ಕೋಲಾರ: ಆಟವಾಡಲು ಹೋಗಿ ಕೃಷಿ ಹೊಂಡಕ್ಕೆ (Agricultural Pit) ಬಿದ್ದು ಇಬ್ಬರು ಮಕ್ಕಳು (Children) ಮೃತಪಟ್ಟಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ಬೊಡೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ವರದರಾಜು ಹಾಗೂ ಶ್ಯಾಮಲ ದಂಪತಿಯ ಪುತ್ರ ಕಾರ್ತಿಕ್ (8), ಬಾಬು ಹಾಗೂ ರೂಪ ದಂಪತಿಯ ಪುತ್ರಿ ತನುಶ್ರೀ (15) ಮೃತಪಟ್ಟಿದ್ದಾರೆ. ಅಜ್ಜಿ ಹಾಗೂ ತಾಯಿಯೊಂದಿಗೆ ತೋಟಕ್ಕೆ ತೆರಳಿದ್ದ ವೇಳೆ ಆಟವಾಡಲು ಹೋಗಿ ಪಕ್ಕದಲ್ಲಿದ್ದ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನು ತನುಶ್ರೀ ಇತ್ತೀಚೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.86 ರಷ್ಟು ಅಂಕ ಗಳಿಸಿದ್ದಳು. ಇದನ್ನೂ ಓದಿ: ಬಾಗಲಕೋಟೆ ಜಿಲ್ಲಾಸ್ಪತ್ರೆಯ ಬಾತ್‌ರೂಮ್‌ನಲ್ಲಿ ವಿಧವೆ ಮೇಲೆ ಅತ್ಯಾಚಾರ
ತನುಶ್ರೀ ಬಂಗಾರಪೇಟೆ ತಾಲೂಕಿನ ಡಿ.ಪಿ.ಹಳ್ಳಿಯ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಮೊದಲಿಗೆ ಕಾರ್ತಿಕ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದು, ಬಳಿಕ ರಕ್ಷಣೆಗೆ ತೆರಳಿದ ತನುಶ್ರೀ ಮುಳುಗಿ ಮೃತಪಟ್ಟಿದ್ದಾಳೆ. ತಾಲೂಕಿನ ನಲ್ಲಗುಟ್ಟಹಳ್ಳಿಯ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಕಾರ್ತಿಕ್, ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನು ಕಂಡ ತನುಶ್ರೀ, ಆತನನ್ನು ರಕ್ಷಿಸಲು ಹೊಂಡಕ್ಕೆ ಇಳಿದಿದ್ದಾಳೆ. ಇದನ್ನೂ ಓದಿ: ಶೃಂಗೇರಿ ನೂತನ ಶಾಸಕರಾಗಿ ಡಿ.ಎನ್.ಜೀವರಾಜ್ ಪ್ರಮಾಣವಚನ ಸ್ವೀಕಾರ
ಆದರೆ ನೀರಿನ ಆಳ ಅರಿಯದ ಕಾರಣ ಇಬ್ಬರೂ ಜಲಸಮಾಧಿಯಾಗಿದ್ದಾರೆ. ವಿಷಯ ತಿಳಿದ ತಕ್ಷಣ ಬಂಗಾರಪೇಟೆ ತಹಸೀಲ್ದಾರ್ ಕೆ.ಎನ್.ಸುಜಾತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ ಕೆ.ಎಂ. ಸ್ಥಳಕ್ಕೆ ಭೇಟಿ ನೀಡಿದರು. ಮಕ್ಕಳನ್ನು ಕಳೆದುಕೊಂಡು ಶೋಕತಪ್ತರಾದ ಪೋಷಕರಿಗೆ ಅಧಿಕಾರಿಗಳು ಸಾಂತ್ವನ ಹೇಳಿದರು. ಗ್ರಾಮದಲ್ಲಿ ಮೌನ ಆವರಿಸಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಎಣ್ಣೆ ಪಾರ್ಟಿ – ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪುಂಡರು

