ಅಹಮದಾಬಾದ್: ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ಅಮೋಘ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಗುಜರಾತ್ ಟೈಟಾನ್ಸ್ (GT) ವಿರುದ್ಧದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗೆಲುವಿನ ಕೇಕೆ ಹಾಕಿದೆ. ಪಂದ್ಯದಲ್ಲಿ ಅಬ್ಬರಿಸಿದ ಕೊಹ್ಲಿ (Virat Kohli) ಕೇವಲ 25 ಎಸೆತಗಳಲ್ಲಿ 52 ರನ್ ಬಾರಿಸಿದರು. ಈ ಮೂಲಕ ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲೇ ಅತಿ ವೇಗದ ಅರ್ಧಶತಕ ಸಿಡಿಸಿದ ಹೊಸ ದಾಖಲೆ ಬರೆದಿದ್ದಾರೆ.
ಪಂದ್ಯದ ಬಳಿಕ ತಮ್ಮ ಈ ಸ್ಫೋಟಕ ಅರ್ಧಶತಕದ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೊಹ್ಲಿ, ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಚ್ಚು ಬೇಡಿಕೆ ಇದೆ. ಯುವ ಆಟಗಾರರು ನಮ್ಮನ್ನು ಮತ್ತಷ್ಟು ವೇಗವಾಗಿ ಆಡುವಂತೆ ತಳ್ಳುತ್ತಿದ್ದಾರೆ. ನಾನು ಕೇವಲ ಆಟವನ್ನು ಮಾತ್ರವಲ್ಲ, ನನ್ನ ಮನಸ್ಥಿತಿಯನ್ನೇ ಬದಲಿಸಿಕೊಂಡು ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡಿ ರನ್ ಕಲೆಹಾಕುವ ಅನಿವಾರ್ಯತೆ ಇತ್ತು ಎಂದು ಹೇಳಿದ್ದಾರೆ.
ಶೇ.90 ರಷ್ಟು ಆರ್‌ಸಿಬಿ ಫ್ಯಾನ್ಸ್:
ನರೇಂದ್ರ ಮೋದಿ ಕ್ರೀಡಾಂಗಣ ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನವಾಗಿರಬಹುದು, ಆದರೆ ಅಲ್ಲಿ ಶೇ.90 ರಷ್ಟು ಅಭಿಮಾನಿಗಳು ಆರ್‌ಸಿಬಿಗೆ ಸಪೋರ್ಟ್ ಮಾಡಲು ಬಂದಿದ್ದರು. ನಾವು ತವರಿನಲ್ಲಿ ಆಡುವುದು ಕೇವಲ 7 ಪಂದ್ಯಗಳಲ್ಲ; ಬದಲಿಗೆ ಇಡೀ ಋತುವಿನಲ್ಲಿ ಆಡುವ ಎಲ್ಲಾ 14 ಪಂದ್ಯಗಳ ಮೈದಾನಗಳು ಕೂಡ ನಮಗೆ ತವರು ಪಿಚ್‌ನಂತೆಯೇ ಭಾಸವಾಗುತ್ತವೆ. ಯಾಕೆಂದರೆ ನಮ್ಮನ್ನು ಬೆಂಬಲಿಸಲು ದೇಶದ ಎಲ್ಲಾ ಮೈದಾನಗಳಲ್ಲೂ ಅಭಿಮಾನಿಗಳು ಸದಾ ಇರುತ್ತಾರೆ ಎಂದು ಕೊಹ್ಲಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
Manifested. Delivered. 🤌👑
Year on year we see the chase master, #ViratKohli, reinvent himself on the biggest stage of them all! 🔥#TATAIPL 2026 Final pic.twitter.com/fJhIqNYAMP
— Star Sports (@StarSportsIndia) May 31, 2026
ಟೂರ್ನಿಯಲ್ಲಿ ತಂಡದ ಒಟ್ಟಾರೆ ಪ್ರದರ್ಶನದ ಬಗ್ಗೆ ಮಾತನಾಡಿದ ಕೊಹ್ಲಿ, ನಮಗೆ ಚೇಸಿಂಗ್ ಮಾಡುವಾಗ ಯಾವುದೇ ಆತಂಕವಿರಲಿಲ್ಲ. ನಮ್ಮ ತಂಡ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಅದ್ಭುತ ಆತ್ಮವಿಶ್ವಾಸ ಹೊಂದಿದೆ. ಚೇಸ್ ಮಾಡುವಾಗ ಹೇಗೆ ಆಡಬೇಕೆಂಬ ಸ್ಪಷ್ಟತೆ ನಮಗಿತ್ತು. ನಮ್ಮ ಮೊದಲ 10 ಪಂದ್ಯಗಳಲ್ಲಿ ಎಂಟು ಮಂದಿ ಬೇರೆ ಬೇರೆ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ತಂಡದಲ್ಲಿ ಇಂತಹ ಮ್ಯಾಚ್ ವಿನ್ನರ್‌ಗಳಿರುವುದರಿಂದ ಇನ್ಮುಂದೆ ನಮ್ಮ ಐಪಿಎಲ್ ಅಭಿಯಾನ ಇನ್ನಷ್ಟು ಸಲೀಸಾಗಲಿದೆ ಎಂದರು.
ನಾವು ಟ್ರೋಫಿ ಮುಟ್ಟಲು ತುಂಬಾ ಸಮಯ ಕಾಯಬೇಕಾಯಿತು. ಆದರೆ ನಮ್ಮ ತಂಡದಲ್ಲಿ ಈಗ ಜವಾಬ್ದಾರಿ ಹಂಚಿಕೊಳ್ಳುವ ಯುವ ಆಟಗಾರರು ಇರುವುದರಿಂದ ಹಿರಿಯರ ಮೇಲಿನ ಒತ್ತಡ ಕಡಿಮೆಯಾಗಿದೆ. ಕೃನಾಲ್ ಪಾಂಡ್ಯ, ರಸಿಕ್ ಸಲಾಂ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ಆಡಳಿತ ಮಂಡಳಿ ಅತ್ಯುತ್ತಮ ತಂಡವನ್ನು ಕಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: 41 ಕೋಟಿಯ ಬೌಲಿಂಗ್ ಬ್ರಿಗೇಡ್ ಸೂಪರ್ ಹಿಟ್: ಆರ್‌ಸಿಬಿಗೆ ಡಬಲ್ ಟ್ರೋಫಿ ತಂದುಕೊಟ್ಟ ಬೌಲರ್ಸ್
You are now watching back-to-back champions! Take a bow, #RCB! ⭐⭐#TATAIPL 2026 Final pic.twitter.com/xCs5FaYcLQ
— Star Sports (@StarSportsIndia) May 31, 2026
ನಾವು ಕಳೆದ ಬಾರಿ ಚಾಂಪಿಯನ್ಸ್ ಆದಾಗ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು, ಇದುವೇ ಕೊನೆಯಲ್ಲ, ನಾವು ಸತತವಾಗಿ ಇಂತಹ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದು ಹೇಳಿದ್ದರು. ಗುಜರಾತ್ ನೀಡಿದ್ದ ಗುರಿ ಬೆನ್ನಟ್ಟುವ ವೇಳೆ ನಾನು ವೆಂಕಟೇಶ್ ಅಯ್ಯರ್‌ಗೆ’ನಾವು ಪವರ್‌ಪ್ಲೇನಲ್ಲೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಬೇಕು ಎಂದು ಹೇಳಿದ್ದೆ. ನಮಗೆ ಆಟದ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇತ್ತು. ಎಲ್ಲಾ ಬ್ಯಾಟರ್‌ಗಳು ಸಹ ಉತ್ತಮ ಪ್ರದರ್ಶನ ನೀಡಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮತೋಲನ ಹೊಂದಿರುವುದು ನಮ್ಮ ಆತ್ಮವಿಶ್ವಾಸವನ್ನು ದುಪ್ಪಟ್ಟು ಮಾಡಿದೆ ಎಂದು ಕೊಹ್ಲಿ ಸಂತಸ ವ್ಯಕ್ತಪಡಿಸಿದರು.
ಕಳೆದ ವರ್ಷದಂತಹ ಯಾವುದೇ ಒತ್ತಡ ಈಗ ಇಲ್ಲ ಎಂದು ನಾನು ಕೆಲ ಆಟಗಾರರಿಗೆ ಹೇಳಿದ್ದೆ. ನಮ್ಮ ತಂಡದ ಸಾಮರ್ಥ್ಯದ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ನಾವು ನಮ್ಮ ಯೋಜನೆಗಳ ಪ್ರಕಾರ ಶಿಸ್ತಿನ ಆಟವಾಡಿದರೆ ನಮ್ಮದೇ ಅತ್ಯುತ್ತಮ ತಂಡವಾಗಿರುತ್ತದೆ. ಹೀಗಾಗಿಯೇ ಲೀಗ್ ಹಂತದ ಪಂದ್ಯಗಳಲ್ಲಿಯೂ ನಾವು ಪ್ರಾಬಲ್ಯ ಮೆರೆದು ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದೆವು. ಆಟಗಾರರ ಕೌಶಲ್ಯ ಮತ್ತು ಪ್ರಬುದ್ಧತೆಯೇ ಫೈನಲ್ ಪಂದ್ಯದ ಗೆಲುವಿಗೆ ಕಾರಣವಾಯಿತು” ಎಂದು ಹೆಮ್ಮೆಯಿಂದ ಹೇಳಿದರು. ಇದನ್ನೂ ಓದಿ: ನನಗೂ ಟೆಸ್ಟ್ ಕ್ರಿಕೆಟ್ ಆಡೋ ಆಸೆಯಿದೆ ಎಂದ ಸೂರ್ಯವಂಶಿ: ಟೀಮ್ ಇಂಡಿಯಾಕ್ಕೆ ಆಯ್ಕೆಯಾಗ್ತಾರಾ ಬಿಗ್ ಹಿಟ್ಟರ್?
