ನ ನಾಲ್ಕನೇ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿತ್ತು. ಸದಸ್ಯ ರಾಷ್ಟ್ರಗಳ ತೈಲ ಉತ್ಪಾದನೆಯ 11% ಕ್ಕಿಂತ ಹೆಚ್ಚು ಪಾಲನ್ನು ಇದು ಹೊಂದಿತ್ತು. ಸೌದಿ ಅರೇಬಿಯಾ, ಇರಾಕ್ ಮತ್ತು ಇರಾನ್‌ಗೆ ಹೋಲಿಸಿದರೆ ಕಡಿಮೆಯಿದೆ. ಕಚ್ಚಾ ತೈಲ ಉತ್ಪಾದನೆಗೆ ಕೋಟಾ ನಿಗದಿಪಡಿಸಿದ್ದರಿಂದ, ಯುಎಇ ತನ್ನ ಸಾಮರ್ಥ್ಯದ 3ನೇ ಎರಡರಷ್ಟು ಮಾತ್ರ ಉತ್ಪಾದಿಸಲು ಸೀಮಿತವಾಯಿತು. ಇದು ಯುಎಇ ಇಚ್ಛೆಗೆ ವಿರುದ್ಧವಾಯಿತು. ಹೀಗಾಗಿ, ಅದು ಒಪೆಕ್‌ನಿಂದ ಹೊರಬರಲು ನಿರ್ಧರಿಸಿತು.

ಯುಎಇ ಹೆಚ್ಚು ತೈಲ ಉತ್ಪಾದನೆಯನ್ನು ಏಕೆ ಬಯಸುತ್ತದೆ?
ತೈಲ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲು ಯುಎಇ ಹಲವು ವರ್ಷಗಳಿಂದ ಸಾವಿರಾರು ಕೋಟಿ ಡಾಲರ್ ಹೂಡಿಕೆ ಮಾಡುತ್ತಾ ಬಂದಿದೆ. 2027ರ ಹೊತ್ತಿಗೆ ದಿನಕ್ಕೆ 50 ಲಕ್ಷ ಬ್ಯಾರೆಲ್ ತೈಲ ಉತ್ಪಾದಿಸುವ ಗುರಿಯನ್ನು ಸಹ ಹೊಂದಿದೆ. ಈಗ ಇರಾನ್ ಯುದ್ಧವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಕೊರತೆಗೆ ಕಾರಣವಾಗಿದೆ. ಇದರಿಂದ ಬೆಲೆಗಳಲ್ಲಿ ಏರಿಕೆಯಾಗಿದೆ. ಈ ಹೊತ್ತಿನಲ್ಲಿ ತೈಲ ಬೆಲೆಯನ್ನು ನಿರ್ವಹಿಸಲು ಪ್ರಮುಖ ಉತ್ಪಾದಕರು ಉತ್ಪಾದನೆಯನ್ನು ನಿಯಂತ್ರಿಸುತ್ತಿದ್ದಾರೆ. ಆದರೆ, ಹೆಚ್ಚು ತೈಲ ಉತ್ಪಾದಿಸಲು ಬಯಸುವ ಯುಎಇ ಇದಕ್ಕೆ ಒಪ್ಪುತ್ತಿಲ್ಲ. ಜಾಗತಿಕ ತೈಲ ಬೆಲೆ ಏರಿಕೆಯಾದಾಗ ವ್ಯವಸ್ಥೆಯು ನವೀಕರಿಸಬಹುದಾದ ಇಂಧನ ಮೂಲಗಳ ಕಡೆ ಆಸಕ್ತಿ ತೋರಬಹುದು. ಇದರಿಂದ ತೈಲ ಬೆಲೆ ಕುಸಿತ ಆಗಬಹುದು. ಏಕಾಂಗಿಯಾಗಿಯೇ ತೈಲ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಯುಎಇ ಹಣಗಳಿಸುವ ಮತ್ತು ತನ್ನ ಮಾರುಕಟ್ಟೆ ಪಾಲನ್ನು ರಕ್ಷಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿತು. ದಿನಕ್ಕೆ ಸುಮಾರು 4.8 ಮಿಲಿಯನ್ ಬ್ಯಾರಲ್ (ಅಂದಾಜು 6.55 ಲಕ್ಷ ಟನ್) ಉತ್ಪಾದನಾ ಸಾಮರ್ಥ್ಯ ಹೊಂದಿರುವ ಯುಎಇ ಒಪೆಕ್‌ನಿಂದ ಹೊರಬರುವುದೇ ಉತ್ತಮ ಎಂದು ನಿರ್ಧರಿಸಿದೆ. ಇದನ್ನೂ ಓದಿ: 24 ಗಂಟೆಯಲ್ಲಿ ಇಸ್ರೇಲಿಗೆ ಅಮೆರಿಕದಿಂದ ಬಂತು 6,500 ಟನ್ ಯುದ್ಧಸಾಮಗ್ರಿ – ಮತ್ತೆ ಯುದ್ಧ ಆರಂಭ?
ತೈಲ ಬೆಲೆಗಳಲ್ಲಿ ಕುಸಿತ ಆಗುತ್ತಾ?
ಯುಎಇ ನಿರ್ಗಮನವು ಒಪೆಕ್‌ನ ಮಾರುಕಟ್ಟೆ ಪಾಲನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಇದರಿಂದ ಒಪೆಕ್+ ಸದಸ್ಯರು ಉತ್ಪಾದನೆಯನ್ನು ಸೀಮಿತಗೊಳಿಸುವ, ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ಕ್ರಮವನ್ನು ಇದು ದುರ್ಬಲಗೊಳ್ಳುತ್ತದೆ. ಇರಾನ್ ಯುದ್ಧ ಕೊನೆಗೊಂಡರೆ, ಪ್ರಮುಖ ಉತ್ಪಾದಕರಾದ ಒಪೆಕ್+, ಯುಎಇ ಮತ್ತು ಯುಎಸ್ ನಡುವೆ ಮಾರುಕಟ್ಟೆ ಪಾಲಿಗಾಗಿ ಪೈಪೋಟಿ ಹೆಚ್ಚಾಗಬಹುದು. ಇದು ತೈಲ ಬೆಲೆಗಳಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಬಹುದು. ಮುಂದಿನ ವರ್ಷಗಳಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಭಾರತಕ್ಕೆ ಲಾಭ?
ಪ್ರಮುಖ OPEC ಉತ್ಪಾದಕ ರಾಷ್ಟ್ರವೊಂದು (ಯುಎಇ) ಈಗ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಹಾದಿಯಲ್ಲಿದೆ. ಹಾರ್ಮುಜ್ ಜಲಸಂಧಿ ವಿವಾದ ಬಗೆಹರಿದ ನಂತರ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಅಗ್ಗದ ಮತ್ತು ಆರ್ಥಿಕ ಬ್ಯಾರೆಲ್‌ಗಳಿಗಾಗಿ ಯಾವಾಗಲೂ ಹುಡುಕುತ್ತಿರುವ ಭಾರತದಂತಹ ದೊಡ್ಡ ತೈಲ ಆಮದುದಾರರಿಗೆ, ಈ ಬೆಳವಣಿಗೆ ಸಕಾರಾತ್ಮಕವಾಗಿದೆ. ಭಾರತವು ವರ್ಷಕ್ಕೆ 1.8-2 ಶತಕೋಟಿ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. OPECನಿಂದ ಯುಎಇ ಹೊರಬಂದಿದೆ. ಭಾರತಕ್ಕೆ ಯುಎಇ ಪ್ರಮುಖ ಇಂಧನ ಪಾಲುದಾರನಾಗಿದೆ. ದ್ವಿಪಕ್ಷೀಯ ಒಪ್ಪಂದಗಳು ಉತ್ತಮ ಬೆಲೆಯಲ್ಲಿ ಭಾರತಕ್ಕೆ ತೈಲ ಖರೀದಿಗೆ ಸಹಕಾರಿಯಾಗಬಹುದು. ಮುಂದಿನ ವರ್ಷಗಳಲ್ಲಿ ನಿರೀಕ್ಷೆಗಳು ಹೆಚ್ಚು ರಚನಾತ್ಮಕವಾಗಿವೆ. OPEC ನಿರ್ಬಂಧಗಳ ಹೊರಗೆ ಯುಎಇ ಉತ್ಪಾದನೆಯನ್ನು ಹೆಚ್ಚಿಸಬಹುದು. ಅದೇ ಸಮಯದಲ್ಲಿ ಭಾರತದೊಂದಿಗಿನ ಇಂಧನ ಸಂಬಂಧಗಳು ಗಾಢವಾಗಿ ಬೆಳೆಯಬಹುದು ಎಂದು ಸರಕು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ Kpler ನ ಮಾಡೆಲಿಂಗ್ ಮತ್ತು ಸಂಸ್ಕರಣಾ ವ್ಯವಸ್ಥಾಪಕ ಸುಮಿತ್ ರಿಟೋಲಿಯಾ ತಿಳಿಸಿದ್ದಾರೆ.












